ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಈಗ ಸಂಪೂರ್ಣ ಉತ್ತರ ಸಿಕ್ಕಿತು. ಈ ವಿಚಾರವಾಗಿ ಬಿಜೆಪಿ ಅಭ್ಯರ್ಥಿ ಅಂತಿಮ ಪಟ್ಟಿ ಬಿಡುಗಡೆಯಾಗಿ ಜನರಲ್ಲಿದ್ದ ಕುತೂಹಲಕ್ಕೆ ಪೂರ್ಣವಿರಾಮ ನೀಡಿದಂತಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಭಾರತೀಯ ಜನತಾ ಪಕ್ಷದಿಂದ ಸತತ ನಾಲ್ಕು ಬಾರಿ ಸಂಸದರಾಗಿ ಹೊರಹೊಮ್ಮಿದ ಹಾಲಿ ಸಂಸದ ಪ್ರಲ್ಹಾದ್ ಜೋಶಿ ಅವರಿಗೆ ಮತ್ತೊಮ್ಮೆ 5 ನೇ ಬಾರಿ ಟಿಕೆಟ್ ಲಭಿಸಿದ್ದು ವಿವಿಧ ಚರ್ಚೆ ಮತ್ತು ಗುಸುಗುಸುಗಳಿಗೆ ಮುಕ್ತಾಯ ಹೇಳಿದಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಗೆ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಸಿಗದ ಕಾರಣ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇತ್ತೀಚಿಗೆ ಕಾಂಗ್ರೆಸ್ ತೊರೆದು ಪುನಃ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿದ್ದರು. ಆ ಬೆನ್ನಲ್ಲೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರಿಗೆ ಟಿಕೆಟ್ ಸಿಗಬೇಕೆಂದು ಅನೇಕ ಕಡೆಗಳಿಂದ ಒತ್ತಾಯ ಮತ್ತು ಬೇಡಿಕೆಗಳಿದ್ದವು. ಅದೂ ಈಗ ಟಿಕೆಟ್ ತಪ್ಪಿ ಹೋದ ಕಾರಣ ಜಗದೀಶ್ ಶೆಟ್ಟರ್ ಗೆ ನಿರಾಶೆ ಉಂಟುಮಾಡಿದೆ.
ಭಾರತೀಯ ರಾಜಕಾರಣಿಯಾದ ಪ್ರಲ್ಹಾದ್ ಜೋಶಿ ಮೋದಿ ಸಂಪುಟದಲ್ಲಿ ಪ್ರಭಾವಿ ಸಂಸದ. 1992-1994 ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಂಘಪರಿವಾರ ತ್ರಿವರ್ಣ ಧ್ವಜ ಹಾರಿಸುವ ಆಂದೋಲನದಲ್ಲಿ ಭಾಗವಹಿಸುವ ಮೂಲಕ ಪ್ರಲ್ಹಾದ್ ಜೋಶಿ ಕ್ಷೇತ್ರದ ಜನರ ಗಮನಕ್ಕೆ ಬರುತ್ತಾರೆ. ನಂತರ 2004, 2009, 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಚುನಾಯಿತರಾಗಿ ಹೊರಹೊಮ್ಮುತ್ತಾರೆ. 2019 ಮೇ 30 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಲ್ಹಾದ್ ಜೋಶಿ ಪ್ರಮಾಣ ವಚನ ಸ್ವೀಕರಿಸಿದ್ದರು.
1962 ನವೆಂಬರ್ 27 ರಂದು ಜನಿಸಿದ ಪ್ರಲ್ಹಾದ್ ಜೋಶಿಯವರು ಮೂಲ ವಿಜಯಪುರ. ಮತ್ತು ಇವರು ಆರಂಭಿಕ ದಿನಗಳಲ್ಲಿ ಕೈಗಾರಿಕೋದ್ಯಮಿ ಆಗಿದ್ದರು. ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಯ ಸಂದರ್ಭದಲ್ಲಿ ‘ಕಾಶ್ಮೀರ ಉಳಿಸಿ ಅಭಿಯಾನದಲ್ಲಿ’ ಇನ್ನಷ್ಟು ಜನರಿಗೆ ಪರಿಚಯವಾದರು. ಮತ್ತು ಹಿಂದುತ್ವ ರಾಜಕಾರಣದಲ್ಲಿ ಜನರಿಗೆ ಮತ್ತು ಹತ್ತಿರವಾದರು. ಕಳೆದ 2019 ನೇ ಲೋಕಸಭಾ ಚುನಾವಣೆಯಲ್ಲಿ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿ ನೇಮಕಗೊಂಡರು. ಈಗ ಮತ್ತೆ 5 ನೇ ಬಾರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದಾರೆ.
ಪ್ರಲ್ಹಾದ್ ಜೋಶಿ ಪೈಪೋಟಿಯಾಗಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದೆ ಮತ್ತು ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸುವುದೊ ಕಾದು ನೋಡಬೇಕಿದೆ.
