ಯಾರೋ ಇಬ್ಬರು ಕೂತು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಗುರಿ ಮುಟ್ಟುವ ಸಲುವಾಗಿ ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿಎಂ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ; ಯಾವಾಗ ಸ್ಪಷ್ಟ ಬಹುಮತ” ಎಂದು. ಈ ನಿಟ್ಟಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದಲೂ ಈ ಆಯ್ಕೆ ಮಾಡಲಾಗಿದೆ. ಸಿದ್ದರಾಮಯ್ಯ ಅವರಿಗೆ ನಾವು ಉತ್ತರಿಸುವುದು ಯಾವಾಗ?” ಎಂದರು.
“ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಈಗ ದಯನೀಯವಾಗಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಸಚಿವರು ಕೂಡಾ ಸ್ಪರ್ಧೆಗೆ ಸಿದ್ದರಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಟಿಕೆಟ್ ಗೊಂದಲ ವಿಚಾರವಾಗಿ ಪ್ರತಿಕ್ರಿಯೆ ನೀಡಿ, “ಸಣ್ಣ ಪುಟ್ಟ ವ್ಯತ್ಯಾಸ ಇರುತ್ತದೆ. ಆದರೆ ನಮ್ಮ ಅಭ್ಯರ್ಥಿ ಗೆಲ್ಲಿಸುವ ಮೂಲಕ ಉತ್ತರ ಸಿಗುತ್ತದೆ. ಕಾಂತೇಶ್ ಅವರಿಗೆ ಹಾವೇರಿ ಟಿಕೆಟ್ ಸಿಗದ್ದಕ್ಕೆ ಅಸಮಾಧಾನಗೊಂಡಿರುವ ಪಕ್ಷದ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಜೊತೆ ಹಿರಿಯರು ಅವರ ಜೊತೆ ಸಂಪರ್ಕದಲ್ಲಿ ಇದ್ದಾರೆ. 28 ಕ್ಷೇತ್ರ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಟಿಕೆಟ್ ನೀಡಲಾಗಿದೆ. ಎಲ್ಲದಕ್ಕೂ ಲೋಕಸಭಾ ಚುನಾವಣೆಯ ಫಲಿತಾಂಶ ಉತ್ತರ ಸಿಗಲಿದೆ” ಎಂದರು.
“ಜಗದೀಶ್ ಶೆಟ್ಟರ್ ಕುರಿತಾದ ಗೊಂದಲಕ್ಕೆ ಮೂರು ನಾಲ್ಕು ದಿನಗಳಲ್ಲಿ ಉತ್ತರ ಸಿಗಲಿದೆ. ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡಿರುವ ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಬೆಂಗಳೂರು ಗ್ರಾಮಾಂತರಕ್ಕೆ ಬಿಜೆಪಿ ಅಚ್ಚರಿಯ ಆಯ್ಕೆ ಮಾಡಿದೆ. ಖ್ಯಾತ ಹೃದ್ರೋಗ ತಜ್ಞರನ್ನು ಆಯ್ಕೆ ಮಾಡಿದ್ದು ಸಂತೋಷ ತಂದಿದೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿ ಹೊಸ ದಾಖಲೆ ಸೃಷ್ಟಿ ಮಾಡಬೇಕು ಹಾಗೂ ಮೋದಿ ಕೈ ಬಲಪಡಿಸಬೇಕು ಎಂಬ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿ ಘೋಷಣೆ ಮಾಡಲಾಗಿದೆ” ಎಂದು ಹೇಳಿದರು.
