ಆಡಳಿತ ಪಕ್ಷದವರ ಅಪೇಕ್ಷೆಗೆ ತಕ್ಕಂತೆ ಇವಿಎಂಗಳನ್ನು ತಿರುಚಬಹುದು ಎಂಬುದನ್ನು ತಾಂತ್ರಿಕ ತಜ್ಞರು ಸಾಬೀತುಪಡಿಸಿದ್ದರಿಂದ ಇವಿಎಂ ಬೇಡ. ಬ್ಯಾಲೆಟ್ ಮತ ಪತ್ರದ ಮೂಲಕ ಚುನಾವಣೆ ನಡೆಯಬೇಕೆಂದು ಸಿಪಿಐಎಂಎಲ್ ರೆಡ್ ಸ್ಟಾರ್ ರಾಯಚೂರು ತಾಲೂಕು ಸಮಿತಿ ಒತ್ತಾಯಿಸಿದೆ.
ರಾಯಚೂರು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ 2024ನೇ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಮತಯಂತ್ರ ಬೇಡವೆ ಬೇಡ. ಮತಪತ್ರದ ಮೂಲಕ ಲೋಕಸಭಾ ಚುನಾವಣೆ ನಡೆಸಲು ಆಗ್ರಹಿಸಿ ಪ್ರತಿಭಟನೆ ನಡೆಸಿತು.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಸಮೀಕ್ಷೆಯಲ್ಲಿ ವಿಫಲರಾದ ಅನೇಕ ಅಭ್ಯರ್ಥಿಗಳು ನಿಜವಾದ ಚುನಾವಣೆಯಲ್ಲಿ ಗೆದ್ದಿರುವುದು ಆಶ್ಚರ್ಯವೇನಿಲ್ಲ. ಇದಕ್ಕೆ ಯಂತ್ರಗಳ ಟ್ಯಾಂಪರ್ ಆಗಿರುವುದು ಮುಖ್ಯ ಕಾರಣ ಎಂದು ಆರೋಪಿಸಿದರು.
ಕನಿಷ್ಠ, ಜನರು ಮತದಾನದ ನಂತರ, ಅವರು ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ ಎಂಬುದನ್ನು ಸೂಚಿಸಲು ಸ್ವೀಕೃತಿ ಚೀಟಿಯನ್ನು ಸ್ವೀಕರಿಸಬೇಕು ಮತ್ತು ಅದನ್ನು ಸಂಗ್ರಹಿಸಬೇಕು ಮತ್ತು ಆ ಸ್ವೀಕೃತಿ ಚೀಟಿಗಳ ಆಧಾರದ ಮೇಲೆ ಮತಗಳನ್ನು ಎಣಿಸಬೇಕು ಎಂದರು.
ವಿವಿಧ ರಾಜ್ಯಗಳಲ್ಲಿ ಹಲವು ಪಕ್ಷಗಳು ಇವಿಎಂಗಳ ಮೇಲೆ ಇದೇ ರೀತಿಯ ಸಮಸ್ಯೆಗಳನ್ನು ಎತ್ತಿದ್ದವು. ಆದರೆ, ಭಾರತೀಯ ಚುನಾವಣಾ ಆಯೋಗವು (ಇಸಿಐ) ಅವುಗಳನ್ನು ಪರಿಹರಿಸುವ ಭರವಸೆ ನೀಡಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಆರೋಪಗಳನ್ನು ತಳ್ಳಿಹಾಕಲು ಸರಿಯಾದ ಉತ್ತರವನ್ನೂ ನೀಡುತ್ತಿಲ್ಲ. ಇಸಿಐ ಮೂಕ ಪ್ರೇಕ್ಷಕರಾಗಿರುವುದರಿಂದ, ಇದು ಚುನಾವಣಾ ಆಯೋಗದ ಮೇಲೂ ಅನುಮಾನವನ್ನು ಹುಟ್ಟುಹಾಕುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮೊದಲಿದ್ದಂತೆ ಮತಪತ್ರದ (ಬ್ಯಾಲೆಟ್) ಮೂಲಕ ಪಾರದರ್ಶಕ ಚುನಾವಣೆಯನ್ನು ನಡೆಸಲು ನಮ್ಮ ಪಕ್ಷವು ಆಗ್ರಹಿಸುತ್ತದೆ. ಹಾಗಾಗಿ ಯಂತ್ರಚಾಲಿತ ಮತ ಯಂತ್ರವನ್ನು ಬಂದ್ ಮಾಡಿ ಜನತಾಂತ್ರಿಕ ಮತ ಪತ್ರದ ಚುನಾವಣೆಗೆ ಮುಂದಾಗಬೇಕೇಂದು ರಾಷ್ಟ್ರದ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ. ಅಮರೇಶ್, ಅಜೀಜ್ ಜಾಗೀರ್ದಾರ್, ಮಲ್ಲಯ್ಯ ಕಟ್ಟಿಮನಿ, ನಿರಂಜನ್ ಕುಮಾರ್, ಆನಂದ್ ಕುಮಾರ್, ಲಕ್ಷ್ಮಣ್ ಇದ್ದರು.