‘ತಿಥಿ ಪೂಜಾ ಕಾರ್ಯ ತನಗೆ ನೀಡಿಲ್ಲ’ ಎನ್ನುವ ಕಾರಣಕ್ಕೆ ತಿಥಿ ಕಾರ್ಯಕ್ರಮ ನಡೆಯುತ್ತಿದ್ದ ಮನೆಗೆ ತೆರಳಿ ಪುರೋಹಿತರೊಬ್ಬರು ದಾಂಧಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿಯ ಕರ್ಜೆ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪುರೋಹಿತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಹೊಸೂರು ಗ್ರಾಮದ ರಾಘವೇಂದ್ರ ಎಂಬವರ ತಾಯಿ ಮೃತಪಟ್ಟಿದ್ದು, ಮೃತರ ಶ್ರಾದ್ದ ಕಾರ್ಯಕ್ರಮ ಮಾರ್ಚ್ 6ರಂದು ರಾಘವೇಂದ್ರ(46) ಅವರ ಮನೆಯಲ್ಲೇ ನೆರವೇರಿಸಲಾಗಿತ್ತು. ಆದರೆ, ಶ್ರಾದ್ಧ ಕಾರ್ಯಕ್ರಮಗಳು ಮುಗಿಯುತ್ತಿದ್ದಂತೆ ಮನೆಗೆ ಬಂದ ಅರ್ಚಕ ರಾಮಕೃಷ್ಣ(66) ಎಂಬವರು, ಯಾಕೆ ತಿಥಿ ಕಾರ್ಯದ ಪೂಜಾ ಕಾರ್ಯಗಳನ್ನು ತನಗೆ ನೀಡಿಲ್ಲ ಎಂದು ಪ್ರಶ್ನಿಸಿದ್ದಲ್ಲದೇ, ಮನೆಯವರನ್ನು ಅವಾಚ್ಯ ಪದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಕುಟುಂಬವನ್ನು ಸರ್ವನಾಶ ಮಾಡುತ್ತೇನೆ, ನಮ್ಮ ಎಂಜಲನ್ನು ತಿನ್ನಿಸದೇ ಬಿಡುವುದಿಲ್ಲ ಎಂದು ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ವೇಳೆ ಮನೆಯಲ್ಲಿದ್ದವರೊಬ್ಬರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ರಾಘವೇಂದ್ರ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಅರ್ಚಕ ರಾಮಕೃಷ್ಣ ಅವರು, ‘ನಿಮ್ಮ ಕುಟುಂಬನ್ನು ಸರ್ವನಾಶ ಮಾಡುತ್ತೇನೆ ‘ಎಂಬ ಬೆದರಿಕೆಗೆ ಭಯಗೊಂಡಿದ್ದಾರೆ. ಆ ಬಳಿಕ ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿ ವಿಡಿಯೋ ಕೂಡ ನೀಡಿದ್ದು, ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅರ್ಚಕ ರಾಮಕೃಷ್ಣ ಅವರ ವಿರುದ್ಧ, ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆ(ಅಟ್ರಾಸಿಟಿ)ಯ ಅಡಿಯಲ್ಲಿರುವ ಕಲಂ:447, 504, 506 ಐಪಿಸಿ ಮತ್ತು ಕಲಂ: 3(i)(r), 3(i)(s) SC/ST ACTನಂತೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
