ಈದಿನ.ಕಾಮ್ ರಾಜ್ಯಾದ್ಯಂತ ಫೆಬ್ರವರಿ 15ರಿಂದ ಮಾರ್ಚ್ 5ರವರೆಗೆ ನಡೆಸಿದ ಬೃಹತ್ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶದ ಮೊದಲ ಕಂತು ಪ್ರಕಟವಾಗಿದೆ. ಸಮೀಕ್ಷೆಯಲ್ಲಿ ಹೊರಬಂದ ಅಂಶಗಳನ್ನು ಇಲ್ಲಿ ಮುಂದಿಡಲಾಗುತ್ತಿದೆ. ಅದಕ್ಕೆ ಮುಂಚೆ, ಸಮೀಕ್ಷೆಯ ವಿಧಾನದ ಕುರಿತು ಕೆಲವು ಮಾಹಿತಿಗಳು.
ಒಟ್ಟು ಸ್ಯಾಂಪಲ್: 52500
ಸಮೀಕ್ಷೆ ನಡೆಸಿದ ವಿಧಾನ: ಮತದಾರರ ಮನೆಗಳಲ್ಲಿ ಮುಖಾಮುಖಿ
ಸ್ಯಾಂಪ್ಲಿಂಗ್ ವಿಧಾನ: ವೈಜ್ಞಾನಿಕ ರ್‍ಯಾಂಡಂ ಸ್ಯಾಂಪ್ಲಿಂಗ್
ಅಂತಿಮವಾಗಿ ಪರಿಶೀಲಿಸಿದಾಗ ಸಮೀಕ್ಷೆಯಲ್ಲಿ ಯಾವ್ಯಾವ ಸಮುದಾಯಗಳನ್ನು ಎಷ್ಟೆಷ್ಟು ಜನರನ್ನು ಮಾತಾಡಿಸಲಾಯಿತು?
ಪುರುಷರು: 55.59% ಮತ್ತು ಮಹಿಳೆಯರು: 44.41%
ನಮ್ಮ ಸಮೀಕ್ಷೆಯಲ್ಲಿ ಉತ್ತರಿಸಿದವರ ವಯೋಮಾನವಾರು ವಿವರಗಳು ಈ ಕೆಳಗಿನಂತಿವೆ
ನಮ್ಮ ಸಮೀಕ್ಷೆಯಲ್ಲಿ ಉತ್ತರಿಸಿದ ವಿವಿಧ ಜಾತಿ ಸಮುದಾಯಗಳ ಪ್ರಮಾಣ ಈ ಕೆಳಗಿನಂತಿವೆ
ನಮ್ಮ ಸಮೀಕ್ಷೆಯಲ್ಲಿ ಉತ್ತರಿಸಿದವರ ಶೈಕ್ಷಣಿಕ ಹಿನ್ನೆಲೆವಾರು ವಿವರ ಈ ಕೆಳಗಿನಂತಿವೆ
ನಮ್ಮ ಸಮೀಕ್ಷೆಯಲ್ಲಿ ಉತ್ತರಿಸಿದವರ ಉದ್ಯೋಗ/ಕಸುಬಿನ ವಿವರ ಈ ಕೆಳಗಿನಂತಿವೆ.
ಸಮೀಕ್ಷೆಯ ಆರಂಭದಲ್ಲಿ ಕಳೆದ 10 ವರ್ಷಗಳ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಳ್ವಿಕೆಯ ಕುರಿತು, ಆ ಅವಧಿಯಲ್ಲಿ ಜನರನ್ನು ಬಾಧಿಸಿದ ಸಮಸ್ಯೆಗಳೇನು ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೆ ಜನರು ಯಾವ ರೀತಿಯಲ್ಲಿ ಉತ್ತರ ನೀಡಿದರು ಎಂಬುದು ಇಲ್ಲಿದೆ.
- ಕಳೆದ 10 ವರ್ಷಗಳಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಸಮಾನತೆ ಹೆಚ್ಚಾಗಿದೆ ಎಂದು ಹೇಳಿದವರೇ ಹೆಚ್ಚು
- ಕಳೆದ 10 ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಭ್ರಷ್ಟಾಚಾರವೂ ಹೆಚ್ಚಾಗಿದೆ ಎಂದು ಕರ್ನಾಟಕದ ಜನರು ಅಭಿಪ್ರಾಯ ಪಡುತ್ತಾರೆ
- ಕರ್ನಾಟಕದ ಮುಕ್ಕಾಲು ಭಾಗದ ಜನರು ಈ 10 ವರ್ಷಗಳಲ್ಲಿ ಬೆಲೆ ಏರಿಕೆಯು ಹೆಚ್ಚಾಗಿದೆ ಎನ್ನುತ್ತಾರೆ
- ಅರ್ಧಕ್ಕೂ ಹೆಚ್ಚು ಜನರು ಈ ಅವಧಿಯಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎನ್ನುತ್ತಾರೆ
- ಅದೇ ಸಂದರ್ಭದಲ್ಲಿ ಅರ್ಧದಷ್ಟು ಜನರು ವಿಶ್ವ ಮಟ್ಟದಲ್ಲಿ ಭಾರತದ ಇಮೇಜು ಹಿಗ್ಗಿದೆ ಎನ್ನುತ್ತಾರೆ
- ಬಡವರ ಪರವಾದ ಕಾರ್ಯಕ್ರಮಗಳ ಕುರಿತು ಮಿಶ್ರ ಪ್ರತಿಕ್ರಿಯೆ ಇದೆ
- ಸಮುದಾಯಗಳ ನಡುವಿನ ಸಾಮರಸ್ಯ ಕದಡಿದೆ ಎಂದು ಹೇಳಿದವರ ಪ್ರಮಾಣ, ಸಾಮರಸ್ಯ ಚೆನ್ನಾಗಿ ಆಗಿದೆ ಎಂದು ಹೇಳಿದವರಿಗಿಂತ ಸ್ವಲ್ಪ ಹೆಚ್ಚು
ಕರ್ನಾಟಕ ಸರ್ಕಾರದ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಯೋಜನೆಗಳ ತುಲನೆಯನ್ನು ಕರ್ನಾಟಕದ ಮತದಾರರು ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ಸಮೀಕ್ಷೆಯಲ್ಲಿ ಅರಿಯುವ ಪ್ರಯತ್ನ ಮಾಡಲಾಯಿತು. ಆಗ ಅವರುಗಳು ನೀಡಿದ ಉತ್ತರಗಳು ಈ ಕೆಳಗಿನಂತಿವೆ.
- ಮತ ನೀಡುವಾಗ ಕರ್ನಾಟಕ ಸರ್ಕಾರವು ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಕುರಿತು ಆಲೋಚಿಸಿದ್ದೀರಾ ಎಂದಾಗ ಹೌದು ಎಂದವರು ಅರ್ಧಕ್ಕೂ ಹೆಚ್ಚು ಜನ
- ಮಹಿಳೆಯರು ಪುರುಷರಿಗಿಂತ 6% ಹೆಚ್ಚು ಈ ವಿಚಾರದಲ್ಲಿ ಕಾಂಗ್ರೆಸ್ ಪರವಾಗಿದ್ದಾರೆ
- ಮೋದಿ ಸರ್ಕಾರದ ಯೋಜನೆಗಳಿಗಿಂತ ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನೇ ಎತ್ತಿ ಹಿಡಿದಿದ್ದು ಎರಡು ಪಟ್ಟು ಹೆಚ್ಚು ಜನರು. ಎರಡೂ ಸಹಾಯಕ ಎಂದವರು ಕಾಲು ಭಾಗಕ್ಕಿಂತ ಹೆಚ್ಚು
ಇವೆಲ್ಲಾ ಪ್ರಶ್ನೆಗಳ ನಂತರ ನರೇಂದ್ರ ಮೋದಿ ಆಡಳಿತದ ಕುರಿತಂತೆ ಪ್ರಶ್ನೆಯನ್ನು ಕೇಳಲಾಯಿತು. ಆಗ ಬಂದ ಉತ್ತರ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಇಲ್ಲ ಎಂಬುದನ್ನು ಗಮನಿಸಬಹುದು.
ಕಳೆದ 10 ವರ್ಷಗಳ ನರೇಂದ್ರ ಮೋದಿ ಆಡಳಿತ ಅತ್ಯುತ್ತಮ ಎಂದವರು ಮೂರನೇ ಒಂದು ಭಾಗ. ಹೆಚ್ಚು ಕಡಿಮೆ ಅಷ್ಟೇ ಜನ ಅದನ್ನು ಸಾಧಾರಣ ಎಂದಿದ್ದಾರೆ. ನಿರಾಶೆ ಹೊಂದಿದವರು ಶೇ.21ರಷ್ಟು ಮಾತ್ರ.
ಈ ನಂತರ ಸಮೀಕ್ಷೆಯಲ್ಲಿ ಜನರು ಯಾವ ಸಂಗತಿಗಳ ಆಧಾರದ ಮೇಲೆ ಮತ ಚಲಾವಣೆ ಮಾಡಲು ಬಯಸುತ್ತಾರೆ ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. (ಇಡೀ ಸಮೀಕ್ಷೆಯ ಅಂತಿಮ ಪ್ರಶ್ನೆ ʼನಾಳೆಯೇ ಲೋಕಸಭಾ ಚುನಾವಣೆ ನಡೆದರೆ ನೀವು ಯಾರಿಗೆ ಮತ ಹಾಕುತ್ತೀರಿ?ʼ ಎಂದು ಕೇಳಿದಾಗ ಬರುವ ಉತ್ತರವೂ ಇದೇ ಒಂದೇ ಆಗಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು.) ಅವುಗಳಲ್ಲಿ 5 ಪ್ರಶ್ನೆಗಳಿಗೆ ಕರ್ನಾಟಕದ ಮತದಾರರು ಏನು ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಇಲ್ಲಿ ನೋಡಬಹುದು. ಈ ಪ್ರಶ್ನೆಗಳನ್ನು ಕೇಳಿದಾಗ ಅವರಲ್ಲಿ ಪ್ರತಿಯೊಂದು ಸಮಸ್ಯೆಯೂ ಅವರನ್ನು ಎಷ್ಟು ಪ್ರಮಾಣದಲ್ಲಿ (ಹೆಚ್ಚು, ಮಧ್ಯಮ, ಕಡಿಮೆ) ಬಾಧಿಸುತ್ತದೆ ಎಂಬವುಗಳಲ್ಲಿ ಒಂದನ್ನು ಆಯ್ಕೆ ಮಾಡಲು ಕೇಳಲಾಗಿತ್ತು.
- ಬೆಲೆ ಏರಿಕೆಯು ನಮ್ಮ ಮನಸ್ಸಿನಲ್ಲಿ ಇರುತ್ತದೆ ಎಂದು ಹೇಳಿದವರು ಮೂರನೇ ಎರಡು ಭಾಗ
- ಕರ್ನಾಟಕದ ಮತದಾರರಲ್ಲಿ ಅರ್ಧಕ್ಕೂ ಕಡಿಮೆ ಭಾಗ ಉದ್ಯೋಗ ಸೃಷ್ಟಿ ನಮ್ಮ ಮನಸ್ಸಿನಲ್ಲಿ ಇರುತ್ತದೆ ಎಂದಿದ್ದಾರೆ
- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ನಮ್ಮ ಮನಸ್ಸಿನಲ್ಲಿ ಇರುತ್ತವೆ ಎಂದವರು ಅರ್ಧದಷ್ಟು ಮತದಾರರು
- ಮೂರನೇ ಒಂದಕ್ಕೂ ಸ್ವಲ್ಪ ಹೆಚ್ಚು ಮತದಾರರು ಕೇಂದ್ರದ ಯೋಜನೆಗಳು ನಮ್ಮ ಮನಸ್ಸಿನಲ್ಲೂ ಇರುತ್ತವೆ ಎಂದಿದ್ದಾರೆ
- ಶೇ.22ರಷ್ಟು ಜನರು ಮಾತ್ರ ಮತದಾನದ ವೇಳೆ ನಮಗೆ ರಾಜಕೀಯ ಪಕ್ಷಗಳು ಕೊಡುವ ಹಣ ಕೆಲಸ ಮಾಡುತ್ತದೆ ಎಂದಿದ್ದಾರೆ!
ಸಮಕಾಲೀನ ವಿದ್ಯಮಾನಗಳಲ್ಲಿ ಎರಡು ಸಂಗತಿಗಳನ್ನು ಮತದಾರರ ಮುಂದಿಟ್ಟು ಅವರ ಅಭಿಪ್ರಾಯಗಳನ್ನು ಪಡೆಯಲಾಯಿತು. ಈ ಪ್ರಶ್ನೆಗಳನ್ನು ಕೇಳಿದಾಗ ಅವಕ್ಕೂ ಅವರ ರಾಜಕೀಯ ನಿಲುವಿಗೂ ಸಂಬಂಧ ಕಲ್ಪಿಸಿ ಪ್ರಶ್ನೆ ಕೇಳಲಾಗಲಿಲ್ಲ ಎಂಬುದನ್ನು ಗಮನಿಸಬೇಕು. ಹಾಗೆ ಮಾಡಿದಾಗ, ನಮ್ಮ ಅನುಭವದಲ್ಲಿ, ಅವರ ರಾಜಕೀಯ ಒಲವು ಆ ನಿರ್ದಿಷ್ಟ ಸಮಸ್ಯೆಯ ಕುರಿತು ನಿಲುವಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
- ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ದೆಹಲಿಯ ಹತ್ತಿರ ರೈತರು ಮಾಡುತ್ತಿರುವ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಎಂದವರು ಮೂರನೇ ಎರಡು ಭಾಗಕ್ಕೂ ಹೆಚ್ಚು!
- ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವಾಗುತ್ತಿದೆಯೇ ಎಂಬ ವಿಚಾರದಲ್ಲಿ ಕರ್ನಾಟಕದ ಮತದಾರರಲ್ಲಿ ಇಲ್ಲ ಎಂದವರಿಗಿಂತ ಹೌದು ಎಂದವರ ಸಂಖ್ಯೆ ಹೆಚ್ಚಾಗಿದೆ. ಈಗಲೂ ಮೂರನೆ ಒಂದು ಭಾಗಕ್ಕಿಂತ ಸ್ವಲ್ಪ ಕಡಿಮೆ ಜನರಿಗೆ ಇದರ ಬಗ್ಗೆ ಮಾಹಿತಿಯಿಲ್ಲ.
ಈದಿನ.ಕಾಮ್‌ನ ಸಮೀಕ್ಷೆಯ ಮುಂದಿನ ಭಾಗದಲ್ಲಿ ವಿವಿಧ ಸಂಸತ್ ಸದಸ್ಯರಿಗೆ ಎಷ್ಟು ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ತಿಳಿಸಲಾಗುತ್ತದೆ.