ಕರ್ನಾಟಕ ಪೊಲೀಸರು ತಮ್ಮ ಕರ್ತವ್ಯದ ಜೊತೆ ಮಾನವೀಯ ಕಾರ್ಯಗಳಿಂದಲೂ ಜನ ಮನ ಗೆಲ್ಲುತ್ತಾರೆ ಅನ್ನೋದಕ್ಕೆ ಇದೊಂದು ಘಟನೆ ನಿದರ್ಶನ. ಹೌದು, ಯಾದಗಿರಿ ಜಿಲ್ಲೆಯ ವಡಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಅನಾಥ ಶವಕ್ಕೆ ತಾವೇ ಮುಂದೆ ನಿಂತು ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವಡಗೇರಾ ತಾಲೂಕಿನ ಖಾನಾಪುರ ಗ್ರಾಮದ ರಾಮಲಿಂಗೇಶ್ವರ ಮಠಕ್ಕೆ ಕಳೆದ ವಾರದ ಹಿಂದೆ ಅಂದಾಜು 70 ಆಸುಪಾಸಿನ ಅಪರಿಚಿತ ಸಾಧುವೊಬ್ಬರು ಬಂದಿದ್ದರು. ಮಾರ್ಚ್ 7 ರಂದು ಸಂಜೆ ವಯೋಸಹಜ ಕಾಯಿಲೆಯಿಂದ ಅಥವಾ ಹಸಿವಿನಿಂದ ಮೃತಪಟ್ಟಿರಬಹುದು ಎಂದು ಮಾರ್ಚ್ 8 ರಂದು ಅದೇ ಗ್ರಾಮದ ನಾಗಪ್ಪ ದೇವೇಂದ್ರಪ್ಪ ಎಂಬುವರು ವಡಗೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ವಡಗೇರಾ ಪಿಎಸ್‌ಐ ಜೈಶ್ರೀ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತ ವ್ಯಕ್ತಿಯ ಬಗ್ಗೆ ವಿಚಾರಿಸಿದ್ದಾರೆ. ಮೃತ ಸ್ವಾಮೀಜಿ ಅನಾಥ ಹಾಗೂ ಕುಟುಂಬಸ್ಥರು ಯಾರು ಇಲ್ಲ ಎಂದು ತಿಳಿದು ಬಂದಾಗ ಅನಾಥ ಸ್ವಾಮೀಜಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ತಾವೇ ಪೊಲೀಸ್ ಸಿಬ್ಬಂದಿ ಜೊತೆ ಸೇರಿ ಧಾರ್ಮಿಕ ವಿಧಿ-ವಿಧಾನಗಳಿಂದ ಯಾದಗಿರಿಯ ಭೀಮಾ ನದಿಯ ತಟದಲ್ಲಿರುವ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ʼಜೈ ಶ್ರೀರಾಮ್ʼ ಘೋಷಣೆಗೆ ʼಜೈ ಸೀತಾರಾಮʼ ಅಲ್ಲ, ʼಜೈ ಸಂವಿಧಾನʼ ಉತ್ತರ: ಶಿವಸುಂದರ್
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅನಾಥ ಶವಕ್ಕೆ ಮಗಳಾಗಿ ಮುಂದೆ ನಿಂತು ಶವ ಸಂಸ್ಕಾರ ಮಾಡಿರುವುದು ಮಹಿಳಾ ದಿನಾಚರಣೆಯ ವಿಶೇಷತೆಗೆ ಸಾಕ್ಷಿಯಾಗಿದೆ. ಪಿಎಸ್‌ಐ ಜೈಶ್ರೀ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ತಾಲೂಕಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.