ಚಿಕ್ಕಬಳ್ಳಾಪುರ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಾದ ಮೇಲೆ ರಾಜಕೀಯ ಜಾಹಿರಾತುಗಳ ಪ್ರಚಾರ ಕೈಗೊಳ್ಳಲು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ ಎನ್ ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಚುನಾವಣೆ ನೀತಿ ಸಂಹಿತೆ ಅವಧಿಯಲ್ಲಿ “ಮಾಧ್ಯಮಗಳು, ಮಾಧ್ಯಮ ಪ್ರತಿನಿಧಿಗಳ ಪಾತ್ರ”ದ ಕುರಿತು ನಡೆದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
“ಚುನಾವಣಾ ಆಯೋಗ ಲೋಕಸಭೆ ಚುನಾವಣೆ ಘೋಷಣೆ ಮಾಡಿದ ಮೇಲೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ದಿನದಿಂದ ಚುನಾವಣಾ ಪ್ರಚಾರಗಳ ಚಲನ-ವಲನಗಳನ್ನು ನಿಗಾ ಇಡಲು ಚುನಾವಣಾ ಆಯೋಗದ ನಿರ್ದೇಶನದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಿಲಾಗಿದೆ. ಈ ಸಮಿತಿಯು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸುತ್ತದೆ. ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ ಅಥವಾ ಬೆಂಬಲಿಗರು ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತುಗಳ ಚುನಾವಣಾ ಪ್ರಚಾರ ಕೈಗೊಳ್ಳಲು ಎಂಸಿಎಂಸಿ ಸಮಿತಿಯಿಂದ ಪೂರ್ವಾನುಮತಿ ನೀಡಲಾಗುತ್ತದೆ” ಎಂದು ಹೇಳಿದರು.
“ಯಾವುದೇ ಮಾಧ್ಯಮ ಪ್ರತಿನಿಧಿಗಳು ನೈಜ ಮತ್ತು ಅಧಿಕೃತ ಮಾಹಿತಿ ಹಾಗೂ ಮಾಹಿತಿಯ ಮೂಲವಿಲ್ಲದೆ ವರದಿ ಮಾಡಬಾರದು. ಕಾಸಿಗಾಗಿ ಸುದ್ಧಿ ಮಾಡುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಚುನಾವಣಾ ಆಯೋಗ ಕಠಿಣ ಕಾನೂನು ಕ್ರಮ ಜರುಗಿಸುತ್ತದೆ” ಎಂದು ತಿಳಿಸಿದರು.
“ಚುನಾವಣೆ ಅಯೋಗದಿಂದ ಅಧಿಕೃತ ಅನುಮತಿ ಪತ್ರ ಪಡೆದು ಚುನಾವಣಾ ಮತದಾನದ ದಿನದಂದು ಮತಗಟ್ಟೆಗಳಿಗೆ ತೆರಳಿ ವರದಿ ಮಾಡಬಹುದು. ಆದರೆ ಮತದಾನ ಮಾಡುವುದನ್ನು ಛಾಯಚಿತ್ರ, ವೀಡಿಯೊ ಮಾಡಿ ರಹಸ್ಯ ಮತದಾನವನ್ನು ವರದಿ ಮಾಡುವಂತಿಲ್ಲ. ಯಾವುದೇ ವ್ಯಕ್ತಿ ಮತದಾನ ಮಾಡುವುದು ರಹಸ್ಯದಿಂದ ಕೂಡಿರುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿನಿಧಿಗಳು ವಾರ್ತಾ ಇಲಾಖೆ ಮುಖಾಂತರ ಫೋಟೋ ಮತ್ತು ಅಗತ್ಯ ಮಾಹಿತಿ ನೀಡಿ ಚುನಾವಣಾ ಆಯೋಗದಿಂದ ಮತಗಟ್ಟೆಗಳಿಗೆ ಮತ ಎಣಿಕೆ ಕೇಂದ್ರಗಳಿಗೆ ತೆರಳಲು ಅನುಮತಿಯುಳ್ಳ ಪ್ರವೇಶ ಪತ್ರಗಳನ್ನು ಪಡೆಯಬೇಕು. ಈ ಪತ್ರಗಳನ್ನು ತೋರಿಸಿ ಮತಗಟ್ಟೆ ಅಧಿಕಾರಿಗಳ ಅನುಮತಿಯೊಂದಿಗೆ ಪ್ರವೇಶ ಪಡೆಯಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ನ್ಯಾಯ ಸಮ್ಮತ, ಮುಕ್ತ, ಪಾರದರ್ಶಕ ಚುನಾವಣೆಯನ್ನು ನಡೆಸಲು ಮಾಧ್ಯಮಗಳ, ಮಾಧ್ಯಮ ಪ್ರತಿನಿಧಿಗಳು ಸಹಕಾರ ನೀಡಬೇಕು” ಎಂದು ಅಪರ ಜಿಲ್ಲಾಧಿಕಾರಿ ಕೋರಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸೇವಾ ಗೃಹರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚುನಾವಣಾ ಆಯೋಗದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾದ ಸಿ ಎನ್ ಶಂಕರ್ ರೆಡ್ಡಿ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಅವಧಿಯಲ್ಲಿ ಮಾಧ್ಯಮಗಳ ಪಾತ್ರವನ್ನು ಮತ್ತು ಮಾಧ್ಯಮ ಪ್ರತಿನಿಧಿಗಳಿಗಿರುವ ಸೌಲಭ್ಯಗಳೇನು ಎನ್ನುವ ಎಲ್ಲ ವಿಚಾರಗಳನ್ನು ಪಿಪಿಟಿ ಮೂಲಕ ತಿಳಿಸಿಕೊಟ್ಟರು.
ಕಾರ್ಯಾಗಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ ಜುಂಜಣ್ಣ, ಜಿಲ್ಲಾ ಉದ್ಯೋಗಾಧಿಕಾರಿ ಎಂ ಪ್ರಸಾದ್, ಚುನಾವಣಾ ತಹಶೀಲ್ದಾರ್ ಮುನಿಶಾಮಿರೆಡ್ಡಿ, ವಾರ್ತಾ ಸಹಾಯಕ ಎಂ ಆರ್ ಮಂಜುನಾಥ ಹಾಗೂ ಮಾಧ್ಯಮ ಪ್ರತಿನಿಧಿಗಳು ಇದ್ದರು.