ಚುನಾವಣಾ ಬಾಂಡ್‌ನ ಸಂಪೂರ್ಣ ಮಾಹಿತಿಯನ್ನು ನೀಡಲು ಜೂನ್ 30ರವರೆಗೆ ಅವಕಾಶವನ್ನು ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಇದರ ಬೆನ್ನಲ್ಲೇ ಷೇರುಪೇಟೆಯಲ್ಲಿ ಎಸ್‌ಬಿಐ ಷೇರುಗಳು ಪಾತಾಳಕ್ಕಿಳಿದಿದೆ.
ನಾಲ್ಕು ತಿಂಗಳುಗಳ ಅವಕಾಶ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ನಾಳೆಯೇ ಚುನಾವಣಾ ಬಾಂಡ್‌ನ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಆದೇಶವನ್ನು ಪ್ರಕಟಿಸುತ್ತಿದ್ದಂತೆಯೇ ಎಸ್‌ಬಿಐ ಷೇರು ಸುಮಾರು ಶೇಕಡ 2ರಷ್ಟು ಕುಸಿದಿದೆ.
ಸಂಜೆ 3:30ರ ಸಮಯಕ್ಕೆ ಎಸ್‌ಬಿಐ ಷೇರು ಶೇಕಡ 2ರಷ್ಟು ಇಳಿದು 773.95 ರೂಪಾಯಿಗೆ ತಲುಪಿದೆ. ಈ ಹಿಂದಿನ ವಹಿವಾಟಿನಲ್ಲಿದ್ದ ಎಸ್‌ಬಿಐ ಷೇರಿನ ದರಕ್ಕಿಂತ ಈ ದರದಲ್ಲಿ ನಾವು 15 ರೂಪಾಯಿ ವ್ಯತ್ಯಾಸವನ್ನು ಕಾಣಬಹುದು.
ಎಸ್‌ಬಿಐ ಇಂಟ್ರಾಡೇ ವಹಿವಾಟಿನಲ್ಲಿ 771ರ ಕನಿಷ್ಠಮಟ್ಟಕ್ಕೆ ಇಳಿದಿದೆ. ಆದರೆ ಎಸ್‌ಬಿಐನ ಈ ಷೇರು ಕುಸಿತಕ್ಕೆ ಸುಪ್ರೀಂ ಕೋರ್ಟ್‌ನ ಆದೇಶ ಮಾತ್ರವಲ್ಲ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರ ನಕಾರಾತ್ಮಕ ಭಾವನೆ ಕೂಡಾ ಕಾರಣವೆಂದು ತಜ್ಞರು ಹೇಳುತ್ತಾರೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ನೇತೃತ್ವದ, ನ್ಯಾಯಮೂರ್ತಿ ಸಂಜೀವ್ ಖನ್ನಾ, ಬಿಆರ್ ಗವಾಯ್, ಜೆಬಿ ಪಾರ್ದಿವಾಲಾ, ಮನೋಜ್ ಮಿಶ್ರಾರನ್ನು ಒಳಗೊಂಡ ಪಂಚ ಸದಸ್ಯ ಪೀಠವು ಇಂದು ಎಸ್‌ಬಿಐನ ಅರ್ಜಿಯ ವಿಚಾರಣೆ ನಡೆಸಿದೆ.
“ಚುನಾವಣಾ ಬಾಂಡ್‌ನ ಸಂಪೂರ್ಣ ಮಾಹಿತಿ ಇರುವುದಾಗಿ ಎಸ್‌ಬಿಐ ತನ್ನ ಅರ್ಜಿಯಲ್ಲೇ ಹೇಳಿಕೊಂಡಿದೆ” ಎಂದು ಒತ್ತಿ ಹೇಳಿರುವ ಸುಪ್ರೀಂ ಮಾಹಿತಿ ಚುನಾವಣಾ ಆಯೋಗಕ್ಕೆ ನೀಡಲು ಒಂದೇ ದಿನದ ಅವಕಾಶವನ್ನು ನೀಡಿದೆ.
ಅಲ್ಲದೆ ಎಲ್ಲ ಮಾಹಿತಿಯನ್ನು ಒಟ್ಟುಗೂಡಿಸಿ ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಮಾರ್ಚ್ 15 ಸಂಜೆ 5 ಗಂಟೆಯೊಳಗೆ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಆದೇಶಿಸಿದೆ.
ಚುನಾವಣಾ ಬಾಂಡ್‌ಗಳ ಬಗ್ಗೆ ಫೆ.15 ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಪ್ರಕ್ರಿಯೆ ಅಸಾಂವಿಧಾನಿಕ ಹಾಗೂ ನಾಗರಿಕರ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ತೀರ್ಪು ನೀಡಿತ್ತು. ಎಸ್‌ಬಿಐಗೆ ಚುನಾವಣಾ ಬಾಂಡ್‌ನ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲು ಮಾರ್ಚ್ 6ರವರೆಗೆ ಸಮಯ ನೀಡಿತ್ತು.