ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತ್ತೀಚಿನ ದಿನಗಳಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿ ನೀಡುತ್ತಿದೆ. ಎರಡು ತಿಂಗಳಿಗೆ ನೀಡುತ್ತಿದ್ದ ಈ ರಿಯಾಯಿತಿಯನ್ನು ಇದೀಗ ಜುಲೈ ಅಂತ್ಯದವರೆಗೂ ನೀಡಲಾಗಿದೆ. ಈ ವರ್ಷ ಶೇ.5ರಷ್ಟು ರಿಯಾಯಿತಿ ಜುಲೈ ಅಂತ್ಯದ ವರೆಗೆ ಜಾರಿಯಲ್ಲಿರಲಿದೆ.
ಈ ಬಗ್ಗೆ ಗುರುವಾರ ಸುತ್ತೋಲೆ ಹೊರಡಿಸಿರುವ ಬಿಬಿಎಂಪಿ, “ಮಾದರಿ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದೆ. ರಿಯಾಯಿತಿಯು 2024 ರ ಜುಲೈ 31ರ ವರೆಗೆ ಇರುತ್ತದೆ” ಎಂದು ಮಾಹಿತಿ ನೀಡಿದೆ.
ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಪಾಲಿಕೆಯ ಆರ್ಥಿಕ ಹಿತದೃಷ್ಟಿಯಿಂದ 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸುವ ತೆರಿಗೆದಾರರಿಗೆ ಶೇ.5 ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಮೇ 1 ರಿಂದ ಜುಲೈ 31 ರವರೆಗೆ ವಿಸ್ತರಿಸಿ ಆದೇಶಿಸಿದೆ.
“ಆರ್ಥಿಕ ವರ್ಷದ ಪೂರ್ಣ ಆಸ್ತಿ ತೆರಿಗೆಯನ್ನು ಪಾವತಿಸಿದರೆ ಬಿಬಿಎಂಪಿ ಕಾಯ್ದೆ ಪ್ರಕಾರ ಏಪ್ರಿಲ್ 30ರವರೆಗೆ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದೀಗ, ಲೋಕಸಭಾ ಚುನಾವಣೆ ಘೋಷಣೆಯಾಗುವ ಹಿನ್ನೆಲೆ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಚುನಾವಣೆ ಕಾರ್ಯದಲ್ಲಿ ತೊಡಗಿರುತ್ತಾರೆ. ಹೀಗಾಗಿ, ಶೇ.5 ರಷ್ಟು ರಿಯಾಯಿತಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟ ಕಾಡಂಚಿನಲ್ಲಿ ಮಹಿಳೆಯ ಅಂಗಾಂಗ ಪತ್ತೆ
2024-25ನೇ ಸಾಲಿಗೆ ₹3,800 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದೆ.