ಚುನಾವಣಾ ಆಯೋಗವು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಕಂಪನಿಗಳು ಮತ್ತು ಬಾಂಡ್‌ಗಳನ್ನು ನಗದೀಕರಿಸಿಕೊಂಡಿರುವ ಪಕ್ಷಗಳ ವಿವರವನ್ನು ಪ್ರಕಟಿಸಿದೆ. ಬಾಂಡ್‌ಗಳ ಮೂಲಕ ಅತೀ ಹೆಚ್ಚು ಹಣ ಪಡೆದ ಪಕ್ಷ ಬಿಜೆಪಿ ಎಂಬುದು ನಿರೀಕ್ಷೆಯಂತೆ ಸಾಬೀತಾಗಿದೆ. ಇದೆಲ್ಲದರ ನಡುವೆ, ಕುತೂಹಲಕಾರಿ ಅಂಶವೊಂದು ಹೊರಬಿದ್ದಿದೆ. ಅತೀ ಕಡಿಮೆ ಆದಾಯ ಹೊಂದಿರುವ ಕಂಪನಿಯೊಂದು ಅತೀ ಹೆಚ್ಚು ಹಣ ನೀಡಿ, ಮೂರನೇ ಸ್ಥಾನದಲ್ಲಿದೆ.
ಬಾಂಡ್ ಮೂಲಕ ಪಕ್ಷಗಳಿಗೆ ಹೆಚ್ಚು ಹಣ ನೀಡಿದ ಕಂಪನಿಗಳಲ್ಲಿ ‘ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್’ ಮೂರನೇ ಸ್ಥಾನದಲ್ಲಿದೆ. ಈ ಕಂಪನಿ ಕಡಿಮೆ ಪ್ರಸಿದ್ದಿ ಪಡೆದಿದ್ದರೂ, ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ 410 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಆದರೆ, ಈ ಕಂಪನಿಯ ಆದಾಯ ಬರೋಬ್ಬರಿ 95 ಪಟ್ಟು ಕಡಿಮೆಯಿದೆ.
ಕಂಪನಿಯ ಹಣಕಾಸಿನ ದಾಖಲೆಗಳ, ಈ ಕಂಪನಿ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್ ಜೊತೆಗೆ ಸಂಬಂಧ ಹೊಂದಿದೆ ಎಂಬುದು ಕೂಡ ತಿಳಿದುಬಂದಿದೆ.
ಕಂಪನಿಯು 2021-22ರ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 360 ಕೋಟಿ ರೂಪಾಯಿಗಳನ್ನು ನೀಡಿದೆ. ಅದೇ ವರ್ಷದಲ್ಲಿ ಅದರ ನಿವ್ವಳ ಲಾಭ ಕೇವಲ 21.72 ಕೋಟಿ ರೂ. ಇತ್ತು. 2023-24ರ ಆರ್ಥಿಕ ವರ್ಷದಲ್ಲಿ ಕಂಪನಿಯು ಇನ್ನೂ 50 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಈ ಕಂಪನಿ ಮಾತ್ರವಲ್ಲದೆ, ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕೂಡ 1,368 ಕೋಟಿ ರೂ.ಗಳನ್ನು ಪಕ್ಷಗಳಿಗೆ ದೇಣಿಗೆ ನೀಡಿದೆ. ಆದರೆ, ಈ ಕಂಪನಿಯ 2019-23ರವರೆಗಿನ ಆದಾಯ ಕೇವಲ 215 ಕೋಟಿ ರೂ. ಮಾತ್ರ ಇದೆ. ಅಂದರೆ, ಈ ಕಂಪನಿಯು ತನ್ನ ಆದಾಯಕ್ಕಿಂತ 635% ಅಧಿಕ ಮೊತ್ತವನ್ನು ದೇಣಿಗೆ ನೀಡಿದೆ.
ಅದೇ ರೀತಿ, ಎಂಕೆಜೆ ಎಂಟರ್‌ಪ್ರೈಸಸ್ ಲಿಮಿಟೆಡ್ ಕಂಪನಿಯು 192 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಆದರೆ, ಈ ಕಂಪನಿಯ 2019-23ರವರೆಗಿನ ಆದಾಯ ಕೇವಲ 58 ಕೋಟಿ ರೂ. ಮಾತ್ರವೇ ಇದೆ. ಈ ಕಂಪನಿ ತನ್ನ ಆದಾಯಕ್ಕಿಂತ 329% ಅಧಿಕ ಮೊತ್ತವನ್ನು ದೇಣಿಗೆ ನೀಡಿದೆ.
ಮದನ್‌ಲಾಲ್ ಲಿಮಿಟೆಡ್ ಎಂಬ ಕಂಪನಿಯು 185 ರೂ. ದೇಣಿಗೆ ನೀಡಿದ್ದು, ಈ ಕಂಪನಿಯ ಆದಾಯ 10 ಕೋಟಿ ರೂ. ಮಾತ್ರವೇ ಇದೆ. ಈ ಕಂಪನಿ ಬರೋಬ್ಬರಿ 1,874% ಹೆಚ್ಚು ಹಣವನ್ನು ದೇಣಿಗೆಯಾಗಿ ಪಕ್ಷಗಳಿಗೆ ನೀಡಿದೆ.
ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಮೂರು ನಿರ್ದೇಶಕರನ್ನು ಹೊಂದಿದೆ. ವಿಪುಲ್ ಪ್ರಣಲಾಲ್ ಮೆಹ್ತಾ, ಶ್ರೀಧರ್ ಟಿಟ್ಟಿ ಮತ್ತು ತಪಸ್ ಮಿತ್ರಾ. ಮಿತ್ರಾ ಅವರು ಇತರ 26 ಕಂಪನಿಗಳಲ್ಲಿ ನಿರ್ದೇಶಕರಾಗಿದ್ದರೆ, ಮೆಹ್ತಾ ಇತರ ಎಂಟು ಕಂಪನಿಗಳಲ್ಲಿದ್ದಾರೆ.
ಮೆಹ್ತಾ ಅವರು ರೆಲ್ ಐಕಾನ್ಸ್ ಮತ್ತು ಟ್ರೇಡರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ಸೇರಿ 8 ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ.
ಮಿತ್ರಾ ನಿರ್ದೇಶಕರಾಗಿರುವ 26 ಕಂಪನಿಗಳಲ್ಲಿ ರಿಲಯನ್ಸ್ ಎರೋಸ್ ಪ್ರೊಡಕ್ಷನ್ಸ್ ಎಲ್‌ಎಲ್‌ಪಿಯಂತಹ ಪಾಲುದಾರಿಕೆ ಸಂಸ್ಥೆಗಳು ಮತ್ತು ಜಾಮ್‌ನಗರ ಕಾಂಡ್ಲಾ ಪೈಪ್‌ಲೈನ್ ಕಂಪನಿ ಪ್ರೈವೇಟ್ ಲಿಮಿಟೆಡ್‌ನಂತಹ ಕಂಪನಿಗಳನ್ನು ಒಳಗೊಂಡಿವೆ. ಎರಡನೆಯದು ಅಹಮದಾಬಾದ್‌ನಲ್ಲಿ ರಿಲಯನ್ಸ್ ಪೇಜಿಂಗ್ ಪ್ರೈವೇಟ್ ಲಿಮಿಟೆಡ್, ಜಾಮ್‌ನಗರ್ ರತ್ಲಾಮ್ ಪೈಪ್‌ಲೈನ್ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಟ್ಯಾಂಕೇಜ್ ಪ್ರೈವೇಟ್ ಲಿಮಿಟೆಡ್ ಮತ್ತು ರಿಲಯನ್ಸ್ ಆಯಿಲ್ ಮತ್ತು ಪೆಟ್ರೋಲಿಯಂ ಪ್ರೈವೇಟ್ ಲಿಮಿಟೆಡ್‌ನಂತಹ ಹಲವಾರು ಇತರ ರಿಲಯನ್ಸ್ ಕಂಪನಿಗಳು ಕೂಡ ‘ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್’ ಕಂಪನಿಯೊಂದಿಗೆ ಸಂಬಂಧ ಹೊಂದಿವೆ.
2017ರಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪರಿಚಯಿಸಿದ್ದ ಕೇಂದ್ರ ಸರ್ಕಾರ, ಯಾವುದೇ ಕಂಪನಿಯು ರಾಜಕೀಯ ಪಕ್ಷಗಳಿಗೆ ಎಷ್ಟು ದೇಣಿಗೆ ನೀಡಬಹುದು ಎಂಬ ಮಿತಿಯನ್ನು ತೆಗೆದುಹಾಕಿತ್ತು. ಅದಕ್ಕೂ ಮುಂಚೆ, ಕಂಪನಿಗಳು ತಮ್ಮ ಹಿಂದಿನ ಮೂರು ಆರ್ಥಿಕ ವರ್ಷಗಳ ಸರಾಸರಿ ಲಾಭದ 7.5% ರಷ್ಟು ಹಣವನ್ನು ಮಾತ್ರ ದಾನ ಮಾಡಬಹುದಾಗಿತ್ತು.