ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಜಗನ್ನಾಥ ದೇವಾಲಯವಿರುವ ಒಡಿಶಾದ ಪ್ರಸಿದ್ಧ ದೇವಾಲಯ ನಗರ ‘ಪುರಿ’ ಲೋಕಸಭೆ ಚುನಾವಣೆಯಲ್ಲಿ ತೀವ್ರ ಕದನದ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಆಳವಾಗಿ ಬೇರೂರಿರುವ ತನ್ನ ಧಾರ್ಮಿಕ ಪ್ರಾಮುಖ್ಯತೆ ಮತ್ತು ಐತಿಹಾಸಿಕ ಖ್ಯಾತಿಯ ಜತೆಗೆ ರಾಜಕೀಯವಾಗಿಯೂ ಪುರಿ ಮುಂಚೂಣಿಯಲ್ಲಿದ್ದು, ರಾಷ್ಟ್ರದ ಗಮನ ಸೆಳೆಯುತ್ತಿದೆ.
ಒಡಿಶಾದ ಸ್ಥಳೀಯ ಪಕ್ಷ ಬಿಜು ಜನತಾ ದಳ (ಬಿಜೆಡಿ)ಯ ಭದ್ರಕೋಟೆಯಾಗಿರುವ ಪುರಿಯಲ್ಲಿ ಸುಪ್ರೀಂ ಕೋರ್ಟ್ ವಕೀಲ ಪಿನಾಕಿ ಮಿಶ್ರಾ ಅವರು 2009ರಿಂದ ನಿರಂತರವಾಗಿ ಗೆಲ್ಲುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಪಿನಾಕಿ ಮಿಶ್ರಾ ಅವರು 11,000 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಈಗ, ಈ ಚುನಾವಣೆಯಲ್ಲಿಯೂ ಅವರೇ ಸ್ಪರ್ಧಿಸುವ ಸಾಧ್ಯತೆಗಳಿವೆ. ಅಂದಹಾಗೆ, ಹಿಂದುತ್ವ, ಹಿಂದುರಾಷ್ಟ್ರ, ಭಕ್ತಿಯ ಬಗ್ಗೆ ಮಾತನಾಡುವ ಬಿಜೆಪಿ ಇಲ್ಲಿ ಒಮ್ಮೆಯೂ ಗೆಲ್ಲಲಾಗಿಲ್ಲ ಎಂಬುದು ವಿಶೇಷ.
ಪುರಿ ಕ್ಷೇತ್ರವನ್ನು ಎರಡು ದಶಕಗಳಿಂದ ಬಿಜೆಡಿ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. 15.5 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಬರೋಬ್ಬರಿ ಶೇ.96ರಷ್ಟು ಮತದಾರರು ಹಿಂದುಗಳೇ ಆಗಿದ್ದಾರೆ. ಧಾರ್ಮಿಕ ಭಾವನೆಗಳು ಇಲ್ಲಿನ ಚುನಾವಣೆಯಲ್ಲಿ ಗಣನೀಯ ಪಾತ್ರ ವಹಿಸುತ್ತವೆ. ಹೆಚ್ಚುವರಿಯಾಗಿ, ಗಣನೀಯವಾದ ಬ್ರಾಹ್ಮಣ ಮತದಾರರು ಕೂಡ ರಾಜಕೀಯ ಸಮೀಕರಣದಲ್ಲಿ ಪ್ರಮುಖ ಪಾತ್ರವಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಡಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಬ್ರಾಹ್ಮಣ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದವು. ಅದರೂ, ಬಿಜೆಪಿ ಗೆಲುವು ಸಾಧ್ಯವಾಗಲೇ ಇಲ್ಲ. ಈ ಬಾರಿಯೂ ಬ್ರಾಹ್ಮಣರೇ ಕದನ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ.