ಈ ದಿನ ಸಂಪಾದಕೀಯ | ಮಾರ್ಚ್ ನಲ್ಲೇ ನೀರಿಗಾಗಿ ಹಾಹಾಕಾರ, ಮಿತ ಬಳಕೆಯ ಪಾಠ ಕಲಿಯಲು ಇದು ಸಕಾಲ

Date:

Advertisements
ಇನ್ನೆರಡು ತಿಂಗಳಲ್ಲಿ ಮತ್ತೆ ಮಳೆಗಾಲ ಶುರುವಾಗಲಿದೆ. ಈ ಮಳೆಗಾಲದಲ್ಲಾದರೂ ವಾಡಿಕೆಯಷ್ಟು ಮಳೆ ಬರಲಿ, ಬಿಡಲಿ ಭೂಮಿಗೆ ಬಿದ್ದ ಒಂದೊಂದು ಹನಿಯನ್ನೂ ತುಂಬಿಡುವ ನಿಟ್ಟಿನಲ್ಲಿ ಈ ನಗರಕ್ಕೆ ಸಮಗ್ರ ನೀರಿನ ನೀತಿ ರೂಪಿಸುವ ಅಗತ್ಯವಿದೆ.

 

ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಹಲವು ರಾಜ್ಯಗಳಲ್ಲಿ ಪ್ರತಿವರ್ಷವೂ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಸಾಮಾನ್ಯ. ಏಪ್ರಿಲ್‌ ಮೇ ತಿಂಗಳಿನಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಕರಾವಳಿ, ಮಲೆನಾಡಿನಲ್ಲೂ ನದಿ, ಕೆರೆ, ಬಾವಿಗಳೆಲ್ಲ ಬತ್ತಿ ಹೋಗಿ ಜನರು ಕಂಗಾಲಾಗುವುದು ಅಷ್ಟೇ ಸಾಮಾನ್ಯ. ಕಾವೇರಿ ಕೊಳ್ಳದ ಜನರೂ ನೀರಿಗಾಗಿ ಪರಿತಪಿಸಿದವರೇ. ಉತ್ತರ ಕರ್ನಾಟಕದ ಬಹಳಷ್ಟು ತಾಲ್ಲೂಕು ಸದಾಕಾಲವೂ ತೀವ್ರ ಬರಗಾಲ ಅಲ್ಲದಿದ್ದರೂ ಮಳೆ ಕೊರತೆಯಿಂದ ತತ್ತರಿಸುವ ಪ್ರದೇಶಗಳು. ಒಂದು ಕೊಡ ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ಅಲೆಯಬೇಕಾಗಿದೆ. ಕೆಲವು ಕಡೆ ಹೀಗಾದರೆ ಕೆಲವು ಕಡೆ ನೀರಿನ ದುರುಪಯೋಗವೂ ಅಬಾಧಿತವಾಗಿ ನಡೆಯುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಪರಿಣಾಮವಾಗಿ ಕೆಲವು ಕಡೆ ರೈತರ ಹೊಲಗಳಲ್ಲಿ ಕರೆಂಟ್‌ ಇದ್ದಷ್ಟು ಹೊತ್ತು ನೀರು ಹಾರುತ್ತಲೇ ಇರುತ್ತದೆ. ಈ ಬರಗಾಲ ಇವರೆಲ್ಲರಿಗೂ ಪಾಠವಾಗುವ ಬರಗಾಲವಾಗಬೇಕು.

ಮಳೆಗಾಲದಲ್ಲಿ ಭರಪೂರ ಅಥವಾ ವಾಡಿಕೆಯಷ್ಟು ಮಳೆ ಬಂದರೂ ಜಲಾಶಯಗಳಲ್ಲಿ ಶೇಖರಗೊಳ್ಳುವ ನೀರು ನೀರಾವರಿ ಆಶ್ರಿತ ರೈತಾಪಿ ವರ್ಗದ ಉಸಿರು. ಆದರೆ ವಾಡಿಕೆಯಷ್ಟು ಮಳೆ ಬರದಿದ್ದರೆ ಅದರ ಪರಿಣಾಮ ಬೇಸಿಗೆಗೆ ಮುನ್ನವೇ ಅರಿವಾಗುತ್ತದೆ. ದಶಕದ ನಂತರ ರಾಜ್ಯ ಆ ಪರಿಸ್ಥಿತಿಗೆ ಬಂದುಬಿಟ್ಟಿದೆ. ಕಳೆದ ಮಳೆಗಾಲ ಯಾವ ಜಲಾಶಯಗಳೂ ಭರ್ತಿಯಾಗಿಲ್ಲ, ಕೆಆರ್‌ಎಸ್‌ಗೆ ಬಾಗೀನ ಪಡೆಯುವ ಭಾಗ್ಯವೇ ಸಿಕಿಲ್ಲ. ಈಗ ಪ್ರತಿ ತಾಲ್ಲೂಕಿನಲ್ಲೂ ಕುಡಿಯುವ ನೀರಿಗೆ ತತ್ವಾರ ಶುರುವಾಗಿದೆ.

ಸುಮಾರು ಒಂದೂವರೆ ಕೋಟಿ ಜನಸಂಖ್ಯೆ ಇರುವ ಬೆಂಗಳೂರು ಮಹಾನಗರದ ಅವಸ್ಥೆ ಕೇಳಬೇಕೇ ? ಸಾಮಾನ್ಯ ವರ್ಷಗಳಲ್ಲೇ ಬೆಂಗಳೂರಿನಲ್ಲಿ ನೀರಿನ ಅಭಾವವಿದೆ. ಬೆಂಗಳೂರಿನ ಬಹುತೇಕ ಭಾಗಗಳಿಗೆ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಕೆಂಪೇಗೌಡರು ಬೆಂಗಳೂರನ್ನು ರಾಜಧಾನಿಯನ್ನಾಗಿ ಕಟ್ಟುವಾಗಲೇ ಕೆರೆಗಳನ್ನು ಕಟ್ಟಿ ಒಂದಕ್ಕೊಂದು ಸಂಪರ್ಕ ಕಲ್ಪಿಸಿ ಎಲ್ಲಾ ಕೆರೆಗಳು ತುಂಬಿರುವಂತೆ ವ್ಯವಸ್ಥೆ ಮಾಡಿದ್ದರು. ಆದರೆ ನಗರ ಬೆಳೆದಂತೆ ಭೂಗಳ್ಳರು ಸರ್ಕಾರದ ಬೆಂಬಲದೊಂದಿಗೆ ಕೆರೆಗಳನ್ನೇ ನುಂಗಿ ಹಾಕಿದ್ದಾರೆ. ಆ ಜಾಗಗಳಲ್ಲಿ ವಸತಿ ಸಮುಚ್ಛಯಗಳು ತಲೆ ಎತ್ತಿವೆ. ನಗರದಲ್ಲಿ ಒಂದೆರಡು ಗಂಟೆ ಮಳೆ ಬಂದರೆ ಸಾಕು ಸಮುಚ್ಛಯದ ನಿವಾಸಿಗಳು ತೆಪ್ಪದ ಮೊರೆ ಹೋಗಬೇಕಾಗಿದೆ. ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ. ಮಳೆ ಕಡಿಮೆಯಾದರೂ, ಹೆಚ್ಚಾದರೂ ಈ ನಗರಕ್ಕೆ ಸಮಸ್ಯೆಯೇ.

Advertisements

ಇದರ ನಡುವೆ ನಗರದಲ್ಲಿ ಜನಜೀವನ, ಉದ್ಯಾನಗಳು, ಹೋಟೆಲು, ಉದ್ಯಮಗಳು, ಕಟ್ಟಡ ನಿರ್ಮಾಣ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಬಳಕೆ ನಿತ್ಯವೂ ನೀರು ಎಲ್ಲಿಂದ ಬರಬೇಕು? ಬೆಂಗಳೂರಿನ ತುಂಬಾ ಬೋರ್‌ವೆಲ್‌ ಕೊರೆದ ಪರಿಣಾಮ ಭೂಮಿ ತುಂಬ ತೂತು ಬಿದ್ದಿದೆ. ಇನ್ನು ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ನೀರೇ ಇರುವುದಿಲ್ಲ ಎಂದು ಕೆಲ ವರ್ಷಗಳ ಹಿಂದೆ ಅಧ್ಯಯನವೊಂದು ಹೇಳಿತ್ತು. ಈ ಮಳೆಗಾಲ ಮುಗಿಯುತ್ತಿದ್ದಂತೆ ಬೆಂಗಳೂರಿನ ಕೊಳವೆ ಬಾವಿಗಳು ಬರಿದಾಗಿವೆ. ಈಗ ಎಲ್ಲೆಡೆಯೂ ಟ್ಯಾಂಕರ್‌ ನೀರಿಗೆ ಭಾರೀ ಬೇಡಿಕೆ. ಏಕಾಏಕಿ ಟ್ಯಾಂಕರ್‌ ನೀರಿನ ದರ ಮೂರು ಪಟ್ಟು ಹೆಚ್ಚಿಸಲಾಗಿದೆ. ಸರ್ಕಾರ ತಕ್ಷಣವೇ ಬೆಂಗಳೂರು ನಗರ ವ್ಯಾಪ್ತಿಯ  ಖಾಸಗಿ ಟ್ಯಾಂಕರ್‌ಗಳನ್ನು ತನ್ನ ಸುಪರ್ದಿಗೆ ಪಡೆದು ದರ ನಿಗದಿ ಮಾಡಿರುವುದು ಸರಿಯಾದ ಕ್ರಮ.

ನಗರದ ಕೆಲವು ಕಡೆ ಈಗಲೂ ಮನೆ ಮುಂದೆ ರಸ್ತೆ ತೊಳೆಯುವ ಅಭ್ಯಾಸಕ್ಕೆ ಬ್ರೇಕ್‌ ಬಿದ್ದಿಲ್ಲ. ಮನೆ ಮುಂದಿನ ಟಾರು ರಸ್ತೆಗೆ ಪೈಪಿನಲ್ಲಿ ನೀರು ಹರಿಸಿ ತೊಳೆಯುವುದು ನಗರದ ಮಹಿಳೆಯರ ದಿನದ ಮೊದಲ ಕೆಲಸ. ನೀರಿನ ಅಭಾವದ ಬಗ್ಗೆ ಟಿವಿ, ಪತ್ರಿಕೆಗಳಲ್ಲಿ ಎಷ್ಟೇ ಸುದ್ದಿ ಪ್ರಸಾರವಾದರೂ ಅವರ ಮನೆಗಳಿಗೆ ನೀರಿನ ಪೂರೈಕೆ ನಿಲ್ಲುವವರೆಗೂ ಈ ಕೆಲಸ ಅಬಾಧಿತ. ಈ ಬರಗಾಲದಲ್ಲೂ ನಿತ್ಯವೂ ವಾಹನಗಳನ್ನು ತೊಳೆಯುವುದು, ಮೆಟ್ಟಿಲು, ಅಂಗಳಕ್ಕೆ ಬೇಕಾಬಿಟ್ಟಿ ನೀರು ಸುರಿಯುವುದಕ್ಕೆ ಸ್ವಯಂ ನಿಯಂತ್ರಣ ಹೇರಿಕೊಳ್ಳದಿದ್ದರೆ ಹೇಗೆ? ನೀರಿನ ಅಭಾವದ ಅನುಭವ ಆಗುವವರೆಗೂ ಬುದ್ದಿ ಕಲಿಯದ ಮನಸ್ಥಿತಿಯ ಜನರು ನಗರದಲ್ಲಿದ್ದಾರೆ. ಅವರನ್ನು ಸರಿ ದಾರಿಗೆ ತರುವ ಕೆಲಸ ಕೂಡಾ ಮನೆಮನೆಗೆ ನೀರು ಪೂರೈಕೆ ಮಾಡಿದಷ್ಟೇ ಅಗತ್ಯವಾಗಿ ಮಾಡಬೇಕಿದೆ.

ಈಗಲಾದರೂ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ನೀರಿನ ದುರ್ಬಳಕೆ, ಅತಿಯಾಗಿ ಬಳಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ತುರ್ತು ಅಗತ್ಯವಿದೆ. ಕೆಲ ವರ್ಷಗಳ ಹಿಂದೆ ನಗರದಲ್ಲಿ ಹೊಸ ಮನೆ ನಿರ್ಮಾಣ ಮಾಡುವವರಿಗೆ ಮಳೆನೀರು ಕೊಯ್ಲು ವ್ಯವಸ್ಥೆ ಕಡ್ಡಾಯಗೊಳಿಸಲಾಗಿತ್ತು. ಅದನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗಿದೆ ಎಂಬ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಪರೀಕ್ಷಿಸಬೇಕಿದೆ. ನಗರದ ಕೆಲವು ಸರ್ಕಾರಿ ಕಟ್ಟಡಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ನೆಹರೂ ತಾರಾಲಯದಲ್ಲಿ ಇಡೀ ವರ್ಷಕ್ಕೆ ಬೇಕಾಗುವಷ್ಟು ನೀರನ್ನು ಸಂಗ್ರಹಿಸಲಾಗುತ್ತಿದೆ. ಕೆಲವು ಉದ್ಯಾನಗಳಲ್ಲಿ ಮಳೆನೀರು ಸಂಗ್ರಹದ ವ್ಯವಸ್ಥೆ ಮಾಡಲಾಗಿದೆ. ಮನೆಗಳಲ್ಲಿ ಟೆರೇಸ್‌ನಿಂದ ಬೀಳುವ ಮಳೆ ನೀರನ್ನು ದೊಡ್ಡ ಸಂಪ್‌ನಲ್ಲಿ ಶೇಖರಿಸಿಟ್ಟರೆ ಅಡುಗೆ ಬಿಟ್ಟು ಉಳಿದೆಲ್ಲ ಅಗತ್ಯಗಳಿಗೆ ಬಳಸಬಹುದು. ಗ್ರಾಮೀಣ ಭಾಗಗಳಲ್ಲಿ ಇಂಗುಗುಂಡಿ, ಕೆರೆಗಳನ್ನು ನಿರ್ಮಿಸಿ ಒಂದೇ ವರ್ಷದಲ್ಲಿ ಅಂತರ್ಜಲ ಮಟ್ಟ ಉತ್ತಮಗೊಂಡ ಉದಾಹರಣೆಯಿದೆ.

ನೀರಿಗಾಗಿ ಪರದಾಟ ಶುರುವಾಗಿದ್ದರೂ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಅಧಿಕಾರಿಗಳು ಈ ನಿಟ್ಟಿನಲ್ಲಿಯೂ ಯೋಚಿಸಬೇಕಾಗಿದೆ. ಇನ್ನೆರಡು ತಿಂಗಳಲ್ಲಿ ಮಳೆಗಾಲ ಶುರುವಾಗಲಿದೆ. ಈ ಮಳೆಗಾಲದಲ್ಲಾದರೂ ವಾಡಿಕೆಯಷ್ಟು ಮಳೆ ಬರಲಿ ಬಿಡಲಿ, ಭೂಮಿಗೆ ಬಿದ್ದ ಒಂದೊಂದು ಹನಿಯನ್ನೂ ತುಂಬಿಡುವ ನಿಟ್ಟಿನಲ್ಲಿ ಈ ನಗರಕ್ಕೆ ಸಮಗ್ರ ನೀರಿನ ನೀತಿ ರೂಪಿಸುವ ಅಗತ್ಯವಿದೆ.

ಏನೇ ಆದರೂ ಮಳೆ ನೀರಿನಷ್ಟು ಅಗ್ಗದ ಜಲಸಂಪನ್ಮೂಲ ಬೇರೆ ಯಾವುದೂ ಇಲ್ಲ. ಅದನ್ನು ಅಮೃತದಂತೆ ಸಂರಕ್ಷಿಸಿ, ಬಳಸುವ ಜವಾಬ್ದಾರಿ ಎಲ್ಲರದೂ ಆಗಬೇಕು. ‘ನೀರಿನ ಮಿತ ಬಳಕೆ’ ನೀರಿನ ಅಭಾವ ಇದ್ದಾಗ ಮಾತ್ರವಲ್ಲ, ಯಥೇಚ್ಛ ನೀರು ಇದ್ದಾಗಲೂ ವ್ಯರ್ಥ ಮಾಡದಂತೆ ಎಚ್ಚರವಹಿಸುವ ಅಗತ್ಯವಿದೆ. ಬೆಳೆಯುತ್ತಲೇ ಇರುವ ಬೆಂಗಳೂರಿನ ನೀರಿನ ಅಗತ್ಯ ಪೂರೈಕೆಗೆ ದೀರ್ಘಕಾಲೀನ ಯೋಜನೆ ರೂಪಿಸುವ ಬಗ್ಗೆ ಯೋಚಿಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X