ತುಮಕೂರು ಲೋಕಸಭಾ ಕ್ಷೇತ್ರ ಬಣ ಬಡಿದಾಟಕ್ಕೆ ಸಾಕ್ಷಿಯಾಗಿದ್ದು, ಬಿಜೆಪಿಯಲ್ಲಿ ಲಿಂಗಾಯತ v/s ಲಿಂಗಾಯತ ಚರ್ಚೆ ಶುರುವಾಗಿದೆ. ನೊಳಂಬರಿಗೆ ಟಿಕೆಟ್ ನೀಡಬೇಕೆಂದು ಮಾಧುಸ್ವಾಮಿ ಟವಲ್ ಹಾಕಿದ್ದು ಒಂದು ಕಡೆಯಾದರೆ, ತನಗೇ ಟಿಕೆಟ್ ನೀಡಬೇಕೆಂದು ಪೂರ್ವಾಶ್ರಮದ ಸಂಬಂಧಿ ಡಾ. ಎಸ್. ಪರಮೇಶ್ ಸ್ವಾಮೀಜಿಯೊಬ್ಬರಿಂದ ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ಕೊಡಿಸಿದ್ದು ಫಲನೀಡಿಲ್ಲ.
ಲೋಕಸಭಾ ಚುನಾವಣಾ ಪೂರ್ವ ಇತಿಹಾಸ ಗಮನಿಸಿದರೆ ಇಲ್ಲಿಯವರೆಗೂ ಒಕ್ಕಲಿಗ v/s ಲಿಂಗಾಯತ ವಿರುದ್ಧ ಕಾಂಬಿನೇಷನ್ ಮಾಡಿಕೊಂಡೆ ರಾಜಕೀಯ ಪಕ್ಷಗಳು ಚುನಾವಣೆಯನ್ನು ಎದುರಿಸುತ್ತಾ ಬಂದಿವೆ. ಆದರೆ, ಈ ಬಾರಿ 2024ರಲ್ಲಿ ಕಾಂಗ್ರೆಸ್ ನಿಂದ ಒಕ್ಕಲಿಗರಿಗೆ, ಬಿಜೆಪಿಯಿಂದ ಲಿಂಗಾಯತರಿಗೆ ಟಿಕೆಟ್ ನೀಡಿದರೂ ಜಿಲ್ಲೆಯಲ್ಲಿ ಲಿಂಗಾಯತ v/s ಲಿಂಗಾಯತರ ನಡುವೆಯೇ ಪೈಪೋಟಿ ಹೆಚ್ಚಾಗಿದೆ. ಇಂತಹ ತಣಿಸಲಾಗದ ಒಳಬೇಗುದಿ ಬಿಜೆಪಿಗೆ ಮುಳ್ಳಾದರೆ, ಕಾಂಗ್ರೆಸ್‌ಗೆ ಹೂವಿನ ಹಾದಿಯಾಗಲಿದೆ.
ಹಿಂದಿನಿಂದಲೂ ಒಕ್ಕಲಿಗ ಮತಗಳು ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಬಿದ್ದಿಲ್ಲ ಎಂಬ ಚರ್ಚೆ ಇದೆ. ಅದರೆ, ಸೋಮಣ್ಣ ಒಕ್ಕಲಿಗ ಮತ ಬುಟ್ಟಿಗೆ ಕೈ ಹಾಕುವ ಉದ್ದೇಶದಿಂದ ದೇವೇಗೌಡರ ಕಾಲಿಗೆ ಬಿದ್ದು ಬಿಜೆಪಿ ಜೆಡಿಎಸ್ ಮೈತ್ರಿ ಆಗಿದ್ದರೂ ಸಹ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುವ ತಂತ್ರಗಾರಿಕೆಯನ್ನು ಹೆಣೆದಿದ್ದರು. ಅದರೆ ಅಂತಿಮವಾಗಿ ಸೋಮಣ್ಣರಿಗೆ ಬಿಜೆಪಿಯಿಂದ ಟಿಕೆಟ್ ಆಗಿದೆ. ಒಂದು ವೇಳೆ ಸೋಮಣ್ಣ ಜೆಡಿಎಸ್ ನಿಂದ ಕಣಕ್ಕಿಳಿದಿದ್ದರೆ ಸೋಮಣ್ಣರ ತಂತ್ರಗಾರಿಕೆ ಫಲಪ್ರದಾಯವಾಗುತ್ತಿತ್ತೋ ಏನೋ?
ಆದರೆ, ಈಗ ಮೈತ್ರಿಯಿಂದ ಕಣಕ್ಕಿಳಿದಿದ್ದರೂ ಒಕ್ಕಲಿಗ v/s ಲಿಂಗಾಯತ ಹಿನ್ನೆಲೆಯಲ್ಲಿ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳು ಯೂಟರ್ನ್ ತೆಗೆದುಕೊಂಡು ಮುದ್ದಹನುಮೇಗೌಡರ ‘ಕೈ’ ಸೇರಲಿವೆ. ಇತ್ತ, ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರ ಒಬ್ಬರಿಗೊಬ್ಬರ ತೊಳಲಾಟ, ‘ನನಗೆ ಸಿಗದಿದ್ದರೆ, ನಿನಗೂ ಬೇಡ’ ಎನ್ನುವಂತಿದೆ. ಇದರಿಂದ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ಮುದ್ದಹನುಮೇಗೌಡ ಇದರ ಪ್ರಯೋಜನ ಪಡೆಯಲು ಲೆಕ್ಕಾಚಾರ ಹಾಕಿದಂತಿದೆ.
ʼಲೂಸ್ ಟಾಕ್ʼ ಮಾಧುಸ್ವಾಮಿ
ಮಾಧುಸ್ವಾಮಿ ಒಬ್ಬ ಕಿಂಗ್‌ಪಿನ್ ಎನ್ನುವ ಮೂಲಕ ಹಾಲಿ ಸಂಸದ ಜಿ. ಎಸ್ ಬಸವರಾಜು ತಮ್ಮೊಳಗಿರುವ ಬೇಗೆಯನ್ನು ಹೊರಹಾಕಿದ್ದು ಇಲ್ಲಿ ನೆನೆಯಬಹುದು. ತುಮಕೂರಿಗೆ ಹಿಂದೊಮ್ಮೆ ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜು ಅವರೊಂದಿಗಿನ ಪಿಸುಮಾತಿನ ಚರ್ಚೆಯಲ್ಲಿ ಮಾಧುಸ್ವಾಮಿ ಒಬ್ಬ ಉತ್ತರ ಕೊರಿಯಾದ ಸರ್ವಾಧಿಕಾರಿ ಎಂಬ ಒಟ್ಟರ್ಥ ಬರುವಂತೆ ‘ಕಿಂಗ್‌ಪಿನ್’ ಎಂದು ಜರಿದಿದ್ದರು. ಇದರ ನಡುವೆ ಮಾಧುಸ್ವಾಮಿ ನಡೆ ಕೂಡ ಹಾಗೇ ಇತ್ತು ಎನ್ನುವುದಕ್ಕೆ ಸಾಕ್ಷಿಯೆಂಬಂತೆ 2020ರಲ್ಲಿ ಕೋಲಾರ ತಾಲೂಕಿನ ಅಗ್ರಹಾರ ಕೆರೆ ವೀಕ್ಷಣೆಗೆ ತೆರಳಿದ್ದ ಮಾಧುಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿ ಅವರಿಗೆ ‘ಹೇಯ್ ಮುಚ್ಚು ಬಾಯಿ, ರಾಸ್ಕಾಲ್ ಎಂಬ ಮಾತುಗಳನ್ನಾಡಿದ್ದರು. ಇದಕ್ಕೆ ರಾಜ್ಯಾದಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ವೇಳೆ ಮಾಧುಸ್ವಾಮಿ ತಾನೊಬ್ಬ ಭಾರೀ ಕೆಟ್ಟ ಮನುಷ್ಯ ಎಂದು ತನಗೆ ತಾನೇ ಸರ್ಟಿಫಿಕೇಟ್ ಕೊಟ್ಟುಕೊಂಡಿದ್ದರು. ಹಾಗಾಗಿ ಇನ್ನೂ ಅನೇಕ ಕಾರಣಗಳಿಂದ ಮಾಧುಸ್ವಾಮಿಯವರಿಗೆ ಅವರ ಮಾತೇ ಪಾಶವಾಗಿ ಪರಿಣಮಿಸಿದ್ದು, ಬಸವರಾಜು ಬಣಕ್ಕೆ ಅಸ್ತ್ರ ಸಿಕ್ಕಂತಾಗಿದೆ.
ಮಾಧುಸ್ವಾಮಿ ಒಬ್ಬ ಪ್ರಾಮಾಣಿಕ ಎಂದು ಖಚಿತವಾಗಿ ಹೇಳಲಾಗದಿದ್ದರೂ ದಕ್ಷ ಮತ್ತು ನಿಷ್ಠುರ ರಾಜಕಾರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಾಧುಸ್ವಾಮಿಯನ್ನು ರಾಜಕಾರಣದಲ್ಲಿ ಬೆಳೆಯಲು ಬಿಟ್ಟರೆ ಜಿಲ್ಲೆಯ ರಾಜಕೀಯ ಹಿಡಿತವನ್ನು ಎಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೋ ಎಂಬ ಭಯ ಹಾಲಿ ಸಂಸದ ಜಿ. ಎಸ್. ಬಸವರಾಜು ಅವರಿಗೆ ನಿದ್ದೆಯಲ್ಲೂ ಬೆಚ್ಚಿಬೀಳುವಂತೆ ಮಾಡಿದೆ.
ಜಿ.ಎಸ್. ಬಸವರಾಜು ವಿರುದ್ಧ ವಾಗ್ದಾಳಿ ನಡೆಸಿರುವ ಮಾಧುಸ್ವಾಮಿ ಬೆಂಬಲಿಗರು, ಜಿಎಸ್ಬಿಯವರು ಜಿಲ್ಲೆಯಲ್ಲಿ ಒಳ ಒಪ್ಪಂದದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಜೊತೆಗೆ ಬಸವರಾಜು ಅವರನ್ನು ಪಕ್ಷದಿಂದ ದೂರ ಇಡದಿದ್ದರೆ, ಜಿಲ್ಲೆಯಲ್ಲಿ ಪಕ್ಷ ನಾಶವಾಗುವುದು ಎಂಬ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದರು.

ವಿ. ಸೋಮಣ್ಣ ಮೈತ್ರಿ ಅಭ್ಯರ್ಥಿಯಾಗಿ ಕಣಕಿಳಿಯುತ್ತಿರುವುದು ಜೆಸಿಎಂಗೆ ಸುತಾರಾಂ ಇಷ್ಟವಿಲ್ಲ. ತನ್ನ ರಾಜಕೀಯ ಎದುರಾಳಿ ಜೆಡಿಎಸ್ ವಿರುದ್ಧ ರಾಜಕಾರಣ ಮಾಡಿಕೊಂಡು ಬರುತ್ತಿರುವ ಜೆಸಿಎಂಗೆ ಮೈತ್ರಿ ಒಪ್ಪಂದ ಬಲವಂತದ ಮದುವೆಯಂತಾಗಿದೆ. ಜೆಡಿಎಸ್ ನಾಯಕರ ವಿರುದ್ಧ ಇಷ್ಟೊಂದು ರೋಷಾವೇಶ ಹೊಂದಿರುವ ಮಾಧುಸ್ವಾಮಿ ಜೆಡಿಎಸ್ ಸಹಭಾಗಿತ್ವದಲ್ಲಿ ಲೋಕಸಮರ ಜಯಿಸಲು ಜೊತೆಗೂಡುವರೇ? ಬಸವರಾಜು ಬೆಂಬಲಿತ ಅಭ್ಯರ್ಥಿ ಸೋಮಣ್ಣ ತುಮಕೂರಿನಿಂದ ಸ್ಪರ್ಧಿಸುತ್ತಿರುವುದು ಮಾಧುಸ್ವಾಮಿ ರಾಜಕೀಯ ಭವಿಷ್ಯಕ್ಕೆ ಕುತ್ತು ತರಲಿದೆ. ಅದೃಷ್ಟವಶಾತ್ ಸೋಮಣ್ಣ ಗೆದ್ದರೆ ಬಸವರಾಜು ಅವರು ಮಾಧುಸ್ವಾಮಿಯ ಓಟಕ್ಕೆ ಬ್ರೇಕ್ ಹಾಕುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಸೋಮಣ್ಣನವರ ಸೋಲಿಗೆ ಮಾಧುಸ್ವಾಮಿ ಟೊಂಕಕಟ್ಟಿ ನಿಂತಿದ್ದಾರೆ ಎಂಬ ಗುಪ್ತ ಮಾಹಿತಿ ಲಭ್ಯವಾಗಿದೆ.
ವಲಸಿಗರು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಗೆದ್ದ ಇತಿಹಾಸ ಇಲ್ಲ ಎನ್ನುವ ಕಾರಣಕ್ಕೆ ಹೊರಗಿನವರಿಗೆ ಟಿಕೆಟ್ ನೀಡಬಾರದು ಎಂಬ ಮಾಧುಸ್ವಾಮಿಯವರ ಹೇಳಿಕೆಯ ಒಳ ಅರ್ಥ, ವಲಸಿಗರಿಗೆ ಟಿಕೆಟ್ ನೀಡಿದರೆ ಸೋಲು ಖಚಿತ ಎನ್ನುವುದೇ ಆಗಿದೆ. ಈ ಹಿನ್ನೆಲೆಯಲ್ಲೇ ಬಿಜೆಪಿಗೆ ಅಲ್ಪಸ್ವಲ್ಪ ನೆಲೆ ಇರುವ ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆಯಲ್ಲಿ ಬಿಜೆಪಿ ಕಾರ್ಯಕರ್ತರೇ ಬೀದಿಗಿಳಿದು ವಲಸಿಗರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಸೋಮಣ್ಣ ‘ಗೋ ಬ್ಯಾಕ್’ ಘೋಷಣೆ ಮೊಳಗಿಸಿ ಸೋಮಣ್ಣನ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುದ್ದಹನುಮೇಗೌಡರ ಋಣಸೇವೆಗೆ ಬಿಜೆಪಿ, ಜೆಡಿಎಸ್ ಎನ್ನದೆ ಪಕ್ಷಾತೀತವಾಗಿ ಶಾಸಕರು, ಮಾಜಿ ಶಾಸಕರು ಬೆಂಬಲ ನೀಡಲು ಮುಂದಾಗಿದ್ದು, ಜಿಲ್ಲಾ ರಾಜಕಾರಣ ಒಕ್ಕಲಿಗರ ಕೈ ಸೇರಬೇಕೆಂಬ ದೃಷ್ಟಿಯಿಂದ ಒಕ್ಕಲಿಗ ನಾಯಕರು ಗೌಡರಿಗೆ ತೆರೆಮರೆಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಹಾಲಿ ಸಂಸದ ಜಿ.ಎಸ್. ಬಸವರಾಜು ಅವರ ಸಮರ್ಪಕವಲ್ಲದ ಕಾರ್ಯವೈಖರಿಯಿಂದ ಬಿಜೆಪಿಗೆ ಜಿಲ್ಲೆಯಲ್ಲಿ ವಿರೋಧದ ಅಲೆಯಿದೆ. ಮತದಾರರಿಗೆ ಕ್ಷೇತ್ರದ ಎಂಪಿ ಯಾರು, ಅವರ ಅಭಿವೃದ್ಧಿ ಕೆಲಸಗಳೇನು? ಎಂಬ ಪ್ರಶ್ನೆಗಳಿಗೆ, ಗೊತ್ತಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಇವೆಲ್ಲ ಬಿಜೆಪಿಗೆ ಶಾಪವಾಗಿ ಪರಿಣಮಿಸಲಿವೆ. ಸೋಮಣ್ಣನವರಿಗೆ ಟಿಕೆಟ್ ನೀಡಿದರೆ ಮುದ್ದಹನುಮೇಗೌಡ ಪ್ರಚಾರ ಮಾಡದೆ ಮನೆಯಲ್ಲಿದ್ದರೂ ಗೆಲ್ಲುತ್ತಾರೆ ಎಂದು ಸ್ವಪಕ್ಷೀಯರೇ ಹೇಳುತ್ತಿರುವುದು ಬಿಜೆಪಿಗೆ ಸೋಲಿನ ಮುನ್ಸೂಚನೆ ದೊರೆತಿದೆ.
ಸೋಮಣ್ಣ ಮತ್ತು ಮಾಧುಸ್ವಾಮಿ ಅಬ್ಬರದಲ್ಲಿ ಚಂದ್ರಶೇಖರ್, ಡಾ.ಎಸ್.ಪರಮೇಶ್, ವಿನಯ್ ಬಿದರೆ ತರಗೆಲೆ ರೀತಿ ತೂರಿಹೋದರು. ಲೋಕಸಭಾ ಟಿಕೆಟ್ ಲಾಟರಿ ಟಿಕೆಟ್ ಅಲ್ಲ ಎನ್ನುವುದು ಸೊಗಡು ಶಿವಣ್ಣ, ವಿನಯ್ ಬಿದರೆಗೆ ಅರ್ಥವಾಗಿದೆ. ಇವರು ʼಗೆದ್ದರೆ ಆಡೋಕೆ ಬಂದಿದ್ದೆ, ಸೋತರೆ ನೋಡಕೆ ಬಂದಿದ್ದೆʼ ಅನ್ನುವ ಕೆಟಗರಿಗೆ ಸೇರಿದವರು ಎಂಬುದು ಕಾರ್ಯಕರ್ತರಿಂದಲೇ ಕೇಳಿ ಬರುತ್ತಿದೆ.

1992ರಲ್ಲಿ ಬಾಬರಿ ಮಸೀದ ಧ್ವಂಸ ಪ್ರಕರಣ ಹಾಗೂ ದೇಶದ ಅಶಾಂತಿಗೆ ಕಾರಣೀಭೂತರಾಗಿದ್ದ ಎಲ್.ಕೆ. ಅಡ್ವಾಣಿಯವರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಿದೆ. ಆದರೆ, ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಅನ್ನ, ಅಕ್ಷರ, ಅರಿವು ದಾಸೋಹ ನೀಡಿರುವಂತಹ ಸಿದ್ಧಗಂಗಾ ಶ್ರೀ, ಶ್ರೀ ಶಿವಕುಮಾರಸ್ವಾಮಿಗಳಿಗೆ ಭಾರತ ರತ್ನ ನೀಡದೆ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕ ಜನತೆಯ ಭಾವನೆಗಳಿಗೆ ದ್ರೋಹ ಎಸಗಿದೆ. ರಾಜ್ಯ ಬಿಜೆಪಿ ನಾಯಕರು ಕೂಡ ಮಾಧುಸ್ವಾಮಿ, ಸೋಮಣ್ಣ, ಬಸವರಾಜು ಆದಿಯಾಗಿ ಮೋದಿ ಎದುರು ನಿಂತು ಭಾರತ ರತ್ನ ಕೇಳಲು ಧೈರ್ಯ ಮಾಡದೆ ಪುಕ್ಕಲುತನ ಪ್ರದರ್ಶಿಸಿದ್ದಾರೆ. 2014 ರಲ್ಲಿ ಸಂಸದರಾಗಿದ್ದ ಎಸ್. ಪಿ. ಮುದ್ದಹನುಮೇಗೌಡ ಸಂಸತ್ ನಲ್ಲಿ ಸಿದ್ಧಗಂಗಾ ಶ್ರೀಗೆ ಭಾರತರತ್ನ ನೀಡಬೇಕು ಎಂದು ಗಟ್ಟಿದನಿಯಲ್ಲಿ ಆಗ್ರಹ ಮಾಡಿದ್ದರು. ಹಾಗಾಗಿ ಮುದ್ದಹನುಮೇಗೌಡ ಲಿಂಗಾಯತ ಸಮುದಾಯಕ್ಕೆ ಅಚ್ಚುಮೆಚ್ಚು. ಸೋಮಣ್ಣ ವಲಸಿಗರಾದ ಕಾರಣ ಸೋತರೆ ಕ್ಷೇತ್ರ ಬಿಡುತ್ತಾರೆ, ಗೆದ್ದರೆ ಬೇರು ಮಟ್ಟದ ಕಾರ್ಯಕರ್ತರ ಒಡನಾಟ ಇಲ್ಲದ ಅವರಿಗೆ ಜಿಲ್ಲೆಯ ಸಮಸ್ಯೆಗಳು ಗೋಚರಿಸುವುದು ಕಷ್ಟಕರ. ಬೆಳಗಾದರೆ ಕೈಗೆ ಸಿಗುವ ಮುದ್ದಹನುಮೇಗೌಡರಿಗೆ ಪಕ್ಷಾತೀತವಾಗಿ ಬೆಂಬಲ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ ಲೋಕಸಭಾ ಚುನಾವಣೆ | ತುಮಕೂರಿನಲ್ಲೇ ಕೊನೆಯಾಗುತ್ತಾ ಸೋಮಣ್ಣ ರಾಜಕೀಯ?
ಮೋದಿ ಮುಖ ತೋರಿಸಿ ಕತ್ತೆ ನಿಲ್ಲಿಸಿದರೂ ಗೆಲ್ಲುತ್ತದೆ ಎಂದು ಸಂಸದ ಜಿ.ಎಸ್ ಬಸವರಾಜು ಹೇಳಿದ್ದರು. ಮೈಸೂರಿನಲ್ಲಿ ಹಗಲಿರುಳು ಮೋದಿ ಜಪ ಮಾಡುತಿದ್ದ ಪ್ರತಾಪ್ ಸಿಂಹ ಸೋಲುತ್ತಾರೆ ಎಂದು ಸರ್ವೇ ಆಧಾರಿತ ಮಾಹಿತಿ ಮೇರೆಗೆ ಟಿಕೆಟ್ ತಪ್ಪಿಸಿ ಯದುವೀರ್ ಗೆ ನೀಡಲಾಗಿದೆಯಂತೆ. ಮೋದಿ ಮುಖ ತೋರಿಸಿ ಗೆಲ್ಲುವುದೇ ಆಗಿದ್ದರೆ ಪ್ರತಾಪ್ ಸಿಂಹಗೆ ಟಿಕೆಟ್ ನೀಡಬಹುದಿತ್ತು. ಕಾಂಗ್ರೆಸ್ ಗ್ಯಾರಂಟಿಗಳ ಅಲೆ, ಕೇಂದ್ರ ಬಿಜೆಪಿಯ ಜನವಿರೋಧಿ ಧೋರಣೆ, ಕೃಷಿ ಕಾಯ್ದೆ, ಬೆಲೆ ಏರಿಕೆ, ಭ್ರಷ್ಟಾಚಾರ, ಖಾಸಗೀಕರಣ, ನಿರುದ್ಯೋಗ, ಕೋಮುವಾದದಂತಹ ಅಂಶಗಳು ಮೋದಿ ಅಲೆಯನ್ನು ಮಂಕು ಮಾಡಿದೆ. ಗುಜರಾತ್ ಮಾಡೆಲ್, ಚಿನ್ನದ ರಸ್ತೆ, ಬುಲೆಟ್ ರೈಲು ಹೀಗೆ ನೀಡಿರುವ ಭರವಸೆಗಳಲ್ಲಿ ಹತ್ತು ವರ್ಷದಲ್ಲಿ ಒಂದೂ ಈಡೇರದ ಬೋಗಸ್ ಆಶ್ವಾಸನೆಗಳನ್ನು ಜನರೇ ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದ ವಿಧಾನ ಸಭೆ ಚುನಾವಣೆ ಸೋತ ನಂತರ ಇತ್ತಿಚೇಗೆ ಬಿಜೆಪಿ ನಾಯಕರ ಸಭೆಯೊಂದರಲ್ಲಿ ಪ್ರಧಾನಿ ಮೋದಿಯವರು ‘ಎಲ್ಲದಕ್ಕೂ ನನ್ನನ್ನೇ ನೆಚ್ಚಿಕೊಳ್ಳುವುದು ಬೇಡ’ ಎಂದು ಸಲಹೆ ನೀಡಿರುವುದು ಬಿಜೆಪಿಗೆ ಕೌಂಟ್ ಡೌನ್ ಶುರುವಾಗಿದೆ ಎಂಬುದನ್ನು ಸೂಚಿಸುತ್ತಿದೆ. ಇದು ತುಮಕೂರು ಲೋಕಸಭಾ ಕ್ಷೇತ್ರಕ್ಕೂ ಅನ್ವಯಿಸಲಿದೆ

ಅದ್ಭುತ ವಿಶ್ಲೇಷಣೆ. ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಿದರೆ, ಬಿಜೆಪಿ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ತುಮಕೂರು ಲೋಕಸಭಾ ಕ್ಷೇತ್ರದ ವಾಸ್ತವ ಲೆಕ್ಕಾಚಾರವಿದು.