17ರ ವಯಸ್ಸಿನ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಡಿಜಿಪಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ(ಡಿಜಿಐಜಿಪಿ) ಅಲೋಕ್ ಮೋಹನ್ ಅವರು ಈ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ ವರ್ಗಾಯಿಸಲು ಅಧಿಕೃತ ಆದೇಶವನ್ನೂ ಕೂಡ ಹೊರಡಿಸಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಜಿ ಪರಮೇಶ್ವರ್, “ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ನಿನ್ನೆ ರಾತ್ರಿ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಇದರನ್ನು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾನೂನು ಪ್ರಕಾರ ಪೊಲೀಸರು ತನಿಖೆ ಮಾಡುತ್ತಿದ್ದಾರೆ” ಎಂದಿದ್ದರು.
ತಮ್ಮ ಮೇಲಿನ ಆರೋಪದ ಬಗ್ಗೆ ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಟಿ ನಡೆಸಿದ್ದ ಯಡಿಯೂರಪ್ಪ, ”ಒಬ್ಬರಿಗೆ ಉಪಕಾರ ಮಾಡುವುದಕ್ಕೆ ಹೋಗಿ ಹೀಗಾಗಿದೆ. ಪ್ರಕರಣ ದಾಖಲಾಗಿದೆ. ರಾಜಕಾರಣ ಯಾರೂ ಮಾಡ್ತಿಲ್ಲ. ಇದನ್ನು ಹೇಗೆ ಎದುರಿಸಬೇಕೋ ಹಾಗೆಯೇ ಎದುರಿಸುವೆ. ಆದರೆ ಇದನ್ನೆಲ್ಲ ನಿರೀಕ್ಷೆ ಮಾಡಿರಲಿಲ್ಲ” ಎಂದು ತಿಳಿಸಿದ್ದರು.
ಏನಿದು ಪ್ರಕರಣ?
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಬಿಎಸ್‌ವೈ ವಿರುದ್ಧ ಪೋಕ್ಸೊ | ‘ರೇಪ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಒಳ ಕರಕೊಂಡು ಹೋಗಿದ್ದೆ’: FIRನಲ್ಲಿ ಇರೋದೇನು?
ಕಳೆದ ಫೆಬ್ರವರಿಯಲ್ಲಿ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಸಂತ್ರಸ್ತ ಬಾಲಕಿಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಾಜಿ ಸಿಎಂ ವಿರುದ್ಧ ಪೋಕ್ಸೊ ಮತ್ತು 354 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
