ದಾವಣಗೆರೆ ಲೋಕಸಭೆ ಕ್ಷೇತ್ರ 1977ರಲ್ಲಿ ಉದಯವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಒಟ್ಟು 12 ಬಾರಿ ಚುನಾವಣೆ ನಡೆದಿದ್ದು ಅದರಲ್ಲಿ 6 ಬಾರಿ ಕಾಂಗ್ರೆಸ್ ಹಾಗೂ 6 ಬಾರಿ ಬಿಜೆಪಿ ಜಯಗಳಿಸಿದ್ದು, 7ನೇ ಗೆಲುವು ಯಾರದು ಎಂಬುದಕ್ಕೆ 2024ರ ಚುನಾವಣೆ ಸಾಕ್ಷಿಯಾಗಲಿದೆ. ಈ ಬಾರಿ ಗೆಲುವು ಯಾರ ಮುಡಿಗೆ ಎಂಬುದು ಕುತೂಹಲ ಗರಿಗೆದರುವಂತೆ ಮಾಡಿದೆ. ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರ ಉದಯದ ಬಳಿಕ ಬಿಜೆಪಿ ಒಂದೇ ಕುಟುಂಬಕ್ಕೆ ಎಂಟನೇ ಬಾರಿ ಅವಕಾಶ ನೀಡಿದೆ.
ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಿಲ್ಲ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಹೆಸರು ಘೋಷಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ, ಘೋಷಣೆ ಮಾಡಲಾಗಿಲ್ಲ. ಒಂದೇ ಹೆಸರು ಇರುವ ಕ್ಷೇತ್ರಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದರು. ಆದರೆ ದಾವಣಗೆರೆಯಲ್ಲಿ ಒಬ್ಬರ ಹೆಸರಿಲ್ಲ, ಪೈಪೋಟಿ ಇದೆ ಎಂಬುದು ಗೊತ್ತಾಗಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಗಣಿ ಸಚಿವ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಇನ್ಸೈಟ್ ಐಎಎಸ್ ತರಭೇತಿ ಸಂಸ್ಥೆ ಸಂಸ್ಥಾಪಕ ಕಾಂಗ್ರೆಸ್ ಯುವ ನಾಯಕ ಜಿ. ಬಿ. ವಿನಯ್ ಕುಮಾರ್ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಈ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ಸತತವಾಗಿ 1994ರಿಂದ ಆರು ಬಾರಿ ಗೆಲುವು ಸಾಧಿಸಿರುವ ಬಿಜೆಪಿ ಭದ್ರಕೋಟೆ ಛಿದ್ರ ಮಾಡಲು ಈ ಬಾರಿ ಎಐಸಿಸಿ ತಂತ್ರಗಾರಿಕೆ ರೂಪಿಸಲು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಜಿಲ್ಲೆಯ ಏಳರಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು ಶತಾಯಗತಾಯ ಈಬಾರಿ ಕ್ಷೇತ್ರ ವಶಪಡಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ದಾವಣಗೆರೆ ಕ್ಷೇತ್ರಕ್ಕೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಅಳೆದು ತೂಗಿ ಟಿಕೆಟ್ ನೀಡಲು ನಿರ್ಧರಿಸಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ನಡುವೆ ಟಿಕೆಟ್ ಪಡೆಯಲು ನೇರ ಹಣಾಹಣಿ ಏರ್ಪಟ್ಟಿದೆ.
1997ರಲ್ಲಿ ದಾವಣಗೆರೆ ಜಿಲ್ಲೆಯಾದಾಗಿನಿಂದಲೂ ಇದುವರೆಗೆ ಕಾಂಗ್ರೆಸ್‌ಗೆ ಒಮ್ಮೆ ಶಾಮನೂರು ಶಿವಶಂಕರಪ್ಪ 1998-99 ರ ಅಲ್ಪ ಅವಧಿಗೆ ಗೆದ್ದಿದ್ದು ಬಿಟ್ಟರೆ, ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಗೆಲುವು ದಕ್ಕಿಲ್ಲ. ಈ ಬಾರಿ ಡಾ. ಪ್ರಭಾ ಮಲ್ಲಿಕಾರ್ಜುನ್ ಇಲ್ಲವೇ ವಿನಯ್ ಕುಮಾರ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವುದು ಖಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಮಾತ್ರವಲ್ಲ, ವಿನಯ್ ಕುಮಾರ್ ಅವರೂ ಸಹ ಟಿಕೆಟ್ ಗಿಟ್ಟಿಸಲು ಭಾರೀ ಪ್ರಯತ್ನ ಮುಂದುವರಿಸಿದ್ದಾರೆ. ಈ ಮಧ್ಯೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ ತಾನು ಟಿಕೆಟ್ ಆಕಾಂಕ್ಷಿ ಎಂದು ಓಡಾಡುತ್ತಿದ್ದಾರೆ. ಆದರೆ ಪ್ರಬಲವಾಗಿ ವಿನಯ್ ಕುಮಾರ್ ಮತ್ತು ಫ್ರಭಾ ಮಲ್ಲಿಕಾರ್ಜುನ್ ನಡುವೆ ನೇರ ಸ್ಪರ್ಧೆ ಕಂಡುಬರುತ್ತದೆ.
ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಓಡಾಡಿಕೊಂಡು ಇರುವ ವಿನಯ್ ಕುಮಾರ್ ಪರ ಒಲವು ಇದೆ. ಸಿದ್ದರಾಮಯ್ಯ ಅವರು ಕೊಪ್ಪಳ, ಮೈಸೂರು ಹಾಗೂ ದಾವಣಗೆರೆಯಲ್ಲಿ ಕುರುಬ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂಬ ಮನವಿಯನ್ನು ಹೈಕಮಾಂಡ್ ಗೆ ಮಾಡಿದ್ದಾರೆ. ಕೆಲವು ನಂಬಲರ್ಹವಾದ ಕಾಂಗ್ರೆಸ್ ಮೂಲಗಳ ಪ್ರಕಾರ ವಿಧಾನಸಭಾ ಚುನಾವಣೆ ಗೆಲುವಿನ ನಂತರ ಸಿಎಂ ಸಿದ್ದರಾಮಯ್ಯನವರೇ ವಿನಯ್ ಕುಮಾರ್ ಗೆ ರಾಜಕೀಯಕ್ಕೆ ಬರಲು ತಿಳಿಸಿ ಜಿಲ್ಲೆಯಲ್ಲಿ ಓಡಾಟ ನಡೆಸಿ ಪಕ್ಷದ ಕಾರ್ಯಕರ್ತರ ಮುಖಂಡರ ವಿಶ್ವಾಸ ಗಳಿಸಲು ತಿಳಿಸಿದರು ಎನ್ನಲಾಗಿದೆ.
ಕುರುಬ ಸಮುದಾಯದ ಚನ್ನಯ್ಯ ಒಡೆಯರ್ ಅವರು ಮೂರು ಬಾರಿ ದಾವಣಗೆರೆ ಜಿಲ್ಲೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು ಬಿಟ್ಟರೆ, ಉಳಿದಂತೆ ಲಿಂಗಾಯತ ಸಮಾಜದವರೇ ಸಂಸದರಾಗಿರುವುದು ವಿಶೇಷ. ಚಿತ್ರದುರ್ಗ – ದಾವಣಗೆರೆ ಲೋಕಸಭಾ ಕ್ಷೇತ್ರ ಇದ್ದಾಗಲೂ ಕಾಂಗ್ರೆಸ್ ನಿಂದ ಲಿಂಗಾಯತ ಸಮುದಾಯದವರನ್ನು ಹೊರತುಪಡಿಸಿದಂತೆ ಚನ್ನಯ್ಯ ಒಡೆಯರ್ ಮಾತ್ರ ಎಂಪಿ ಆಗಿದ್ದರು. ಆಕಾಂಕ್ಷಿ ವಿನಯ್ ಕುಮಾರ್ ಕೂಡ ಒಡೆಯರ್ ಅವರ ಸೋದರ ಸಂಬಂಧಿ ಎನ್ನುವುದು ವಿಶೇಷ ಹಾಗೂ ಚೆನ್ನಯ್ಯ ಒಡೆಯರ್ ಕುಟುಂಬದ ಶಿವಕುಮಾರ್ ಒಡೆಯರ್ ಕೂಡ ಸಕ್ರಿಯವಾಗಿ ಓಡಾಟ ನಡೆಸಿ ಸ್ಪರ್ಧೆಗೆ ಅವಕಾಶ ಕೇಳಿದ್ದಾರೆ.
ಒಟ್ಟಾರೆ ಲೋಕಸಭಾ ಕ್ಷೇತ್ರದ ಇತಿಹಾಸ ಗಮನಿಸಿದರೆ ಆರು ಬಾರಿ ಕಾಂಗ್ರೆಸ್ ಹಾಗೂ ಆರು ಬಾರಿ ಬಿಜೆಪಿ ಗೆದ್ದಿದೆ. ಆದ್ರೆ, ಈ ಬಾರಿ ಯಾರಿಗೆ ಟಿಕೆಟ್ ಹಾಗೂ ಯಾರು ಗೆಲ್ಲುತ್ತಾರೆ ಎಂಬುದೇ ಕದನ ಕುತೂಹಲ.

ವಿನಯ್ ಕುಮಾರ್ ಅವರು ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿ ಜನರಿಗೆ ಹತ್ತಿರವಾಗಲು ಪ್ರಯತ್ನ ಮಾಡಿದ್ದಾರೆ. ಪರ ಸೋಷಿಯಲ್ ಮೀಡಿಯಾದಲ್ಲಿ ವಿನಯ್ ಕುಮಾರ್ ಅವರ ಪರ ಒಲವು ಇದೆ ಎನ್ನಲಾಗಿದೆ. ವಿನಯ್ ಕುಮಾರ್ ಇನ್ನೂ ಯುವಕರು. ಶಿಕ್ಷಣ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ಎಲ್ಲಾ ಸಮುದಾಯದವರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಿದ್ದಾರೆ. ಹಾಗಾಗಿ, ಯುವಕರಿಗೆ ಟಿಕೆಟ್ ನೀಡಿದರೆ ಗೆಲುವು ಕಷ್ಟವಾಗದು. ಎಸ್. ಎಸ್. ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪರ ಆಶೀರ್ವಾದ ಸಿಕ್ಕರೆ, ಅಹಿಂದ ಮತ ಕಾಂಗ್ರೆಸ್ ಗೆ ಬಿದ್ದರೆ ವಿನಯ್ ಕುಮಾರ್ ಗೆಲುವು ಕಷ್ಟವಾಗದು ಎಂಬ ವಿಶ್ಲೇಷಣೆಯೂ ನಡೆಯುತ್ತಿವೆ. ಹಾಗಾಗಿ, ವಿನಯ್ ಕುಮಾರ್ ಹೆಸರು ಹೈಕಮಾಂಡ್ ಮಟ್ಟದಲ್ಲಿ ತುಂಬಾನೇ ಚರ್ಚೆಯಾಗುತ್ತಿದೆ.
ಪ್ರಭಾ ಮಲ್ಲಿಕಾರ್ಜುನ್ ಅವರ ಕಾರ್ಯವೈಖರಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದ ರೀತಿ ಹಾಗೂ ಕೆಲವೇ ತಿಂಗಳಲ್ಲಿ ಕಾರ್ಯಕರ್ತರ ಜೊತೆ ಒಡನಾಟ , 2023ರ ವಿಧಾನಸಭಾ ಚುನಾವಣೆಯಲ್ಲಿ ಮಾವ ಶಾಮನೂರು ಶಿವಶಂಕರಪ್ಪ ಹಾಗೂ ಪತಿ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದು ಅವರನ್ನು ಸ್ಪರ್ಧೆಗೆ ಮುಂಚೂಣಿಯಲ್ಲಿ ನಿಲ್ಲಿಸಿವೆ.
ಜೊತೆಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಮಾಜ ಸೇವೆ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಜನರೊಟ್ಟಿಗೆ ಬೆರೆಯುವ ರೀತಿ, ಬಡವರಿಗೆ ಸಹಾಯ, ಎಸ್. ಎಸ್. ಕೇರ್ ಟ್ರಸ್ಟ್ ನಡಿ ಸಾವಿರಾರು ಜನರಿಗೆ ಆರೋಗ್ಯ ದಾಸೋಹ ಸೇರಿದಂತೆ ಎಲ್ಲರನ್ನೂ ಗಮನ ಸೆಳೆಯುತ್ತಿರುವ ನಾಯಕಿ , ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಎಲ್ಲೆಡೆ ಸ್ಪರ್ಧೆ ಮಾಡಬೇಕೆಂಬ ಒತ್ತಡ ಇದೆ.
ವಿಧಾನಸಭೆ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದ ಪ್ರಭಾ ಮಲ್ಲಿಕಾರ್ಜುನ್ ಅವರ ಕಾರ್ಯವೈಖರಿ ಸೂಜಿಗಲ್ಲಿನಂತೆ ಸೆಳೆದಿತ್ತು. ಎಷ್ಟರ ಮಟ್ಟಿಗೆ ಅಂದರೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಪ್ರಭಾ ಮಲ್ಲಿಕಾರ್ಜುನ್ ಅವರೇ ಸ್ಪರ್ಧೆ ಮಾಡುತ್ತಾರೆ ಎಂದೆಲ್ಲಾ ಕಾರ್ಯಕರ್ತರು ಮಾತನಾಡಲಾರಂಭಿಸಿದ್ದರು. ಅಷ್ಟು ಜನಪ್ರಿಯತೆ ಗಳಿಸಿದ್ದರು. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದರೆ ಸಾದು ಲಿಂಗಾಯತ ಸಮುದಾಯದ ಮತಗಳ ಜೊತೆಗೆ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳೊಂದಿಗೆ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಫಲ, ಅಲ್ಪಸಂಖ್ಯಾತರ ಮತಗಳು ಬಂದರೆ ಗೆಲುವು ಕಷ್ಟವಾಗದು ಎಂಬ ಮಾತು ಕೇಳಿಬರುತ್ತಿದೆ. ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪರು ಬಿರುಸಿನ ಪ್ರಚಾರ ನಡೆಸಿದರೆ ಈ ಬಾರಿ ಬಿಜೆಪಿ ಮಣ್ಣು ಮುಕ್ಕಿಸಬಹುದು ಎಂಬ ಲೆಕ್ಕಾಚಾರ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಕೋಲ್ಡ್ ವಾರ್
ಜಿಎಂ ಸಿದ್ದೇಶ್ವರ್ 2004ರಿಂದ ಸತತ 4 ಬಾರಿ ದಾವಣಗೆರೆ ಸಂಸದರಾಗಿ ಗೆದ್ದಿರುವ ಇವರು ಈಗ 5ನೇ ಸಲ ಅಖಾಡಕ್ಕೆ ಧುಮುಕಿ ಗೆಲುವಿನ ನಗಾರಿ ಭಾರಿಸೋಕೆ ಭರ್ಜರಿ ಸಿದ್ಧತೆ ನೆಡೆಸಿದ್ದರು. ಆದರೆ ದೀಪದ ಬುಡದಲ್ಲೇ ಕತ್ತಲು ಅನ್ನೋ ಹಾಗೆ ತನ್ನದೇ ಪಕ್ಷದ ಸ್ಥಳೀಯ ನಾಯಕರು ಇವರಿಗೆ ಈ ಬಾರಿ ಟಿಕೆಟ್ ಸಿಗ್ಲೇಬಾರ್ದು ಹೊಸಬರಿಗೆ ಸ್ಥಳೀಯರಿಗೆ ಎನ್ನುವ ದಾಳ ಉರುಳಿಸಿ ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿದ್ದರು. ಇವರಿಗೆ ಕ್ಷೇತ್ರದಲ್ಲಿ ಡೆಲ್ಲಿ ಬಾಯ್ಸ್ ಎಂದು ಕರೆಯುತ್ತಿದ್ದಾರೆ. ಏನಿದು ತಂತ್ರ? ಜಿಎಂ ಸಿದ್ದೇಶ್ವರ್ ವಿರುದ್ಧ ಡೆಲ್ಲಿ ಬಾಯ್ಸ್ ನಡುವಿನ ಕೋಲ್ಡ್ವಾರ್ ಹೇಗಿದೆ.? ಅಷ್ಟಕ್ಕೂ ಯಾರದು ಡೆಲ್ಲಿ ಬಾಯ್ಸ್ ಎಂದು ಕುತೂಹಲವೇ?
ಸ್ನೇಹಿತರೇ, 2004ರಲ್ಲಿ ರಾಜ್ಯದಲ್ಲಿ ಬಿಜೆಪಿ ಇನ್ನು ಅಂಬೆಗಾಲಿಡುತ್ತಿತ್ತು. ಆದರೆ ಅದಾಗ್ಲೇ ಜಿಎಂ ಸಿದ್ದೇಶ್ವರ್ ಅವರು ದಾವಣಗೆರೆ ಬಿಜೆಪಿ ಸಂಸದರಾಗಿ ಗೆದ್ದು ಬೀಗಿದ್ರು. ಅದಾದ ನಾಲ್ಕೇ ವರ್ಷಕ್ಕೆ ರಾಜ್ಯದಲ್ಲಿ ಮೊಟ್ಟ ಮೊದಲ ಸಲ ಬಿಜೆಪಿ ಗದ್ದುಗೆ ಹಿಡಿದಿತ್ತು. ಬಿಎಸ್ ಯಡಿಯೂರಪ್ಪ ಸಿಎಂ ಆದಾಗ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ದಾವಣಗೆರೆ ಮೂಲದ ಸಾಕಷ್ಟು ನಾಯಕರು ಬೆಳೆಯಲು ಆರಂಭಿಸಿದ್ರು. ಇದ್ರಿಂದ ಹಂತ ಹಂತವಾಗಿ ದಾವಣಗೆರೆಯಲ್ಲಿ ಬಿಜೆಪಿ ಬೇರುಗಳು ಆಳಕ್ಕೆ ಇಳಿದು ಪಕ್ಷದ ನೆಲೆ ಸದೃಢವಾಗಿ ಬೆಳೆಯಲು ಸಾಧ್ಯವಾಯಿತು. ಇದೇ ಮುಂದೆ ಪದವಿ ಅಧಿಕಾರದ ಆಸೆ ಆಮಿಷಗಳಿಗೆ ಬಿದ್ದು ಜಿಲ್ಲೆಯಲ್ಲಿ ಗುಂಪುಗಾರಿಕೆ, ಒಬ್ಬರನ್ನೊಬ್ಬರು ಸೋಲಿಸಲು ತಂತ್ರ, ಅಧಿಕಾರ ದಾಹಕ್ಕೆ ಜಿಲ್ಲಾ ಬಿಜೆಪಿ ಗುಂಪುಗಳಾಗಿ ಒಡೆದು ಹೋಯಿತು.
ನಿಮಗೆ ಗೊತ್ತಿರುವಂತೆ ದಾವಣೆಗೆರೆ ಬಿಜೆಪಿಯಲ್ಲಿ ರೇಣುಕಾಚಾರ್ಯ ಮೊದಲಿನಿಂದಲೂ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಕೋರೋನಾ ಕಾಲದಲ್ಲಿ ಇದ್ದಂತೆ ಕುಖ್ಯಾತಿ ಅಥವಾ ಪ್ರಖ್ಯಾತಿ , ಒಟ್ಟಿನಲ್ಲಿ ಸುದ್ದಿಯಲ್ಲಿರುವ ಹಪಾಹಪಿ. ಆದರೆ ಇವರು ಬಿ.ಎಸ್ ಯಡಿಯೂರಪ್ಪನವರಲ್ಲಿ ಅತಿಯಾದ ಸ್ವಾಮಿ ನಿಷ್ಠೆಯನ್ನ ಬೆಳೆಸಿಕೊಂಡಿದ್ದಾರೆ.
ಸದ್ಯ ಬಿಜೆಪಿಯಲ್ಲಿ ರೆಬಲ್ ಆಗಿರುವ ರೇಣುಕಾಚಾರ್ಯ ಈ ಡೆಲ್ಲಿ ಬಾಯ್ಸ್ ಟೀಂನ ನಾಯಕ. ಇವರ ಜತೆ ಉತ್ತರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿ.ಜೆ. ಅಜೇಯ್ ಕುಮಾರ್, ಸಿದ್ದೇಶ್ವರ ವಿರುದ್ಧ ಕೆಂಡಕಾರಿದ್ದ ಲೋಕಾಯುಕ್ತ ರೈಡ್ ಮಾಡಿದಾಗ ಅದಕ್ಕೆ ಪರೋಕ್ಷವಾಗಿ ಸಂಸದರೇ ಕಾರಣ ಎಂದು ಆರೋಪಿಸಿದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗ ಮಾಡಾಳ್ ಮಲ್ಲಿಕಾರ್ಜುನ್ ಕೂಡ ಇದ್ದಾರೆ. ಅಷ್ಟೇ ಅಲ್ಲ, ಪಕ್ಷ ವಿರೋಧಿ ಆರೋಪ ಹೊರಿಸಿ ಉಚ್ಛಾಟನೆಗೆ ಸಿದ್ದೇಶ್ವರರೇ ಕಾರಣ ಎಂದು ಆರೋಪಿಸಿದ ಜಗಳೂರಿನ ಮಾಜಿ ಶಾಸಕ ಗುರು ಸಿದ್ದನಗೌಡ ಪುತ್ರ ಡಾ. ರವಿಕುಮಾರ್ ಡೆಲ್ಲಿ ಬಾಯ್ಸ್ ಟೀಂನಲ್ಲಿರೋ ಸದಸ್ಯರು ಅಂತ ಹೇಳಲಾಗುತ್ತಿದೆ.
ಹಾಗಾದ್ರೆ ಇವರಿಗೂ ಕಾಂಗ್ರೆಸ್ ನಾಯಕರಿಗೂ ಅದೇನ್ ಸಂಬಂಧ ಅಂದ್ರಾ? ಇಲ್ಲೇ ಇರೋದು ನೋಡಿ ಅಸಲಿ ವಿಷಯ . ಅದನ್ನ ಒಂದ್ ಸ್ವಲ್ಪ ಬಿಡಿಸಿ ಹೇಳ್ತೀವಿ ನೋಡಿ. ಆಗಾಗ್ಗೆ ವರಿಷ್ಠರ ಭೇಟಿಗೆ ದೆಹಲಿಗೆ ಬರುತ್ತಿರುವ ಡೆಲ್ಲಿ ಬಾಯ್ಸ್ ದೆಹಲಿಗೆ ಹೋದರೂ, ಅಲ್ಲಿ ರಾಷ್ಟ್ರೀಯ ನಾಯಕರು ಕೈಗೆ ಸಿಗುತ್ತಿಲ್ಲ ಎನ್ನುವ ಮಾತಿದೆ. ಅಲ್ಲದೇ ಯಡಿಯೂರಪ್ಪ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಆದರೂ ಪ್ರಯತ್ನ ಬಿಡದೆ ಡೆಲ್ಲಿ ಬಾಯ್ಸ್ ಹೈಕಮಾಂಡ್ ಭೇಟಿ ಮಾಡಲು ಪ್ರಯತ್ನಿಸುತ್ತಿದೆ. ಅಲ್ಲದೇ ಡೆಲ್ಲಿ ಬಾಯ್ಸ್ ಭೇಟಿಯಾಗಿರುವುದಕ್ಕೆ ಯಾವುದೇ ಪೋಟೋ ಸಿಗುತ್ತಿಲ್ಲ ಎಂದು ಬಿಜೆಪಿ ಇನ್ನೊಂದು ಬಣ ಹೇಳುತ್ತಿದೆ.
ಶತಯಾ ಗತಯಾ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಎಸ್.ಎಸ್ ಮಲ್ಲಿಕಾರ್ಜುನ್ ಡೆಲ್ಲಿ ಬಾಯ್ಸ್ ನಾಯಕ ರೇಣುಕಾಚಾರ್ಯರನ್ನು ಹಿಂಬಾಗಲಿನಿಂದ ಭೇಟಿ ಮಾಡುತ್ತಿದೆ. ಅಲ್ಲದೇ ಅವರಿಗೆ ಬೇಕಾದ ಎಲ್ಲಾ ನೆರವು ದೆಹಲಿ ಮಟ್ಟದಲ್ಲೂ ನೀಡುತ್ತಿದೆ. ಕೆಲವು ಸಬೆ ಸಮಾರಂಭಗಳಲ್ಲಿ ನೇರ ಭೇಟಿ ಮಾಡಿದರೂ ಅದು ಕ್ಷೇತ್ರದ ಕೆಲಸಗಳಿಗಾಗಿ ಎನ್ನುವ ಹಾರಿಕೆ ಉತ್ತರ ನೀಡಿದ್ದು ಇತಿಹಾಸ. ಹಾಗಾಗಿಯೇ ಬಿಜೆಪಿಗೆ ಸಿದ್ದೇಶ್ವರ ಕುಟುಂಬದ ಕೊಡುಗೆ ಏನು? ಈ ಬಾರಿ ಅವರಿಗೆ ಮತದಾರರ ವಿರೋಧ ಇದೆ. ಹಾಗಾಗಿ ಹೊಸ ಮುಖಕ್ಕೆ ಮಣೆ ಹಾಕಬೇಕು. ಸ್ಥಳೀಯರಿಗೆ ಕೊಡಬೇಕು ಎಂಬ ಹೊಸವಾದವನ್ನು ಡೆಲ್ಲಿ ಬಾಯ್ಸ್ ಉರುಳಿಸಿದ್ದು.
ಈ ಡೆಲ್ಲಿ ಬಾಯ್ಸ್ ರಣತಂತ್ರದ ಬಗ್ಗೆ ಮಾಜಿ ದೂಡಾ ಅಧ್ಯಕ್ಷ ಯಶವಂತರಾವ್ ಜಾಧವ್ OBC ಸಮಾವೇಶದಲ್ಲಿ ಕಿಡಿ ಕಾರಿದ್ದರು. ಕಾಂಗ್ರೆಸ್ ನಾಯಕರ ಜೊತೆ ಒಳ ಒಪ್ಪಂದ ಮಾಡಿಕೊಂಡೋರಿಗೆ ಟಿಕೆಟ್ ಕೊಡಬೇಡಿ ಅಂತೇಳಿ ಬಹಿರಂಗವಾಗೇ ಆಕ್ರೋಶ ಹೊರಹಾಕಿದ್ದರು.
ರೇಣುಕಾಚಾರ್ಯ ತಮ್ಮ ಏಳಿಗೆಗಾಗಿ ಪಕ್ಷಕ್ಕೆ ಕಂಟಕ ತಂದರಾ?
ಬಿಜೆಪಿ ಒಳಗಿನವರ ಪ್ರಕಾರ, ಬೀದರ್, ಬಳ್ಳಾರಿ, ಹಾವೇರಿ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಪ್ಪಳ, ದಾವಣಗೆರೆ, ಚಾಮರಾಜನಗರ, ಬೆಳಗಾವಿ ಮತ್ತು ಬಿಜಾಪುರದಂತಹ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸ್ವಲ್ಪ ತೊಂದರೆಯಾಗುತ್ತಿದೆ, ಇಲ್ಲಿ ಪಕ್ಷವು ಕ್ಷೇತ್ರರಕ್ಷಣೆ ವಿರುದ್ಧ ಒಳಗಿನಿಂದಲೇ ಪ್ರತಿರೋಧವನ್ನು ಎದುರಿಸುತ್ತಿದೆ. ಹಾಲಿ ಲೋಕಸಭಾ ಸದಸ್ಯ ಅಥವಾ ಅಭ್ಯರ್ಥಿ ಯಾರಾಗಿರಬೇಕು ಎಂಬುದರ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ.
ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಟಿಕೆಟ್ ಘೋಷಿಸಲಿದೆ. ದಾವಣಗೆರೆಯಲ್ಲಿಯೂ ಈ ಬಾರಿ ಹೊಸ ಮುಖಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇತ್ತು. ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಈಗ ನಾನೂ ಆಕಾಂಕ್ಷಿ ಎಂದಿದ್ದಾರೆ. ಜೊತೆಗೆ ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್, ಎ. ಕೆ. ಫೌಂಡೇಶನ್ ಅಧ್ಯಕ್ಷ ಕೆ. ಬಿ. ಕೊಟ್ರೇಶ್, ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ವಿರುದ್ಧ ಸೋತಿದ್ದ ಭರತ್ ಹೋಟೆಲ್ ಮಾಲೀಕ ಅಜಯ್ ಕುಮಾರ್ ಅವರೂ ಸಹ ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಬಹಿರಂಗವಾಗಿ ಘೋಷಿಸಿದ್ದರು. ಇಂದು ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ಮುನ್ನುಡಿ ಬರೆಯಲಿದೆಯೇ ಎಂಬ ಅನುಮಾನ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗಾಗಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಗರಿಗೆದರಿತ್ತು.
ಸಿದ್ದೇಶ್ವರ ವಿರುದ್ಧ ಡೆಲ್ಲಿ ಬಾಯ್ಸ್ ಗುಂಪು ಈ ಬಾರಿ ಸ್ಥಳೀಯರಿಗೆ ಲೋಕಸಭೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿತ್ತು . ಟಿಕೆಟ್ ನೀಡುವುದಾದರೆ ಸರ್ವೆ ನಡೆಸಿ, ಪಾರದರ್ಶಕವಾಗಿ ನಡೆಸಿ. ಯಾರ ಪರವಾಗಿ ಬರುತ್ತದೆಯೋ ಅವರಿಗೆ ಟಿಕೆಟ್ ನೀಡಿ. ನಾವು ದುಡಿಯುತ್ತೇವೆ. ಸಿದ್ದೇಶ್ವರ ಅವರಿಗೆ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ಈಗಾಗಲೇ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರ ತಂದೆ ದಿವಂಗತ ಮಲ್ಲಿಕಾರ್ಜುನಪ್ಪರು ಎಂಪಿ ಆಗಿದ್ದವರು. ಕುಟುಂಬ ರಾಜಕಾರಣಕ್ಕೆ ಒತ್ತು ನೀಡುವುದರ ಬದಲು ಹೊಸಬರಿಗೆ ಅವಕಾಶ ನೀಡಿ. ನಾವೆಲ್ಲರೂ ಕಷ್ಟಪಟ್ಟು ಗೆಲ್ಲಿಸಿಕೊಂಡು ಬರುತ್ತೇವೆ. ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಕಷ್ಟವಾಗಬಹುದು. ಹೈಕಮಾಂಡ್ ಗಮನಕ್ಕೆ ತನ್ನಿ ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.
ನಿಮ್ಮ ಅಭಿಪ್ರಾಯವನ್ನು ದೆಹಲಿಯ ವರಿಷ್ಠರಿಗೆ ತಿಳಿಸೋಣ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸಿ ಎಂದು ಬಿ. ಎಸ್. ಯಡಿಯೂರಪ್ಪ ಅವರು ಬಿಜೆಪಿ ನಾಯಕರಿಗೆ ಹೇಳಿ ಕಳುಹಿಸಿದ್ದರು.
ಯಡಿಯೂರಪ್ಪರ ಆಪ್ತ ವಲಯದಲ್ಲಿ ಸಿದ್ದೇಶ್ವರ ಅವರೂ ಗುರುತಿಸಿಕೊಂಡಿದ್ದು, ದಾವಣಗೆರೆಗೆ ಬಂದಾಗಲೂ ಯಡಿಯೂರಪ್ಪ ಅವರು, ಸಿದ್ದೇಶ್ವರ ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ಅವರ ಶಕ್ತಿ ದಾವಣಗೆರೆಗೆ ಮಾತ್ರವಲ್ಲ, ರಾಜ್ಯಕ್ಕೆ ಗೊತ್ತು ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಮಾತ್ರವಲ್ಲ, ಯಾರಿಗೆ ಟಿಕೆಟ್ ನೀಡಿದರೂ ಲೋಕಸಭಾ ಸದಸ್ಯರನ್ನಾಗಿ ಆರಿಸಿ ಕಳುಹಿಸಬೇಕು ಎಂದು ಕರೆ ಕೊಟ್ಟಿದ್ದರು.
ಸಿದ್ದೇಶ್ವರ ಅವರೂ ಸಹ ನಾನು ಟಿಕೆಟ್ ಆಕಾಂಕ್ಷಿ. ಟಿಕೆಟ್ ಘೋಷಿಸುವವರೆಗೂ ನಾನೇ ಅಭ್ಯರ್ಥಿ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತೇನೆ ಎಂದು ಈಗಾಗಲೇ ಬಹಿರಂಗವಾಗಿ ಹೇಳಿದ್ದರು. ಮತ್ತೊಂದು ಬೆಳವಣಿಗೆಯೊಂದರಲ್ಲಿ ಒಂದು ವೇಳೆ ನನಗೆ ಟಿಕೆಟ್ ನೀಡದಿದ್ದರೆ ಪುತ್ರ ಅನಿತ್ ಇಲ್ಲವೇ ಸಹೋದರ ಲಿಂಗರಾಜ್ ಅವರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಅಚ್ಚರಿ ಎಂಬಂತೆ ಇತ್ತೀಚೆಗೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಕೂಡ ರಾಜಕೀಯಕ್ಕೆ ಬರುವ ಮಾತನ್ನಾಡಿದ್ದರು. ಸಿದ್ದೇಶ್ವರ ತಮಗೆ ಟಿಕೆಟ್ ಕೈ ತಪ್ಪುವ ಬಗ್ಗೆ ತಿಳಿದು ತನ್ನ ಪತ್ನಿಗೆ ಟಿಕೆಟ್ ಗಾಗಿ ಈರೀತಿ ಹೇಳಿಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಈಗ ಹೈಕಮಾಂಡ್ ಅಂತಿಮವಾಗಿ ಗಾಯತ್ರಿ ಸಿದ್ದೇಶ್ವರ ಗೆ ಮಣೆ ಹಾಕಿದೆ.
ಗಾಯತ್ರಿ ಸಿದ್ದೇಶ್ವರ ಕೂಡ ಇತ್ತೀಚೆಗೆ ತಮ್ಮ ಶ್ರೀ ಶೈಲ ಟ್ರಸ್ಟ್ ವತಿಯಿಂದ ಸಿದ್ದೇಶ್ವರ ಜೊತೆಗೆ ಕ್ಷೇತ್ರದಲ್ಲಿ ಆರೋಗ್ಯ, ಸ್ತ್ರೀ ಸಶಕ್ತೀಕರಣ, ಇತರೆ ಸಮಾಜದ ಸೇವಾ ಕ್ಷೇತ್ರಗಳಲ್ಲಿ ಕಾಣಿಸಿ, ಹೊಲಿಗೆ ಯಂತ್ರ, ತರಭೇತಿ, ಇತರೆ ಸ್ವ ಉದ್ಯೋಗ ಸೃಷ್ಟಿ ಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು.
ದಾವಣಗೆರೆ ಜಿಲ್ಲೆಯಾದಾಗಿನಿಂದ ಇಲ್ಲಿಯವರೆಗೆ ಬಿಜೆಪಿ ಸೋತಿಲ್ಲ. ಹಾಗಾಗಿ ಮಧ್ಯಕರ್ನಾಟಕದ ಹೆಬ್ಬಾಗಿಲು ಕಮಲ ಪಡೆ ಭದ್ರಕೋಟೆ ಎನಿಸಿಕೊಂಡಿದೆ. ಈ ಬಾರಿ ಉಳಿಸಿಕೊಳ್ಳಲೇಬೇಕೆಂಬ ಹಠ ರಾಜ್ಯ ಘಟಕದ ನಾಯಕರು ಹಾಗೂ ಹೈಕಮಾಂಡ್ ಹೊಂದಿದೆ. ಹಾಗಾಗಿ, ಈ ಬಾರಿ ಗೊಂದಲವಾಗಿರುವುದು ತಲೆನೋವು ತಂದಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸುತ್ತೇವೆ ಎಂದು ಎಲ್ಲರೂ ಹೇಳುತ್ತಲೇ ಇದ್ದಾರೆ. (ಒಳಗೆ ಅವರ ಮರ್ಮವನ್ನು ಯಾರು ಬಲ್ಲರು) ಈ ನಡುವೆ ರೇಣುಕಾಚಾರ್ಯ ಅವರು ಬಿಜೆಪಿಯು ವ್ಯಕ್ತಿ ನಿಷ್ಠೆ ಪಕ್ಷವಲ್ಲ, ಕಾರ್ಯಕರ್ತರ ಪಕ್ಷ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ರೇಣುಕಾಚಾರ್ಯ ಜನುಮದಿನ ಹಾಗೂ ಯಡಿಯೂರಪ್ಪರ ಜನುಮ ದಿನದ ನೆಪದಲ್ಲಿ ಮತ್ತೆ ಟಿಕೆಟ್ ವಿಚಾರ ಮತ್ತೆ ಮತ್ತೆ ಮುನ್ನೆಲೆಗೆ ಬಂದಿತ್ತು.
ಲೋಕಸಭೆ ಟಿಕೆಟ್ ಆಕಾಂಕ್ಷಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ್ದ ರೇಣುಕಾಚಾರ್ಯ ನಾನು ಕೂಡ ಆಕಾಂಕ್ಷಿ, ಟಿ.ರವಿಕುಮಾರ್, ಅಜೇಯ್ ಕುಮಾರ್, ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್ ಆಕಾಂಕ್ಷಿಗಳಾಗಿದ್ದು, ನಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಡಲು ಕೇಳಿದ್ದೇವೆ ಎಂದಿದ್ದರು.

ನಾವು ಜಾತ್ಯಾತೀತರು, ಹೊಸ ಮುಖಕ್ಕೆ ಟಿಕೆಟ್ ಕೊಡಲಿ ಎಂಬುದಷ್ಟೇ ನಮ್ಮ ಒತ್ತಾಯ, ಸಮಾಜ, ಪಕ್ಷಕ್ಕೆ ಮುಜುಗರ ಆಗಬಾರದು. ಹಾಗಾಗಿ ಶ್ರಮಜೀವಿಗಳು, ಪಕ್ಷಕ್ಕಾಗಿ ಹಗಲಿರುಳು ದುಡಿದ ನಮ್ಮಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೆ ಗೆಲುವು ಖಚಿತ. ನಾವೇನೂ ಬದಲಾವಣೆ ಬಯಸಿದ್ದೇವೆ, ಅದನ್ನು ಹೈಕಮಾಂಡ್ ಮಾಡುತ್ತದೆ ಎಂಬ ವಿಶ್ವಾಸವಿದೆ. ಬದಲಾವಣೆ ಜಗದ ನಿಯಮ, ಅಭ್ಯರ್ಥಿ ಬದಲಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ರೇಣುಕಾಚಾರ್ಯ ಹೊನ್ನಾಳಿ ಹೋರಿ ಸಂಸದ ಜಿಎಂ ಸಿದ್ದೇಶ್ವರರಿಗೆ ಟಾಂಗ್ ನೀಡಿದ್ದರು.
ಈಗ ಬಿಜೆಪಿ ಟಿಕೆಟ್ ಸಿದ್ದೇಶ್ವರ ಪತ್ನಿ ಗಾಯತ್ರಿ ಅವರ ಪಾಲಾಗಿದೆ. ಹಿಂಬಾಗಿಲ ಮೂಲಕ ಮತ್ತೆ ಸಿದ್ದೇಶ್ವರ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ. ಮುಂದೆ ಡೆಲ್ಲಿ ಬಾಯ್ಸ್ ಬಿಜೆಪಿ ಗೆಲುವಿಗೆ ಸಹಕರಿಸುತ್ತಾರಾ? ಅಥವಾ ಹಿಂಭಾಗಿಲಿನಿದ ಗಾಯತ್ರಿ ಸಿದ್ದೇಶ್ವರ್ ಗೆ (ಬಿಜೆಪಿಗೆ) ಸೋಲಿಗೆ ಖೆಡ್ಡ ತೋಡುತ್ತಾರಾ? ಮುಂದೆ ನೋಡಬೇಕಾಗಿದೆ. ಇತ್ತ ಕಾಂಗ್ರೆಸ್ ಕೂಡ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ದಾವಣಗೆರೆಗೆ ಟಿಕೆಟ್ ಘೋಷಿಸಲು ಹರಸಾಹಸ ಪಡುತ್ತಿದೆ. ಕಾಂಗ್ರೆಸ್ ಟಿಕೆಟ್ ಘೋಷಣೆಯ ನಂತರ ಮತದಾರ ಯಾರ ಪರವಾಗಿ ಒಲವು ವ್ಯಕ್ತಪಡಿಸುತ್ತಾನೆ ಎಂಬದೆ ಅಚ್ಚರಿ! ಏನೇ ಆದರೂ ದಾವಣಗೆರೆಯ ಲೋಕಸಭಾ ಕಣದಲ್ಲಿ ಎರಡು ದಶಕಗಳಿಗಿಂತಲೂ ಹೆಚ್ಚುಕಾಲ ಹಳೆಯ ಮುಖಗಳನ್ನೇ , ಕ್ರಿಯಾಶೀಲವಲ್ಲದ , ವಂಶ ಆಡಳಿತದ ಜೋಲುಮುಖಗಳನ್ನೇ ನೋಡಿದ್ದ ಮತದಾರ ಪ್ರಭುವಿಗೆ ಲೋಕಸಭಾ ಕಣದಲ್ಲಿ ಈ ಬಾರಿ ಎರಡು ಹೊಸ ಮುಖಗಳು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅದರಲ್ಲೂ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಸ್ಪರ್ಧೆಗಳನ್ನೇ ಕಾಣದಿದ್ದ ಮತದಾರರಿಗೆ ಈ ಬಾರಿ ಇಬ್ಬರು ಮಹಿಳಾ ಸ್ಪರ್ಧಿಗಳಿದ್ದರೆ ಇನ್ನೂ ವಿಶೇಷ. ಜನತಂತ್ರದ ಈ ಹಬ್ಬದಲ್ಲಿ ಮತದಾರ ಪ್ರಭು ಜವಾಬ್ದಾರಿಯಿಂದ ಮತ ಚಲಾಯಿಸಲಿ, ಉತ್ತಮ ಸಂಸದರು ಆರಿಸಿ ಬರಲಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಗೆಲ್ಲಲಿ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು