ಬಿಜೆಪಿ ಆಡಳಿತದ ಕಳೆದ ಹತ್ತು ವರ್ಷಗಳಲ್ಲಿ 1,435 ಉದ್ಯಮಪತಿಗಳಿಗೆ 20 ಲಕ್ಷ ಕೋಟಿ ರೂಪಾಯಿ ಆದಾಯ ವಿವಿಧ ರೂಪಗಳಲ್ಲಿ ಹರಿದುಹೋಗಿದೆ
“ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ” ಎಂದಿದ್ದರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್. ಖಂಡಿತವಾಗಿಯೂ ಸರ್ಕಾರಗಳು ಮಹಿಳಾ ಪರವಾದ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಬೇಕು. ಆ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಪಾಲುದಾರಿಕೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಗ್ಯಾರಂಟಿಗಳು ಸ್ವಾಗತಾರ್ಹ ಕ್ರಮಗಳು. ಜೊತೆಗೆ ಇದೇ ಮಾದರಿಯ ಐದು ಗ್ಯಾರಂಟಿಗಳನ್ನು ರಾಷ್ಟ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಘೋಷಣೆಯನ್ನೂ ಕಾಂಗ್ರೆಸ್ ಮಾಡಿದೆ.
ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿ ನೀಡುವುದು, ಕೇಂದ್ರ ಸರ್ಕಾರದ ಎಲ್ಲ ನೇಮಕಾತಿಗಳಲ್ಲಿ ಶೇ. 50ರಷ್ಟು ಮಹಿಳೆಯರಿಗೆ ಮೀಸಲಾತಿ; ಅಂಗನವಾಡಿ, ಆಶಾ ಮತ್ತು ಬಿಸಿಯೂಟ ನೌಕರರಿಗೆ ಕೇಂದ್ರದಿಂದ ಸಿಗುವ ವೇತನವನ್ನು ದ್ವಿಗುಣಗೊಳಿಸುವುದು, ಮಹಿಳೆಯರಿಗೆ ಸಿಗುವ ಹಕ್ಕುಗಳು, ಯೋಜನೆಗಳು ಮತ್ತು ಸವಲತ್ತುಗಳ ಕುರಿತು ತಿಳಿಸುವುದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಲಹೆಗಾರರನ್ನು ನೇಮಿಸುವುದು, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ‘ಸಾವಿತ್ರಿಬಾಯಿ ಉದ್ಯೋಗಿ ಮಹಿಳಾ ನಿಲಯ’ ತೆರೆಯುವುದು ಮತ್ತು ಈ ನಿಲಯಗಳನ್ನು ದ್ವಿಗುಣಗೊಳಿಸುವುದು- ಎಂಬ ಐದು ಖಾತ್ರಿಗಳನ್ನು ಜನರ ಮುಂದೆ ಕಾಂಗ್ರೆಸ್ ಇಟ್ಟಿದೆ.
ಹೊಟ್ಟೆ ತುಂಬಿದ ಜನ ಗ್ಯಾರಂಟಿಗಳನ್ನು ‘ಬಿಟ್ಟಿ ಭಾಗ್ಯ’ ಎಂದು ಹೀಗಳೆಯುವುದನ್ನು ನಾವು ನೋಡಿದ್ದೇವೆ. ಗ್ಯಾರಂಟಿಗಳಿಂದ ದೇಶ ಮತ್ತು ರಾಜ್ಯ ದಿವಾಳಿಯಾಗುತ್ತವೆ ಎಂದು ವಾದ ಮಾಡುವ ಬಿಜೆಪಿ, ‘ಮೋದಿ ಗ್ಯಾರಂಟಿ’ ಎಂಬ ಪ್ರಚಾರವನ್ನು ಶುರುಮಾಡಿದೆ. ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಜನವರ್ಗಕ್ಕೆ ಆಳುವ ಪಕ್ಷಗಳು ಒಂದಿಷ್ಟಾದರೂ ನೆರವು ನೀಡುವುದು ಅಗತ್ಯ. ಹೀಗಾಗಿ ಗ್ಯಾರಂಟಿಗಳು ತಕ್ಕಮಟ್ಟಿಗೆ ಅನುಕೂಲವಾಗುತ್ತವೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
ಮಹಿಳೆಯರಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದರೆ ಮಹಿಳೆಯರಲ್ಲಿ ದುಡಿಯುವ ವರ್ಗ ಹೆಚ್ಚಾಗುತ್ತದೆ ಎನ್ನುತ್ತವೆ ಕೆಲವು ಅಂಕಿ – ಅಂಶಗಳು. ತಮಿಳುನಾಡಿನಲ್ಲಿ ಕೆಲವು ಕಾರ್ಯಕ್ರಮಗಳನ್ನು ತಂದಿದ್ದರಿಂದ ಗ್ರಾಮೀಣ ತಮಿಳುನಾಡಿನ ಶೇ. 35ರಷ್ಟು, ನಗರ ತಮಿಳುನಾಡಿನ ಶೇ. 23.6ರಷ್ಟು ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಂಡರು. ಅಖಿಲ ಭಾರತ ಮಟ್ಟದಲ್ಲಿ 15.4 % ಗ್ರಾಮೀಣ ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಂಡರೆ, ನಗರ ಮಹಿಳೆಯರು 7.5% ಉದ್ಯೋಗದಲ್ಲಿ ಇದ್ದಾರೆ. ಅಂದರೆ ತಮಿಳುನಾಡಿನ ಅಂಕಿಅಂಶಕ್ಕೆ ಅಖಿಲ ಭಾರತ ಮಟ್ಟದ ಅಂಕಿ ಅಂಶವನ್ನು ಹೋಲಿಕೆ ಮಾಡಿದರೆ ಮಹಿಳೆಯ ಉಗ್ಯೋಗಶೀಲತೆ ತುಂಬಾ ಕಡಿಮೆ ಇದೆ. ಹೀಗಾಗಿ ಗ್ಯಾರಂಟಿಗಳು ಒಂದಿಷ್ಟು ಬಲ ನೀಡಬಹುದು ಎಂಬುದು ನಿಜ.
ಆದರೆ ಗ್ಯಾರಂಟಿಯೇ ಎಲ್ಲಕ್ಕೂ ಪರಿಹಾರ ಅಲ್ಲ ಎಂಬುದನ್ನು ನಾವು ಮರೆಯಬಾರದು. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಕಸರತ್ತನ್ನು ಸರ್ಕಾರಗಳು ಮಾಡುವುದುಂಟು. ಏನನ್ನೂ ನೀಡದ ಬಿಜೆಪಿಗಿಂತ ಇಷ್ಟಾದರೂ ನೀಡುವ ಕಾಂಗ್ರೆಸ್ ಪರವಾಗಿಲ್ಲ ಎಂದು ಭಾವಿಸಬಹುದಾದರೂ ಜನರಿಗೆ ಶಾಶ್ವತ ಪರಿಹಾರಗಳ ಅಗತ್ಯವಿದೆ. ಗ್ಯಾರಂಟಿಗೆ ಒತ್ತು ನೀಡುವ ಪಕ್ಷಗಳು, ಭೂಮಿಯ ಹಕ್ಕಿನ ವಿಚಾರದಲ್ಲಿ ಮೌನ ವಹಿಸುವುದು ಆಷಾಢಭೂತಿತನವಾಗುತ್ತದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಒಂದು ಬಡ ಕುಟುಂಬಕ್ಕೆ ಒಂದು ಲಕ್ಷ ನೀಡಿದರೆ ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ಕೋಟಿ ರೂಪಾಯಿ ಬೇಕಾಗಬಹುದು. 44 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುವ ದೇಶಕ್ಕೆ 4 ಲಕ್ಷ ಕೋಟಿ ರೂಪಾಯಿ ದೊಡ್ಡದಲ್ಲ. ಆದರೆ 4 ಲಕ್ಷ ರೂಪಾಯಿಯನ್ನು ಭರ್ತಿ ಮಾಡಲು ಬಂಡವಾಳಶಾಹಿ ವ್ಯವಸ್ಥೆಗೆ ಮಣೆ ಹಾಕುತ್ತೇವೆ ಎಂದು ಹೋದರೆ ಅಪಾಯ ನಿಶ್ಚಿತ.
ಗ್ಯಾರಂಟಿಗಳನ್ನು ನೀಡಿ, ದುಡಿಯುವ ಜನರ ಮೇಲೆಯೇ ತೆರಿಗೆಯನ್ನು ಹಾಕುತ್ತಾ ಹೋದರೆ ಅರ್ಥವಿಲ್ಲ. ಕಾರ್ಪೊರೇಟ್ ಕುಳಗಳಿಗೆ ಸಂಪತ್ತನ್ನು ವರ್ಗಾಯಿಸುವುದು ಕೂಡ ಎಡಗೈಯಲ್ಲಿ ಕೊಟ್ಟು ಬಲಗೈಯಲ್ಲಿ ಕಿತ್ತುಕೊಂಡಂತೆ ಆಗುತ್ತದೆ. ಬಂಡವಾಳ, ಭೂಮಿ ಮತ್ತು ಕೂಲಿಗಾರ ವ್ಯವಸ್ಥೆಗಿಂತ ಸಹಕಾರ ಕೇಂದ್ರಿತ ಆರ್ಥಿಕತೆಗೆ ಒತ್ತು ನೀಡಬೇಕಾದದ್ದು ಸದ್ಯದ ತುರ್ತು. ಬಂಡವಾಳಶಾಹಿ ವ್ಯವಸ್ಥೆಯನ್ನು ಇಟ್ಟುಕೊಂಡು ಜನರಲ್ಲಿ ಸ್ವಾವಲಂಬನೆಯನ್ನು ತರುವುದು ಕೂಡ ಕಷ್ಟವಾಗುತ್ತದೆ.
ಉತ್ಪಾದನೆಯ ಕೇಂದ್ರದಲ್ಲಿ ಸಾಮಾನ್ಯ ಜನರು ಇರಬೇಕು. ಭೂಮಿಯನ್ನು ಪಡೆದ ಕಾರ್ಪೊರೇಟ್ ಕುಳಗಳು ಒಂದಿಷ್ಟು ಮಂದಿಗೆ ಕೆಲಸವನ್ನು ಕೊಡಬಹುದು. ಆದರೆ ಅದು ನಿಜಅರ್ಥದ ಸ್ವಾವಲಂಬನೆಯೇ ಎಂಬ ಪ್ರಶ್ನೆ ಕೇಳಿಕೊಳ್ಳಬೇಕಾಗುತ್ತದೆ. ಇದರ ಬದಲು ಸಣ್ಣ ಕೃಷಿಕನಿಗೆ ಆದಾಯ ತರುವ ಮಾದರಿಗಳನ್ನು ಸೃಷ್ಟಿಸಬೇಕು.
ಆರ್ಥಿಕ ಮಾದರಿಗಳ ಆಳವಾದ ಗ್ರಹಿಕೆಗೆ ಹೊರತಾಗಿ ಹೇಳುವುದಾದರೆ, ಬಿಜೆಪಿ ಆಡಳಿತದ ಕಳೆದ ಹತ್ತು ವರ್ಷಗಳಲ್ಲಿ 1,435 ಉದ್ಯಮಪತಿಗಳಿಗೆ 20 ಲಕ್ಷ ಕೋಟಿ ರೂಪಾಯಿ ಆದಾಯ ಪ್ರತ್ಯೇಕ್ಷವಾಗಿ, ಪರೋಕ್ಷವಾಗಿ, ರಿಯಾಯಿತಿ, ವಿನಾಯಿತಿ, ಪ್ರೋತ್ಸಾಹಧನ ಮೊದಲಾದ ರೂಪಗಳಲ್ಲಿ ಹರಿದುಹೋಗಿದೆ. ಅದರಲ್ಲಿ ಒಂದು ಭಾಗವನ್ನಾದರೂ ಬಡವರಿಗೆ ಕೊಡುತ್ತೇವೆ ಎಂಬುದು ಆಶಾದಾಯಕ ಬೆಳವಣಿಗೆಯೇ ಸರಿ. ತಕ್ಷಣಕ್ಕೆ ಜನರಿಗೆ ಗ್ಯಾರಂಟಿ ನೀಡುತ್ತಲೇ ದೀರ್ಘಕಾಲೀನ ಆರ್ಥಿಕ ಸ್ವಾವಲಂಬನಾ ಮಾರ್ಗಗಳನ್ನು ಚಿಂತಿಸುವುದು ಇಂದಿನ ತುರ್ತು.
