ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬಿಜೆಪಿಯ ಕಾರ್ಯಕರ್ತೆಯೂ ಆಗಿರುವ ಸಂತ್ರಸ್ತ ಬಾಲಕಿಯ ತಾಯಿ ನೀಡಿರುವ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆ ಸೆಕ್ಷನ್ 8, ಮತ್ತು ಐಪಿಸಿ ಸೆಕ್ಷನ್ 354(a) ಅಡಿ ಪ್ರಕರಣ ದಾಖಲಾಗಿದೆ. ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ದಾಖಲಾದರೆ, ಆರೋಪಿ ಎಷ್ಟೇ ಪ್ರಭಾವಿ ಆಗಿದ್ದರೂ ಕೂಡಲೇ ಬಂಧಿಸಬೇಕು. ನಂತರ ತನಿಖೆ ನಡೆಸಬೇಕೆಂದು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಪ್ರಕರಣದ ಎಫ್ಐಆರ್ ಲಭ್ಯವಾಗಿದ್ದು, “ರೇಪ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಒಳ ಕರಕೊಂಡು ಹೋಗಿದ್ದೆ ಎಂದು ಯಡಿಯೂರಪ್ಪ ಹೇಳಿದ್ದರು” ಎಂಬಿತ್ಯಾದಿ ಹಲವಾರು ಅಂಶಗಳನ್ನು ಸಂತ್ರಸ್ತೆಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎಫ್ಐಆರ್ನಲ್ಲಿರುವ ಅಂಶಗಳೇನು?
ಈ ಹಿಂದೆ ನನ್ನ ಮಗಳ ಮೇಲೆ ಆಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಸಹಾಯ ಕೇಳಲೆಂದು ಫೆ. 2, 2024ರಂದು ನನ್ನ ಮಗಳನ್ನು ಕರೆದುಕೊಂಡು ಯಡಿಯೂರಪ್ಪ ಅವರ ಬಳಿ ಹೋಗಿದ್ದೆ. ನನ್ನ ಮಗಳ ಮೇಲಾಗಿದ್ದ ದೌರ್ಜನ್ಯವನ್ನು ಎಸ್ಐಟಿಗೆ ವಹಿಸುವ ವಿಚಾರವಾಗಿ ನೆರವು ಕೇಳಿಕೊಂಡು ಹೋಗಿದ್ದೆ. ಯಡಿಯೂರಪ್ಪನವರನ್ನು ನಾನು ಅಪ್ಪಾಜಿ ಎಂದು ಕರೆಯುತ್ತಿದ್ದೆ. ಅವರ ಮನೆಯಲ್ಲಿ ಅಂದು ಸುಮಾರು ಒಂಭತ್ತು ನಿಮಿಷಗಳ ಕಾಲ ಮಾತನಾಡಿ, ನಮಗೆ ಟೀ ಕೊಡಿಸಿದರು. ನನ್ನ ಮಗಳ ಕೈಯನ್ನು ಹಿಡಿದುಕೊಂಡು ಯಡಿಯೂರಪ್ಪನವರು ಮಾತನಾಡಿಸುತ್ತಿದ್ದಾಗ, ನನ್ನ ಮಗಳು ತಾತ ಎಂದು ಕರೆಯುತ್ತಿದ್ದಳು. ಆ ಬಳಿಕ ಮಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳುತ್ತಾ ಐದು ನಿಮಿಷ ತನ್ನ ರೂಮಿನೊಳಗೆ ಕರೆದುಕೊಂಡು ಹೋಗಿ, ಬಳಿಕ ಲಾಕ್ ಮಾಡಿದ್ದಾರೆ. ರೂಮಿನಲ್ಲಿ ನನ್ನ ಮಗಳು ಹಾಕಿದ್ದ ಶ್ವೆಟರ್ನ ಒಳಗೆ ಕೈ ಹಾಕಿ, ಬಲಭಾಗದ ಎದೆಯ ಮೇಲೆ ಕೈ ಹಾಕಿ, ಹಿಚುಕಿದ್ದಾರೆ. ಈ ವೇಳೆ ನನ್ನ ಮಗಳು ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಕೂಡ ಹೊರಗೆ ಬರಲು ಯಡಿಯೂರಪ್ಪನವರು ಬಿಡಲಿಲ್ಲ. ಆಮೇಲೆ ಮೆಲ್ಲಗೆ ಯಡಿಯೂರಪ್ಪನವರೇ ಬಾಗಿಲು ತೆರೆದಾಗ, ಮಗಳು ಓಡಿ ಬಂದು ಕೂಡಲೇ ರೂಮಿನೊಳಗೆ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಈ ಬಗ್ಗೆ ಯಡಿಯೂರಪ್ಪ ಅವರೊಂದಿಗೆ ಯಾಕೆ ಹೀಗೆ ಮಾಡಿದ್ರಿ ಎಂದು ಕೇಳಿದ್ದಕ್ಕೆ, ಅವರು, “ಆಕೆಗೆ(ಮಗಳಿಗೆ) ರೇಪ್ ಆಗಿದೆಯೋ? ಇಲ್ಲವೋ? ಎಂದು ಚೆಕ್ ಮಾಡಲು ಹಾಗೆ ಮಾಡಿದೆ” ಎಂದು ಹೇಳಿರುವುದಾಗಿ ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣ | ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು?
“ನಾನು ಪ್ರಶ್ನಿಸಿದಾಗ, ಕೂಡಲೇ ನನ್ನೊಂದಿಗೆ ಯಡಿಯೂರಪ್ಪನವರು ಕ್ಷಮೆಯಾಚಿಸುತ್ತಾ, ನಿಮಗೆ ಮೋಸ ಆಗಿರುವ ಬಗ್ಗೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು. ಅದಕ್ಕೆ ನಾನು ಒಪ್ಪಲಿಲ್ಲ. ಆದರೂ, ಯಡಿಯೂರಪ್ಪನವರು ಇಲ್ಲಿನ ವಿಚಾರವನ್ನು ಹೊರಗೆ ಎಲ್ಲೂ ತಿಳಿಸಬಾರದೆಂದು ನಮ್ಮನ್ನು ತಡೆಯಲು ತುಂಬಾ ಪ್ರಯತ್ನಿದ್ದಾರೆ” ಎಂದು ಆರೋಪಿಸಿದ್ದಾರೆ.

”ನನ್ನ ಮಗಳಿಗಾದ ಅನ್ಯಾಯಕ್ಕೆ ನ್ಯಾಯ ಕೇಳಲು ಹೋಗಿದ್ದಾಗ ನನ್ನ ಮಗಳಿಗೆ ಯಡಿಯೂರಪ್ಪನವರು ಲೈಂಗಿಕ ಕಿರುಕುಳ ನೀಡಿದ್ದಾರೆ. ಹಾಗಾಗಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಅಪ್ರಾಪ್ತ ಬಾಲಕಿಯ ತಾಯಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ಧ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
