ಬಿಜೆಪಿ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ಕಾಂತೇಶ್‌ಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ “ಚರ್ಚೆ ನಡೆಸಿ ಪಕ್ಷೇತರ ನಿಲ್ಲುವ ತೀರ್ಮಾನ” ಮಾಡುವುದಾಗಿ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, “ನಳಿನ್ ಕುಮಾರ್ ಕಟೀಲ್, ಸದಾನಂದ ಗೌಡ, ಪ್ರತಾಪ್ ಸಿಂಹ, ಸಿಟಿ ರವಿ ಹೀಗೆ ಹಲವರಿಗೆ ಅನ್ಯಾಯವಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸಲಾಗುತ್ತಿದೆ. ಈ ಕೆಲಸವನ್ನ ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಹಲವರಿಗೆ ಇದೆ” ಎಂದರು.
“ಪಕ್ಷೇತರರಾಗಿ ನೀವು ನಿಲ್ಲಬೇಕು, ನಿಮ್ಮನ್ನು ನಾವು ಗೆಲ್ಲಿಸುತ್ತೇವೆ ಎಂದು ಒತ್ತಡ ಹಾಕಲಾಗುತ್ತಿದೆ. ಈ ವಿಚಾರದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ನಾನು ಪಕ್ಷ ತೊರೆಯುತ್ತೇನೆ ಎಂದಾಗಲಿ ಅಥವಾ ಪಕ್ಷೇತರನಾಗಿ ನಿಲ್ಲುತ್ತೇನೆ ಎಂದು ಹೇಳಿಲ್ಲ. ಅಭಿಪ್ರಾಯ ಸಂಗ್ರಹ ಮಾಡಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಕಾರ್ಯಕರ್ತರಿಗೆ ಹೇಳಿದೆ” ಎಂದು ತಿಳಿಸಿದರು.
ಬಹಿರಂಗವಾಗಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ “ನಿಮ್ಮ ಮಗ ಹಾವೇರಿಯಲ್ಲಿ ಚುನಾವಣೆ ಸಿದ್ಧತೆ ಮಾಡಲಿ, ನಾನು ಟಿಕೆಟ್ ಕೊಡಿಸುತ್ತೇನೆ. ನಾನೇ ಅಲ್ಲಿ ಪ್ರಚಾರ ಮಾಡಿ ನಿಮ್ಮ ಮಗನನ್ನು ಗೆಲ್ಲಿಸುತ್ತೇನೆ ಎಂದು ಬಿಎಸ್‌ವೈ ಹೇಳಿದ್ದರು. ಆದರೆ ಈಗ ಮೋಸ ಮಾಡಿದ್ದಾರೆ, ಅವರೇ ಟಿಕೆಟ್ ತಪ್ಪಿಸಿದ್ದಾರೆ” ಎಂದು ಆರೋಪಿಸಿದರು.
“ಯಡಿಯೂರಪ್ಪ ಭರವಸೆ ನೀಡಿ ಈಗ ಯಾಕೆ ಮೋಸ ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಇದರಿಂದಾಗಿ ನಮ್ಮ ಕಾರ್ಯಕರ್ತರಿಗೆ ನೋವಾಗಿದೆ. ಈಗ ನಮ್ಮ ಪಕ್ಷವೂ ಉಳಿಯಬೇಕು, ಕಾರ್ಯಕರ್ತರ ನೋವೂ ದೂರವಾಗಬೇಕು. ನಾನು ಕಾರ್ಯಕರ್ತರ ತೀರ್ಮಾನದ ಬಗ್ಗೆ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಜೊತೆಗೆ ಮಾತನಾಡಿ ಅಂತಿಮ ನಿರ್ಧಾರ ಮಾಡುತ್ತೇನೆ” ಎಂದರು.
“ಈಗ ನನ್ನನ್ನು ರಾಧಾ ಮೋಹನ್ ಅಗರ್ ಲಾಲ್ ಬೆಂಗಳೂರಿಗೆ ಕರೆದಿದ್ದಾರೆ. ಆದರೆ ಈಗಾಗಲೇ ಟಿಕೆಟ್ ಘೋಷಣೆ ಮಾಡಿಯಾಗಿದೆ, ಈಗ ಯಾಕೆ ಹೋಗುವುದು, ಇನ್ನು ಮಾತನಾಡಿ ಏನು ಲಾಭವಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಬಿಜೆಪಿ ನಾಯಕರಿಗೆ ಯಡಿಯೂರಪ್ಪನವರು ಮೋಸ ಮಾಡಿದ್ದಾರೆ. ಬೊಮ್ಮಾಯಿ, ಕರಂದ್ಲಾಜೆಯವರ ಟಿಕೆಟ್ ಯಾರ ಕೈಯಲ್ಲಿ ಇದೆ” ಎಂದು ಪ್ರಶ್ನಿಸಿದ ಈಶ್ವರಪ್ಪ, “ಬೊಮ್ಮಾಯಿಯವರು ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದರು. ಬಸವರಾಜ್ ಬೊಮ್ಮಾಯಿಯವರೇ ಚುನಾವಣಾ ಸಮಿತಿಯಲ್ಲಿ ಕಾಂತೇಶ್ ಅವರನ್ನು ಹಾವೇರಿಯಲ್ಲಿ ನಿಲ್ಲಿಸಿ ಎಂದು ಹೇಳಿದ್ದರು. ಆದರೆ ಈಗ ಅವರಿಗೆ ಟಿಕೆಟ್ ಕೊಡಲಾಗಿದೆ. ಕುತ್ತಿಗೆ ಹಿಚುಕುವ ಕಾರ್ಯ ಮಾಡಲಾಗುತ್ತಿದೆ” ಎಂದು ದೂರಿದರು.