ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನದಲ್ಲಿ ಗೆದ್ದರೆ ದೇಶದ ಸಂವಿಧಾನ ಬದಲಾಯಿಸುತ್ತೇವೆ ಎಂದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ಖಂಡಿಸಿ ಬೀದರ್‌ನಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹನ ಮಾಡಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಒಕ್ಕೂಟದ ಪದಾಧಿಕಾರಿಗಳು ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಘೋಷಣೆ ಕೂಗಿದರು, ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರಿನ ಮುಖ್ಯರಸ್ತೆಯಲ್ಲಿ ಸಂಸದ ಹೆಗಡೆ ಪ್ರತಿಕೃತಿ ದಹಿಸಿ ಬೊಬ್ಬೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ರಾಷ್ಟ್ರಪತಿಗಳಿಗೆ ಬರೆದ ಹಕ್ಕೋತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಈ ವೇಳೆ ಒಕ್ಕೂಟದ ಪ್ರಮುಖರಾದ ಬಾಬು ಪಾಸ್ವಾನ್, ಅನಿಲಕುಮಾರ ಬೆಲ್ದಾರ ಮಾತನಾಡಿ, ಪದೆ ಪದೇ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆಯಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಸಂವಿಧಾನದಡಿಯಲ್ಲಿ ಗೆದ್ದು ಪ್ರಮಾಣ ವಚನ ಸ್ವೀಕರಿಸಿದ ಅವರು ಸಂವಿಧಾನವನ್ನೇ ವಿರೋಧಿಸುತ್ತಿರುವುದು ದೇಶದ್ರೋಹ ಹೇಳಿಕೆಯಾಗಿದೆ. ಆದರೂ ಬಿಜೆಪಿ ಪಕ್ಷ ಇಂತಹ ಹೇಳಿಕೆ ವಿರುದ್ಧ ಪ್ರತಿಕ್ರಿಯೆ ನೀಡುತ್ತಿಲ್ಲ. ಕೂಡಲೇ ಸಂಸದ ಹೆಗಡೆಯವರ ಸಂಸದ ಸದಸ್ಯತ್ವ ರದ್ದುಗೊಳಿಸಿ, ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು” ಎಂದು ಆಗ್ರಹಿಸಿದರು.
“ಸಂಸದ ಹೆಗಡೆಯವರು ಈ ಹಿಂದೆಯೂ ಸಂವಿಧಾನ ವಿರೋಧಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗರ ಹೋರಾಟ ನಡೆಸಲಾಗುವುದು” ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಲೋಕಸಭಾ ಕ್ಷೇತ್ರ | ದಶಕದ ʼಕಮಲʼ ಕೋಟೆ ಭೇದಿಸಲು ʼಕೈʼ ರಣತಂತ್ರ
ಪ್ರತಿಭಟನೆಯಲ್ಲಿ ಪ್ರಮುಖರಾದ ಮಾರುತಿ ಕಂಟೆ, ಅಂಬಾದಾಸ ಗಾಯಕವಾಡ, ಅವಿನಾಶ ದೀನೆ, ಶಿವಕುಮಾಯ ನೀಲಿಕಟ್ಟಿ ಶ್ರೀಮತರಾವ ದೀನೆ, ಸಂದೀಪ ಕಾಂಟೆ, ಸಾಯಿ ಸಿಂಧೆ, ಪ್ರದೀಪ ನಾಟೇಕರ್ ಸೇರಿದಂತೆ ಇತರರಿದ್ದರು.