ಕರ್ನಾಟಕದ ಉತ್ತರದ ಅಂಚಿನಲ್ಲಿರುವ ಬೀದರ್ ಲೋಕಸಭಾ ಕ್ಷೇತ್ರವು ಮಹಾರಾಷ್ಟ್ರ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಗಡಿ ಹಂಚಿಕೊಂಡಿದೆ. ದಕ್ಷಿಣದಲ್ಲಿ ಕಲಬುರಗಿ ಜಿಲ್ಲೆಗೆ ಹೊಂದಿಕೊಂಡಿದೆ. ಶರಣ-ಸೂಫಿ-ಸಂತರು ಉಸಿರಾಡಿದ ನೆಲ. ಕನ್ನಡ- ತೆಲುಗು-ಮರಾಠಿ-ಹಿಂದಿ-ಉರ್ದು ಸೇರಿದಂತೆ ಬಹು ಭಾಷಿಕರ ತವರೂರು. ವಿಭಿನ್ನ ಕಲೆ, ಸಾಹಿತ್ಯ, ಸಾಂಸ್ಕೃತಿಯಲ್ಲಿ ಐತಿಹಾಸಿಕ ಪರಂಪರೆ ಹೊಂದಿರುವ ಬೀದರ್‌ಅನ್ನು ಪರಂಪರೆ ನಗರಿ ಎಂತಲೂ ಕರೆಯುತ್ತಾರೆ. ಭೌಗೋಳಿಕ ಕಾರಣಗಳಿಂದಾಗಿ ಬೀದರ್ ಲೋಕಸಭಾ ಮತಕ್ಷೇತ್ರದಲ್ಲಿ ವಿಭಿನ್ನ ಸಮುದಾಯಕ್ಕೆ ಸೇರಿದವರು ನೋಡಲು ಸಿಗುತ್ತಾರೆ.
ಬೇಸಿಗೆಯ ಕೆಂಡದ ಸೆಖೆಯೊಂದಿಗೆ 2024ರ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಿರುವ ಹೊತ್ತಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಎಂಬ ಜಿಜ್ಞಾಸೆ ಹಳ್ಳಿಯ ಚಾವಡಿ ಕಟ್ಟೆಯವರೆಗೆ ಸದ್ದು ಮಾಡುತ್ತಿದೆ. ಆದರೆ ಕ್ಷೇತ್ರದಲ್ಲಿ ಪಕ್ಷಗಳ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯುವ ಅಭ್ಯರ್ಥಿಗಳ ಹೆಸರುಗಳು ಘೋಷಣೆ ಆಗದಿರುವುದು ಕ್ಷೇತ್ರ ತೀವ್ರ ಕುತೂಹಲಕ್ಕೂ ಕಾರಣವಾಗಿದೆ.
ಬೀದರ್ ಲೋಕಸಭಾ ಕ್ಷೇತ್ರವು ಬೀದರ್ ಉತ್ತರ, ಬೀದರ್ ದಕ್ಷಿಣ, ಬಸವಕಲ್ಯಾಣ, ಔರಾದ, ಭಾಲ್ಕಿ ಹಾಗೂ ಹುಮನಾಬಾದ್ ವಿಧಾನಸಭಾ ಕ್ಷೇತ್ರ ಸೇರಿದಂತೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಹಾಗೂ ಆಳಂದ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
18 ಚುನಾವಣೆಯಲ್ಲಿ 11 ಬಾರಿ ಕಾಂಗ್ರೇಸ್, 7 ಬಾರಿ ಬಿಜೆಪಿಗೆ ಜಯ :
ಒಂದು ಕಾಲಕ್ಕೆ ಕಾಂಗ್ರೇಸ್ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಬೀದರ್ ಲೋಕಸಭಾ ಕ್ಷೇತ್ರ ತರುವಾಯ ಬಿಜೆಪಿ ಕಸಿದುಕೊಂಡಿದೆ. ಬೀದರ್ ಲೋಕಸಭಾ ಕ್ಷೇತ್ರಕ್ಕೆ ಈವರೆಗೆ ನಡೆದ 18 ಚುನಾವಣೆಗಳು ನಡೆದಿವೆ. ಅದರಲ್ಲಿ 11 ಬಾರಿ ಕಾಂಗ್ರೆಸ್ ಜಯ ಗಳಿಸಿದರೆ, 7 ಬಾರಿ ಬಿಜೆಪಿ ಗೆದ್ದಿದೆ. ಒಂದು ಉಪಚುನಾವಣೆ ಸೇರಿ ಇಲ್ಲಿಯವರೆಗೆ ನಡೆದ ಒಟ್ಟು 18 ಚುನಾವಣೆಗಳಲ್ಲಿ ಗೆದ್ದು ಲೋಕಸಭೆಗೆ ಪ್ರವೇಶ ಪಡೆದವರು 6 ಅಭ್ಯರ್ಥಿಗಳು ಮಾತ್ರ. ಅದರಲ್ಲಿ 1952ರಲ್ಲಿ ನಡೆದ ಮೊಟ್ಟ ಮೊದಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದವರು ಅನ್ಯರಾಜ್ಯದ ಮುಸ್ಲಿಂ ಅಭ್ಯರ್ಥಿ ಶೌಕತುಲ್ಲಾ ಶಾ ಅನ್ಸಾರಿ ಎಂಬುದು ಕ್ಷೇತ್ರದ ವಿಶೇಷ.
1957ರಲ್ಲಿ ಬೀದರ್-ಕಲಬುರಗಿ ಸೇರಿ ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಬೀದರ್ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಂಕರದೇವ ಜಯಭೇರಿ ಬಾರಿಸಿದ್ದರು. 1962ರಲ್ಲಿ ಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟ ನಂತರ ಕಾಂಗ್ರೇಸ್‌ನಿಂದ ಸ್ಪರ್ಧಿಸಿದ ರಾಮಚಂದ್ರ ವೀರಪ್ಪ ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದರು. 1967ರಲ್ಲಿ ಮತ್ತೆ ಎರಡನೇ ಬಾರಿಗೂ ಕಾಂಗ್ರೆಸ್‌ನಿಂದ ರಾಮಚಂದ್ರ ವೀರಪ್ಪ ಗೆಲುವು ಕಂಡಿದ್ದರು. ಬಳಿಕ 1971ರಲ್ಲಿ ಕಾಂಗ್ರೆಸ್ ಎರಡು ಬಣವಾಗಿತ್ತು. ಆ ವೇಳೆ ಒಂದು ಬಣದಿಂದ ಸ್ಪರ್ಧಿಸಿದ್ದ ಶಂಕರದೇವ ಎರಡನೇ ಬಾರಿಗೆ ಗೆದ್ದು ಬೀಗಿದರು. 1977ರಲ್ಲಿಯೂ ಕಾಂಗ್ರೇಸ್‌ದಿಂದ ಸ್ಪರ್ಧಿಸಿದ ಶಂಕರದೇವ ಮೂರನೇ ಬಾರಿ ಸಂಸತ್ತು ಪ್ರವೇಶಿಸಿದ ಮೊದಲಿಗರು.
ನರಸಿಂಗ್‌ರಾವ್ ಹುಲ್ಲಾ, ರಾಮಚಂದ್ರ ವೀರಪ್ಪನವರಿಗೆ ಹ್ಯಾಟ್ರಿಕ್ ಜಯ :
1980, 1984 ಹಾಗೂ 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ನರಸಿಂಗರಾವ್ ಹುಲ್ಲಾ ಸೂರ್ಯವಂಶಿ ಹ್ಯಾಟ್ರಿಕ್ ಗೆಲುವು ದಾಖಲಿಸಿದರು. ಬಳಿಕ ನಡೆದ 1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ ರಾಮಚಂದ್ರ ವೀರಪ್ಪ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿ ಕಮಲ ಅರಳಿಸಿದರು. 1996, 1998, 1999 ಹಾಗೂ 2004ರ ಲೋಕಸಭಾ ಚುನಾವಣೆಗಳಲ್ಲಿ ಸತತವಾಗಿ ಗೆದ್ದು ದಿಗ್ವಿಜಯ ಸಾಧಿಸಿದರು.
1991ರಿಂದ 2004ರವರೆಗೆ ಸತತ ಐದು ಬಾರಿ ಜಯ ಸಾಧಿಸಿ ದಾಖಲೆ ಸೃಷ್ಟಿಸಿದ ರಾಮಚಂದ್ರ ವೀರಪ್ಪನವರು 2004ರಲ್ಲಿ ನಿಧನರಾದರು. ತರುವಾಯ ಅದೇ ವರ್ಷ ಜರುಗಿದ ಲೋಕಸಭೆ ಉಪ ಚುನಾವಣೆಯಲ್ಲಿ ನರಸಿಂಗರಾವ ಸೂರ್ಯವಂಶಿ ಕಾಂಗ್ರೇಸ್‌ನಿಂದ ಸ್ಪರ್ಧಿಸಿ ನಾಲ್ಕನೇ ಬಾರಿಗೆ ಗೆದ್ದು ದಶಕದ ಬಿಜೆಪಿ ಭದ್ರಕೋಟೆ ಒಡೆದು ಮತ್ತೆ ʼಕೈʼ ತೆಕ್ಕೆಗೆ ತರುವಲ್ಲಿ ಸಫಲರಾದರು.
2009ರ ವೇಳೆಗೆ ಅಂದರೆ ನಾಲ್ಕುವರೆ ದಶಕದ ಬಳಿಕ ಬೀದರ್ ಲೋಕಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಮಾರ್ಪಟ್ಟಿತು. ಜೇವರ್ಗಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದ ಮಾಜಿ ಸಿಎಂ ಎನ್.ಧರಂಸಿಂಗ್ 2009ರಲ್ಲಿ ಬೀದರ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್‌ನಿಂದ ಗೆದ್ದು ರಾಜಕೀಯ ಪುನರ್ಜನ್ಮ ಪಡೆದುಕೊಂಡರು.
ಮೋದಿ ಅಲೆಯಲ್ಲಿ ಘಟಾನುಘಟಿ ನಾಯಕರು ಸೋತರು:
ಮುಂದೆ 2014ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ ಭಗವಂತ ಖೂಬಾ ನರೇಂದ್ರ ಮೋದಿ ಅಲೆಯಲ್ಲಿ 4,59,260 ಮತ ಪಡೆದರು. ಕಾಂಗ್ರೇಸ್‌ನ ಮಾಜಿ ಸಿಎಂ ಎನ್.ಧರಂಸಿಂಗ್ 3,67,068 ಮತ ಪಡೆದು ಸೋಲು ಕಂಡಿದ್ದರು. ಭಗವಂತ ಖೂಬಾ 92,222 ಮತಗಳ ಅಂತರದಿಂದ ಮಾಜಿ ಸಿಎಂ ವಿರುದ್ಧ ಜಯ ಸಾಧಿಸಿ ಮೊದಲ ಬಾರಿ ಸಂಸತ್ತು ಪ್ರವೇಶಿಸಿದರು. ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂದಿನ ಕೆಪಿಸಿಸಿ ಕಾರ್ಯಾಧ್ಯಕ್ಷ, ಹಾಲಿ ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಬರೋಬ್ಬರಿ 1.11 ಲಕ್ಷ ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿಗೆ ಮೋದಿ ಸಂಸತ್ತಿಗೆ ಆಯ್ಕೆಯಾದರು. 4,68,637 ಮತಗಳನ್ನು ಗಳಿಸಿ ಈಶ್ವರ ಖಂಡ್ರೆ ಪರಾಭವಗೊಂಡಿದ್ದರು. ನಂತರದ ದಿನದಲ್ಲಿ ಸಂಸದ ಭಗವಂತ ಖುಬಾ ಅವರಿಗೆ ಅದೃಷ್ಟ ಎಂಬಂತೆ ಕೇಂದ್ರದಲ್ಲಿ ಮಂತ್ರಿ ಸ್ಥಾನವೂ ಒಲಿಯಿತು.
ಬೀದರ್ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಭಾಲ್ಕಿ, ಬೀದರ್ ಉತ್ತರ ಹಾಗೂ ಆಳಂದ ಸೇರಿ ಮೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಶಾಸಕ ಶಾಸಕರು ಪ್ರತಿನಿಧಿಸಿದರೆ ಉಳಿದ ಐದು ಔರಾದ, ಹುಮನಾಬಾದ್ ಬೀದರ್ ದಕ್ಷಿಣ, ಬಸವಕಲ್ಯಾಣ ಹಾಗೂ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಇನ್ನು ಕ್ಷೇತ್ರದಲ್ಲಿ ಒಮ್ಮೆಯೂ ಗೆಲ್ಲದ ಜೆಡಿಎಸ್ ಈ ಬಾರಿ ಕಮಲದೊಂದಿಗೆ ಮೈತ್ರಿಯಾದ ಪರಿಣಾಮ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಡುವುದು ನಿಚ್ಚಳ.
ಹ್ಯಾಟ್ರಿಕ್ ಗೆಲುವು ಸಾಧಿಸುವರೇ ಖೂಬಾ?
ಸದ್ಯಕ್ಕೆ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಉದ್ದವಾಗಿ ಬೆಳೆದಿದೆ, ಅದರಲ್ಲಿ ಬಿಜೆಪಿ ಹಾಲಿ ಸಂಸದ ಭಗವಂತ ಖುಬಾ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಆದರೆ ಸ್ವಪಕ್ಷದ ಕೆಲ ಶಾಸಕ, ಮುಖಂಡರು ಖೂಬಾ ವಿರುದ್ಧ ಸಿಡಿದೆದ್ದು ಟಿಕೆಟ್ ನೀಡದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿ ಹ್ಯಾಟ್ರಿಕ್ ಗೆಲುವಿಗೆ ಲಗಾಮು ಹಾಕಲು ಮುಂದಾಗಿದ್ದು ಸುಳ್ಳಲ್ಲ. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಭಗವಂತ ಖುಬಾ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ಹಾಲಿ ಬೀದರ್ ಜಿಲ್ಲಾ ಸಚಿವ ಈಶ್ವರ ಖಂಡ್ರೆಯವರು ಅವರ ಮಗ ಸಾಗರ್ ಖಂಡ್ರೆಯವರನ್ನು ಚುನಾವಣೆಯಲ್ಲಿ ನಿಲ್ಲಿಸಬೇಕೆಂದು ಶತಪ್ರಯತ್ನ ಮುಂದುವರೆಸಿದ್ದಾರೆ. ಈ ಮಧ್ಯೆ ಕಾಂಗ್ರೇಸ್ಸಿನಿಂದ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹೆಸರು ಕೇಳಿ ಬರುತ್ತಿದೆ.
ಕ್ಷೇತ್ರದಲ್ಲಿ ಹಿಂದಿಗಿಂತಲೂ ಈ ಬಾರಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿರುವ ಕಾರಣ ಕಾಂಗ್ರೆಸ್ ಗೆಲ್ಲುವ ವಿಶ್ವಾಸದಲ್ಲಿದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಿಗಿಂತ ಬರುವ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ʼಬಿಜೆಪಿ ಪಕ್ಷದ ಅಭ್ಯರ್ಥಿಗೆ ಮೋದಿ ಮುಖ ನೋಡಿ ಮತ ಹಾಕಿದ್ದೇವೆʼ ಎಂದು ಹೇಳುವ ಕೆಲ ಮತದಾರರೇ ಈ ಬಾರಿ ಬಂಡೆದ್ದು ತಿರುಗಿಬಿದ್ದಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡು ಹೊರಟು ಹೇಗಾದರೂ ಈ ಬಾರಿ ಬೀದರ್ ಲೋಕಸಭಾ ʼಕೈʼ ವಶಕ್ಕೆ ಪಡೆಯಬೇಕೆಂದು ರಣತಂತ್ರ ಹೆಣೆಯುತ್ತಿದೆ. ರಾಜ್ಯದ ಆಡಳಿತರೂಢ ಕಾಂಗ್ರೇಸ್ಸಿಗೆ ಈ ಚುನಾವಣೆ ಮಹತ್ವದ್ದಾಗಿದೆ.
2024ರ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18.45 ಲಕ್ಷ ಮತದಾರರಿದ್ದಾರೆ. ಲಿಂಗಾಯತರ ಮತಗಳೇ ಮೆಜಾರಿಟಿ. ನಂತರದಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡ, ಮುಸ್ಲಿಂ, ಮರಾಠ ಹಾಗೂ ಇತರ ಹಿಂದುಳಿದ ಜಾತಿಯವರು ಇದ್ದಾರೆ. ಬೀದರ್ ದಕ್ಷಿಣ ಕ್ಷೇತ್ರ ಸೇರಿದಂತೆ ಕ್ಷೇತ್ರದ ಇತರೆ ಕ್ಷೇತ್ರಗಳ ಸಾಂಪ್ರದಾಯಿಕ ಮತಗಳು ಬಿಜೆಪಿ ಪಾಲಾಗುವುದು ಒಂದು ʼಪ್ಲಸ್ʼ ಆಗಿದ್ದರೆ, ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರುವ ಕಾರಣ ಬಿಜೆಪಿಗೆ ಗೆಲುವಿನ ಹಾದಿ ಸುಗಮವಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಚಾರ.
ಬಿಜೆಪಿ-ಕಾಂಗ್ರೇಸ್ ಎರಡೂ ಪಕ್ಷಗಳು ಅಭ್ಯರ್ಥಿಗಳ ಹೆಸರು ಇನ್ನೂ ಅಂತಿಮಗೊಳಿಸಿಲ್ಲ. ಎರಡೂ ಪಕ್ಷಗಳಿಗೂ ಟಿಕೆಟ್ ಅಂತಿಮಗೊಳಿಸಲು ಕಗ್ಗಂಟು ಆಗಿದ್ದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕೊನೆಗೆ ಯಾರ ಹೆಸರು ಅಖೈರುಗೊಳ್ಳಲಿದೆ ಎಂಬುದು ಸದ್ಯಕ್ಕೆ ನಿಗೂಢ. ಏನ್ ಅಯ್ತುದೋ, ಕಾಯ್ಬೇಕ್ ಅಷ್ಟೇ!!

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
Very excellent information regarding Bidar loksabha constituency
Well explained very nice sir 🔥
ತುಂಬಾ ಉತ್ತಮವಾಗಿ ವಿವರಿಸಿದಿರಿ.