ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತಡಿಬಿಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 590 ವಿದ್ಯಾರ್ಥಿಗಳಿಗೆ ಕೇವಲ ಐದು ಮಂದಿ ಶಿಕ್ಷಕರಿದ್ದು, ಅದರಲ್ಲೂ ಒಬ್ಬ ಶಿಕ್ಷಕಿ ಎರಡು ವರ್ಷಗಳ ಹಿಂದೆ ನಿಯೋಜನೆ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ತೆರಳಿದ್ದಾರೆ.
ತಡಿಬಿಡಿ ಗ್ರಾಮದಲ್ಲಿ 1ರಿಂದ 8ನೇ ತರಗತಿಯವರೆಗೆ ಶಾಲೆ ಇದ್ದು, 590 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಜೊತೆಗೆ 1ರಿಂದ 5ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ಶಾಲೆ ಇದೆ. ಸದ್ಯ ಕೇವಲ ನಾಲ್ವರು ಶಿಕ್ಷಕರು ಪಾಠಮಾಡುತ್ತಿದ್ದು, ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂದು ಮುಖ್ಯಶಿಕ್ಷಕ ಭೀಮರಾಯ ಹೇಳಿದ್ದಾರೆ.
2021-2022 ಸಾಲಿನಲ್ಲಿ ಶಿಕ್ಷಕಿ ಪಾರ್ವತಿ ಅವರು ಬೆಂಗಳೂರಿಗೆ ತಮ್ಮ ಪತಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಗೆ ತೆರಳಿದ್ದಾರೆ.
ಶಿಕ್ಷಕರ ಕೊರತೆ ಇರುವಾಗ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕಾನೂನು ವ್ಯಾಪ್ತಿ ಮೀರಿ ನಿಯೋಜನೆ ಮೇಲೆ ಕಳುಹಿಸಿರುವುದು ಸರಿಯಲ್ಲ. ಶಿಕ್ಷಕಿಯನ್ನು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ವರ್ಷದ ಹಿಂದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಟ್ಟಿನಲ್ಲಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ ಸುಮ್ಮನಿರುವ ಶಿಕ್ಷಣ ಇಲಾಖೆಯ ಮೇಲೆ ಗ್ರಾಮಸ್ಥರು ಬೇಸರಗೊಂಡಿದ್ದು ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
