ಹೆಂಡತಿ ಮತ್ತು ಮಗನನ್ನು ಕೆಟ್ಟದಾಗಿ ನಿಂದಿಸಿದಕ್ಕೆ ಉದ್ಯಮಿಯೊಬ್ಬರನ್ನು ಸ್ಕ್ರೂ ಡ್ರೈವರ್‌ನಿಂದ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಮೃತ ವ್ಯಕ್ತಿ. ಸಂತೋಷ್ ಬಂಧಿತ ವ್ಯಕ್ತಿ. ಮಾರ್ಚ್ 12ರಂದು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯ ಬದಿಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಶವವಾಗಿ ಪತ್ತೆಯಾಗಿದ್ದರು.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆ, ಮೃತ ವ್ಯಕ್ತಿ ಕೃಷ್ಣಯಾದವ್ ಎಂದು ಗೊತ್ತಾಗಿದೆ.
ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ ಯಲಹಂಕ ಠಾಣೆ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಸ್ತಿ ತೆರಿಗೆ | ಶೇ 5.ರಷ್ಟು ರಿಯಾಯಿತಿ ಜುಲೈ ವರೆಗೆ ವಿಸ್ತರಣೆ ಮಾಡಿದ ಬಿಬಿಎಂಪಿ
ಮಾರ್ಚ್ 12ರಂದು ಕೃಷ್ಣಯಾದವ್ ಜತೆಗೆ ಸಂತೋಷ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ, ಸಂತೋಷ್ ಪತ್ನಿ ಹಾಗೂ ಪುತ್ರನ ಬಗ್ಗೆ ಕೃಷ್ಣ ಯಾದವ್ ಕೆಟ್ಟದಾಗಿ ಮಾತನಾಡಿದ್ದಾರೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಸಂತೋಷ್ ಕಾರಿನಲ್ಲಿದ್ದ ಸ್ಕ್ರೂ ಡ್ರೈವರ್ ತೆಗೆದುಕೊಂಡು ಕೃಷ್ಣ ಯಾದವ್ ಅವರನ್ನು ಮನಬಂದಂತೆ ಇರಿದು ಕೊಲೆ ಮಾಡಿದ್ದನು ಎನ್ನಲಾಗಿದೆ.
ಬಳಿಕ ಕಾರನ್ನು ಬಾಗಲೂರು ಕ್ರಾಸ್ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ಇದೀಗ, ಪೊಲೀಸರು ಸಂತೋಷ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.