5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ಮಾಡುವ ಸರ್ಕಾರದ ಕಾನೂನು ಬಾಹಿರ ಕ್ರಮವನ್ನು ತಡೆಹಿಡಿಯುವ ಮೂಲಕ ಸರ್ವೋಚ್ಛ ನ್ಯಾಯಾಲಯವು ಸಂವಿಧಾನದ ಮೂಲಭೂತ ಹಕ್ಕಾದ 21ಎ ಮತ್ತು ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 30ನ್ನು ಎತ್ತಿ ಹಿಡಿದಿದೆ. ಇದನ್ನು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ) ಸ್ವಾಗತಿಸುತ್ತದೆ ಎಂದು ಪಾಫ್ರೆ ಸಂಚಾಲಕರು ಹಾಗೂ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಹೇಳಿದ್ದಾರೆ.
“ದೇಶದಾದ್ಯಂತ ಯುಪಿಎ ಸರ್ಕಾರ 2009ರಲ್ಲಿ ರೂಪಿಸಿ 2010ರಲ್ಲಿ ಜಾರಿಗೊಳಿಸಿದ್ದ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಿಯಲ್ಲಿದ್ದು, ಮೌಲ್ಯ ಮಾಪನ ಮತ್ತು ಕಲಿಕಾ ಫಲಿತಾಂಶ ಕುರಿತಂತೆ ಕೇಂದ್ರ ಸರ್ಕಾರ 2010ರಲ್ಲಿ ರೂಪಿಸಿರುವ ನಿಯಮ 23ರ ಅನ್ವಯ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಮಾತ್ರ ಅವಕಾಶವಿದೆ. ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 30, ಮಕ್ಕಳು 8ನೇ ತರಗತಿ ಮುಗಿಸಿವವರೆಗೆ ಯಾವುದೇ ಬೋರ್ಡ್ ಪರೀಕ್ಷೆ ಪಾಸ್ ಮಾಡುವ ಅಗತ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತದೆ” ಎಂದಿದ್ದಾರೆ.
“ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಪರೀಕ್ಷೆ ಎಂದರೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಮಾತ್ರ. ಈಗಾಗಲೇ ನಡೆದಿರುವ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಪರೀಕ್ಷೆಗಳು ಮಕ್ಕಳ ಕಲಿಕೆಯನ್ನು ಮೌಲ್ಯಮಾಪನ ಮಾಡಲು ಅಗತ್ಯ ದತ್ತಾಂಶಕ್ಕಿಂತ ಹೆಚ್ಚಿನ ವಿವರಗಳನ್ನು ಶಾಲಾ ಹಂತದಲ್ಲಿ ಹೊಂದಿವೆ. ಈ ವಿವರಗಳು ಮಕ್ಕಳ ಮೌಲ್ಯಾ೦ಕನ ಮಾಡಲು ಹತ್ತಾರು ಬಗೆಯ ಮಾಹಿತಿ ಒದಗಿಸುತ್ತವೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? 5, 8, 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
“ಹೀಗಿದ್ದರೂ, ಸರ್ಕಾರ ಕಾನೂನನ್ನು ಉಲ್ಲಂಘಿಸಿ ಪರೀಕ್ಷೆ ಮಾಡಲು ಹೊರಟಾಗ ಕಾನೂನು ಹೋರಾಟ ಅನಿವಾರ್ಯವಾಗಿತ್ತು. ಈ ಕಾನೂನು ಹೋರಾಟದಲ್ಲಿ ಸರ್ವೋಚ್ಛ ನ್ಯಾಯಾಲಯ ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿಹಿಡಿದಿದ್ದು, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಮಾನ್ಯತೆ ದೊರೆತಿದೆ” ಎಂದಿದ್ದಾರೆ.
“ಈಗಲಾದರೂ ಸರ್ಕಾರ ತನ್ನ ಒಣ ಪ್ರತಿಷ್ಠೆ ಬಿಟ್ಟು ಮಕ್ಕಳ ಹಿತಾಸಕ್ತಿಯನ್ನು ಗೌರವಿಸಿ, ಶಾಲಾ ಹಂತದಲ್ಲಿ ನಡೆದಿರುವ ಮಕ್ಕಳ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಆಧಾರದಲ್ಲಿ ಮಕ್ಕಳ ಫಲಿತಾಂಶ ತಿಳಿದು ಮುಂದಿನ ಶೈಕ್ಷಣಿಕ ವರ್ಷದ ಕಲಿಕೆ ಅಣಿಗೊಳಿಸಿವ ಕೆಲಸಕ್ಕೆ ಮುಂದಾಗಬೇಕಿದೆ” ಎಂದು ಪಾಫ್ರೆ ಒತ್ತಾಯಿಸಿದೆ.