ಗುರುವಾರ ಕಿಸಾನ್ ಮಹಾಪಂಚಾಯತ್‌ಗಾಗಿ ಪಂಜಾಬ್‌ನಿಂದ ಸಾವಿರಾರು ರೈತರು ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳುತ್ತಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್ ಮಹಾಪಂಚಾಯತ್ ಆಯೋಜಿಸಿದೆ.
ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ, ಒಂದು ವೇಳೆ, ರೈತರು ದೆಹಲಿ ಪ್ರವೇಶಿಸದಂತೆ ತಡೆದರೆ ಧರಣಿ ನಡೆಸಿ, ರೈಲು ಸಂಚಾರ ನಿರ್ಬಂಧಿಸುತ್ತೇವೆ ಎಂದು ಎಸ್‌ಕೆಎಂ ಹೇಳಿದೆ.
ಎಸ್‌ಕೆಎಂ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಮಾತನಾಡಿ, “ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ಸಾವಿರಾರು ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಜನರು ದೆಹಲಿಯತ್ತ ಪಾದಯಾತ್ರೆ ಆರಂಭಿಸಿದ್ದಾರೆ. ರೈತರನ್ನು ರಾಷ್ಟ್ರ ರಾಜಧಾನಿ ತಲುಪದಂತೆ ತಡೆದರೆ, ಧರಣಿ ಮತ್ತು ರೈಲು ರೋಕೋ ಪ್ರತಿಭಟನೆಗಳನ್ನು ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಪಂಜಾಬ್‌ನಿಂದ 50,000ಕ್ಕೂ ಹೆಚ್ಚು ರೈತರು ಬಸ್‌ಗಳು, ಟ್ರಕ್‌ಗಳು ಮತ್ತು ರೈಲುಗಳಲ್ಲಿ ಮಹಾಪಂಚಾಯತ್‌ನಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ನಾವು ರೈತರಿಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿದ್ದೇವೆ. ಅವರು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿ ಮಾಡುವುದಿಲ್ಲವೆಂದು ರೈತರು ಭರವಸೆ ನೀಡಿದ್ದಾರೆ” ಎಂದು ದೆಹಲಿ ಕೇಂದ್ರ ಡಿಸಿಪಿ ಎಂ ಹರ್ಷವರ್ಧನ್ ಹೇಳಿದ್ದಾರೆ.
“ರಾಮಲೀಲಾ ಮೈದಾನದಲ್ಲಿ 5,000 ಜನರು ಸೇರಲು ಅವಕಾಶ ನೀಡಲಾಗಿದೆ. ಯಾವುದೇ ಟ್ರ್ಯಾಕ್ಟರ್-ಟ್ರಾಲಿ ಅಥವಾ ಮೆರವಣಿಗೆಗೆ ಅವಕಾಶವಿಲ್ಲ” ಎಂದು ಡಿಸಿಪಿ ಹೇಳಿದ್ದಾರೆ. ಅಲ್ಲದೆ, ಅರೆಸೇನಾ ಪಡೆಗಳನ್ನು ನಿಯೋಜಿಸಲು ಸರ್ಕಾರವನ್ನು ಕೋರಿರುವುದಾಗಿ ತಿಳಿಸಿದ್ದಾರೆ.
“ಪ್ರಚೋದನಾಕಾರಿ ಭಾಷಣ ಮಾಡಿದರೆ, ವೇದಿಕೆಯಿಂದ ಸ್ಪೀಕರ್‌ಗಳನ್ನು ತೆಗೆದುಹಾಕುವುದಾಗಿ ರೈತರಿಗೆ ಸೂಚಿಸಿದ್ದೇವೆ. ಮಧ್ಯಾಹ್ನ 3 ಗಂಟೆ ಒಳಗೆ ಕಾರ್ಯಕ್ರಮ ಮುಗಿಸಲು ಕೇಳಿದ್ದೇವೆ” ಎಂದು ಹೇಳಿದ್ದಾರೆ.