“ದೇಶದಲ್ಲಿ ಜಾತಿ ಗಣತಿ ನಡೆಸುವುದು ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಯಾಗಿದೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಕೊನೆಯ ಹಂತದ ಭಾರತ ಜೋಡೋ ನ್ಯಾಯ ಯಾತ್ರೆ ಮಹಾರಾಷ್ಟ್ರಕ್ಕೆ ಬರುವ ಮುನ್ನ ರಾಜ್ಯದ ನಂದೂರ್ಬಾರ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಜೈರಾಮ್ ರಮೇಶ್ ಮಾತನಾಡಿದರು.
“ನಾವು ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯನ್ನು ನಡೆಸುತ್ತೇವೆ ಎಂದು ಭರವಸೆ ನೀಡಿದ್ದೇವೆ. ಇದು ನಮ್ಮ ಸಮಾಜದ ಎಕ್ಸ್‌ರೇಯಂತೆ. ಇದು ನಮ್ಮ ದೇಶದಲ್ಲಿರುವ ಬೇರೆ ಬೇರೆ ಜಾತಿಗಳ ಜನಸಂಖ್ಯೆ, ರಾಷ್ಟ್ರದ ಸಂಪತ್ತಿನಲ್ಲಿ ಅವರ ಪಾಲನ್ನು ತೋರಿಸುತ್ತದೆ. ಜೊತೆಗೆ ಪ್ರಜಾಪ್ರಭುತ್ವದಲ್ಲಿ ಅವರ ಪಾಲನ್ನೂ ಪ್ರತಿಬಿಂಬಿಸುತ್ತದೆ” ಎಂದು ಕಾಂಗ್ರೆಸ್ ನಾಯಕ ವಿವರಿಸಿದರು.
ಇನ್ನು “ಕಾಂಗ್ರೆಸ್ ಒಂದು ರಾಜಕೀಯ ಪಕ್ಷ, ಇದು ನೋಡುಗರ ಗುಂಪೇನಲ್ಲ. ಚುನಾವಣೆಯಲ್ಲಿ ನಾವು ಸೋಲಬಹುದು, ಗೆಲ್ಲಬಹುದು. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾತ್ರ ಸಮಾಜವನ್ನು ವಿಭಜಿಸಲು ಎಲ್ಲ ಪ್ರಯತ್ನವನ್ನು ಮಾಡುತ್ತಿದೆ, ಇದಕ್ಕಾಗಿ ಸಿಗುವ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ” ಎಂದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, “ನಮ್ಮ ದೇಶ ಪ್ರಧಾನಿ ಮೋದಿಯವರ ವರ್ತನೆ ಮತ್ತು ನೀತಿಗಳಿಂದಾಗಿ ವಿಭಜನೆಯಾಗುತ್ತಿದೆ. ಬಿಜೆಪಿಯವರ ಗಮನ ಎಂದಿಗೂ ಕೂಡಾ ಸಮಾಜವನ್ನು ಒಡೆಯುವುದರ ಮೇಲೆ ಇರುತ್ತದೆ” ಎಂದಿದ್ದು, “ಭಾರತ್ ಜೋಡೊ ನ್ಯಾಯ ಯಾತ್ರೆ ಯಾವುದೇ ಚುನಾವಣಾ ಪ್ರಚಾರದ ಭಾಗವಲ್ಲ, ಇದು ರಾಜಕೀಯ ರ್‍ಯಾಲಿ” ಎಂದರು.
ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಜಾತಿ ಗಣತಿ ಅಭಿಯಾನದ ಭಾಗವಾಗಿ ತನ್ನ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ #Gintikaro (ಲೆಕ್ಕ ಹಾಕು) ಹ್ಯಾಷ್ ಟ್ಯಾಗ್ ಅನ್ನು ಸೇರಿಸಿದ್ದಾರೆ. ಇನ್ನು ಎಲ್ಲಾ ಕಾಂಗ್ರೆಸ್ ನಾಯಕರು ಕೂಡಾ ತಮ್ಮ ಎಕ್ಸ್ ಬಯೋನಲ್ಲಿ ಇದನ್ನು ಸೇರಿಸಲು ತಿಳಿಸಲಾಗಿದೆ ಎಂಬ ಮಾಹಿತಿಯಿದೆ.