ಕಲಬುರಗಿ ಲೋಕಸಭಾ ಕ್ಷೇತ್ರ | ಕಾಂಗ್ರೆಸ್-‌ ಬಿಜೆಪಿಗೆ ಪ್ರತಿಷ್ಠೆಯ ಕಣ, ಎಐಸಿಸಿ ಅಧ್ಯಕ್ಷರ ತವರೂರಲ್ಲಿ ಕಮಲ ಮತ್ತೆ ಅರಳುತ್ತಾ?

Date:

Advertisements

ಕಲ್ಯಾಣ ಕರ್ನಾಟಕದ ದೊಡ್ಡ ಜಿಲ್ಲೆ ಕಲಬುರಗಿ, ಸಾಂಸ್ಕೃತಿಕ, ಪರಂಪರೆ ಮತ್ತು ವಾಸ್ತುಶಿಲ್ಪದ ಅದ್ಭುತಗಳಿಗೆ ಹೆಸರುವಾಸಿಯಾದ ಕಲಬುರಗಿ ಲೋಕಸಭಾ ಕ್ಷೇತ್ರ ಹಲವು ವೈಶಿಷ್ಟತೆಗಳಿಂದ ಕೂಡಿದೆ. ಕಲಬುರಗಿ ನಗರದ ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾ, ಶರಣ ಬಸವೇಶ್ವರ ದೇವಸ್ಥಾನ, ಬೌದ್ದ ವಿಹಾರ ಬಹುತ್ವದ ಸಾರ ಹೊರಸೂಸುತ್ತವೆ. ಭವ್ಯವಾದ ಕಲಬುರಗಿ ಕೋಟೆ ಮತ್ತು ಸಾಂಪ್ರದಾಯಿಕ ಜಮೀಯಾ ಮಸೀದಿ ಹಾಗೂ ಜಿಲ್ಲೆಯ ವಿವಿಧೆಡೆ ಇರುವ ಐತಿಹಾಸಿಕ ವಾಸ್ತು ಶಿಲ್ಪಕಲೆ, ಸ್ಮಾರಕಗಳು ನೆಲದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ಕಲಬುರಗಿಗೆ ತೊಗರಿ ಕಣಜ ಎಂಬ ಹೆಸರೂ ಇದೆ. ಕೃಷ್ಣಾ ಮತ್ತು ಭೀಮಾ ನದಿಗಳು ಇಲ್ಲಿನ ಕೃಷಿ ಮತ್ತು ಕುಡಿಯುವ ನೀರಿಗೆ ಇರುವ ಮೂಲಗಳು. ತೊಗರಿ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆಯಾದರೂ ಇಲ್ಲಿನ ಕೃಷಿ ಸಾಕಷ್ಟು ಅಭಿವೃದ್ಧಿ ಕಂಡಿಲ್ಲ. ಇನ್ನು ಕೆಲ ತಾಲೂಕಿನಲ್ಲಿ ಸಿಮೆಂಟ್ ಉದ್ಯಮಗಳು ಬಿಟ್ಟರೆ ಹೇಳಿಕೊಳ್ಳುವಂತಹ ಅತ್ಯಾಧುನಿಕ ಕಂಪನಿಗಳಿಲ್ಲ.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 9 ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಚಿಂಚೋಳಿ ಹಾಗೂ ಆಳಂದ ಕ್ಷೇತ್ರಗಳು ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ. ಯಾದಗಿರಿ ಜಿಲ್ಲೆಯ ಗುರುಮಠಕಲ್‌ ವಿಧಾನಸಭಾ ಕ್ಷೇತ್ರ ಹಾಗೂ ಕಲಬುರಗಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಕಲಬುರಗಿ ಲೋಕಸಭಾ ಕ್ಷೇತ್ರ. ಅಫಜಲಪುರ, ಜೇವರ್ಗಿ, ಚಿತ್ತಾಪುರ, ಸೇಡಂ, ಕಲಬುರಗಿ ದಕ್ಷಿಣ ಮತ್ತು ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೇಸ್‌ ಪಕ್ಷದ ಶಾಸಕರಿದ್ದಾರೆ. ಕಲಬುರಗಿ ಗ್ರಾಮೀಣದಲ್ಲಿ ಬಿಜೆಪಿ ಹಾಗೂ ಗುರುಮಠಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ಶಾಸಕರಿದ್ದಾರೆ.

Advertisements

ಕಲಬುರಗಿ ಲೋಕಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ ಕೋಟೆ ಎಂದೇ ಖ್ಯಾತಿ ಹೊಂದಿದೆ. ಹೈದ್ರಾಬಾದ್‌ ಸಂಸ್ಥಾನಕ್ಕೆ ಸೇರಿದ ವೇಳೆ ಮೊದಲ ಬಾರಿಗೆ ನಡೆದ 1951ರ ಲೋಕಸಭಾ ಚುನಾವಣೆಯಲ್ಲಿ ಸ್ವಾಮಿ ರಮಾನಂದ ತೀರ್ಥರು ಕಾಂಗ್ರೇಸ್ಸಿನಿಂದ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಬಳಿಕ 1957ರಲ್ಲಿ ಮೈಸೂರು ರಾಜ್ಯಕ್ಕೆ ಒಳಪಟ್ಟ ಸಂದರ್ಭದಲ್ಲಿ ಮಹಾದೇವಪ್ಪ ರಾಂಪುರೆಯವರು ಕಾಂಗ್ರೇಸ್ಸಿನಿಂದ ಸ್ಪರ್ಧಿಸಿ ಮೊದಲ ಸಲ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಕಂಡು ದಾಖಲೆ ನಿರ್ಮಿಸಿದ್ದರು.

1971 ರಿಂದ 2019ರವರೆಗೆ ಒಟ್ಟು ನಡೆದ ಚುನಾವಣೆಯಲ್ಲಿ ಯಾರಿಗೂ ಹ್ಯಾಟ್ರಿಕ್‌ ಗೆಲುವು ಸಾಧ್ಯವಾಗಿಲ್ಲ. ಬಳಿಕ 2009ರಲ್ಲಿ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತ್ತು. 2009 ಹಾಗೂ 2014ರಲ್ಲಿ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆಯವರು ಎರಡು ಬಾರಿ ಸತತವಾಗಿ ಜಯ ಸಾಧಿಸಿದರು. 1951ರಿಂದ ಕ್ಷೇತ್ರದಲ್ಲಿ ಇಲ್ಲಿಯವರೆಗೆ ನಡೆದ ಎಲ್ಲ ಚುನಾವಣೆಯಲ್ಲಿ ಜನತಾ ದಳ ಒಂದು ಸಲ, ಎರಡು ಬಾರಿ ಭಾರತೀಯ ಜನತಾ ಪಕ್ಷ ಗೆದ್ದಿದ್ದು ಬಿಟ್ಟರೆ ಉಳಿದ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್‌ ದಿಗ್ವಿಜಯ ಕಂಡ ದಾಖಲೆಯಿದೆ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಧರಂ ಸಿಂಗ್ (1980) ಮತ್ತು ವೀರೇಂದ್ರ ಪಾಟೀಲ್ (1984) ಕೂಡ ಈ ಕ್ಷೇತ್ರದಿಂದಲೇ ಕಾಂಗ್ರೆಸ್‌ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದು ವಿಶೇಷ.

1996ರಲ್ಲಿ ಜನತಾ ದಳದಿಂದ ಕಣದಲ್ಲಿದ್ದ ಖಮರುಲ್ಲಾ ಇಸ್ಲಾಂ ಅವರು ನಾಲ್ಕುವರೆ ದಶಕದ ಕಾಂಗ್ರೆಸ್‌ ಭದ್ರಕೋಟೆ ಮೊದಲ ಸಲ ಕೆಡವಿದರು. ಬಳಿಕ 1998ರಲ್ಲಿ ಬಸವರಾಜ ಪಾಟೀಲ್ ಸೇಡಂ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿ ಗೆಲುವು ತಂದುಕೊಟ್ಟರು. 2019ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿ ಸ್ಪರ್ಧಿಸಿದ ಡಾ.ಉಮೇಶ ಜಾಧವ್‌ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗಿ ಎರಡು ದಶಕದ ಬಳಿಕ ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.

2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆಯವರು ಸ್ಪರ್ಧಿಸಿ 345,241 ಮತ ಪಡೆದು ಜಯಗಳಿಸಿದ್ದರು. ಅವರ ಎದುರಾಳಿ ಬಿಜೆಪಿಯ ರೇವೂನಾಯಕ ಬೆಳಮಗಿ 3,31,837 ಮತಗಳನ್ನು ಪಡೆದಿದ್ದರು. ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ 13,404 ಮತಗಳ ಅಂತರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ದೇಶದಲ್ಲಿ ಕಾಂಗ್ರೆಸ್‌ ಆಡಳಿತ ವಿರೋಧಿ ಅಲೆ ವ್ಯಾಪಕವಾಗಿದ್ದ 2014ರ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಎರಡನೇ ಬಾರಿಗೆ ಸ್ಪರ್ಧಿಸಿ ಎದುರಾಳಿ ಬಿಜೆಪಿಯ ರೇವೂನಾಯಕ ಬೆಳಮಗಿ ವಿರುದ್ಧ 74,733 ಮತಗಳ ಅಂತರದಿಂದ ಗೆದ್ದು ಬೀಗಿದರು.

ಕಳೆದ 2019ರಲ್ಲಿ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ಸಿನ ಶಾಸಕರಾಗಿದ್ದ ಡಾ.ಉಮೇಶ ಜಾಧವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಎರಡು ಬಾರಿ ಗೆದ್ದು ಕಾಂಗ್ರೆಸ್‌ ಕೋಟೆ ಭದ್ರವಾಗಿಸಿಕೊಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣತೊಟ್ಟ ಕಮಲ ಪಡೆ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅವರಿಂದ ಪ್ರಚಾರ ಮಾಡಿಸಿ 95,457 ಮತಗಳ ಅಂತರದಿಂದ ಖರ್ಗೆಯವರನ್ನು ಸೋಲಿಸುವಲ್ಲಿ ಸಫಲವಾಯ್ತು.

ಕ್ಷೇತ್ರ ಎಸ್‌.ಸಿ. ಮೀಸಲು ಕ್ಷೇತ್ರವಾದ ಬಳಿಕ ನಡೆದ ಚುನಾವಣೆಯಲ್ಲಿ ಮೂರು ಬಾರಿಯೂ ಬಿಜೆಪಿ ಪಕ್ಷ ಲಂಬಾಣಿ ಸಮುದಾಯದ ಅಭ್ಯರ್ಥಿಗಳಿಗೆ ಹುರಿಯಾಳುಯಾಗಿಸಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯದ ಸಾಂಪ್ರದಾಯಿಕ ಮತ ಸೆಳೆಯಲು ಪ್ರಯತ್ನಿಸಿದೆ. ಎರಡು ಬಾರಿ ಸತತವಾಗಿ ಸೋಲು ಕಂಡಿದ್ದ ರೇವೂನಾಯಕ ಬೆಳಮಗಿ ಅವರನ್ನು ಕೈಬಿಟ್ಟು ಕಾಂಗ್ರೆಸ್‌ ಶಾಸಕರಾಗಿದ್ದ ಡಾ.ಉಮೇಶ ಜಾಧವ್‌ ಅವರನ್ನು ಬಿಜೆಪಿ ತೆಕ್ಕೆಗೆ ಪಡೆದು ಕಾಂಗ್ರೆಸ್‌ನ ವರಿಷ್ಠ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಸಿ ಡಾ.ಜಾಧವ್‌ ಅವರನ್ನು ಗೆಲ್ಲಿಸಿದರು.

ಡಾ.ಉಮೇಶ ಜಾಧವ್‌ಗೆ ಮತ್ತೆ ಬಿಜಿಪಿ ಟಿಕೆಟ್‌ ಫೈನಲ್ :

2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಿಂದ ಕಾಂಗ್ರೆಸ್ ವರಿಷ್ಠ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಡಾ.ಉಮೇಶ ಜಾಧವ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಘೋಷಿಸಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಉಮೇಶ ಜಾಧವ ಅವರು ಕ್ಷೇತ್ರದಲ್ಲಿ ತಮ್ಮ ಒಡನಾಟ ಚನ್ನಾಗಿ ಇಟ್ಟಿಕೊಂಡಿದ್ದು ಅಲ್ಲದೆ ಒಂದಿಷ್ಟು ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ.

ಸಂಸದ ಡಾ.ಜಾಧವ್‌ ಅವರಿಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಅಷ್ಟಾಗಿ ಇಲ್ಲದಿರುವ ಕಾರಣಕ್ಕೆ ಪಕ್ಷ ಮತ್ತೆ ಕೈ ಹಿಡಿದು ಎರಡನೇ ಬಾರಿಗೆ ಸ್ಪರ್ಧಿಸಲು ಟಿಕೆಟ್‌ ನೀಡಿದೆ. ಇನ್ನು ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರೂ ಆದ ಡಾ. ಮಲ್ಲಿಕಾರ್ಜುನ ಖರ್ಗೆಯವರು ಈ ಬಾರಿ ಸ್ಪರ್ಧಿಸುವ ಬಗ್ಗೆ ಒಲವು ತೋರುತ್ತಿಲ್ಲ. ಬದಲಿಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ್‌ ಖರ್ಗೆಯವರು ರಾಜ್ಯ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಇದೀಗ ಖರ್ಗೆಯವರು ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಲೋಕಸಭಾ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

2024ರ ಲೋಕಸಭಾ ಚುನಾವಣೆಗೆ ಕ್ಷೇತ್ರದ ಒಟ್ಟು ಮತದಾರರು 22.59 ಲಕ್ಷ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತರು ನಿರ್ಣಾಯಕರಾಗಿದ್ದಾರೆ. ಜೊತೆಗೆ ಮುಸ್ಲಿಂ, ಪ.ಜಾತಿ, ಪ.ಪಂಗಡ, ಲಂಬಾಣಿ, ಕಬ್ಬಲಿಗ, ಕುರುಬ ಸಮುದಾಯ ಸೇರಿದಂತೆ ಇತರೆ ಸಮುದಾಯದ ಮತದಾರರಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೇಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಡುವ ಎಲ್ಲಾ ಸಾಧ್ಯತೆ ನಿಚ್ಚಳವಾಗಿದ್ದು, ರಾಜ್ಯ ಅಷ್ಟೇ ಅಲ್ಲದೇ ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ಪ್ರತಿಷ್ಠೆಯ ಕಣವಾಗಿ ಗುರುತಿಸಿಕೊಂಡು ಸದ್ದು ಮಾಡುವುದು ಖಚಿತ. ಇನ್ನು ಕಾಂಗ್ರೆಸ್‌ ಟಿಕೆಟ್‌ ಅಂತಿಮವಾದ ಬಳಿಕ ಚುನಾವಣಾ ಕಾವು ಇನ್ನಷ್ಟು ರಂಗೇರಲಿದೆ.

ಈ ಸುದ್ದಿ ಓದಿದ್ದೀರಾ? Big Breaking news | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಎಫ್ಐಆರ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ತವರು ಕ್ಷೇತ್ರದಲ್ಲಿ ʼಕೈʼ ಭದ್ರಪಡಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿಯ ಸಂಸದ ಜಾಧವ್ ಎರಡನೇ ಬಾರಿಗೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. 2024ರ ಚುನಾವಣಾ ಪ್ರಚಾರಕ್ಕಾಗಿ ನಾಳೆ (ಮಾ.16) ಪ್ರಧಾನಿ ಮೋದಿ ಕಲಬುರಗಿ ನಗರಕ್ಕೆ ಆಗಮಿಸಲಿದ್ದಾರೆ. ಏನಾಗುತ್ತದೋ ಕಾದು ನೋಡೋಣ

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಕಲಬುರಗಿ | ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ

ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ...

ಕಲಬುರಗಿ | ದಂಡೋತಿ ಗ್ರಾಮದಲ್ಲಿ ಮಂಗಗಳ ದಾಳಿ: ನಾಲ್ವರಿಗೆ ಗಂಭೀರ ಗಾಯ, ಗ್ರಾಮಸ್ಥರಲ್ಲಿ ಆತಂಕ

ನಾಲ್ಕು ಮಂದಿ ಮೇಲೆ ಮಂಗಗಳು ದಾಳಿ ಮಾಡಿದ್ದು, ಗಂಭೀರ ಗಾಯಗೊಂಡಿರುವ ಘಟನೆ...

Download Eedina App Android / iOS

X