ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಚುನಾವಣಾ ಬಾಂಡ್ ಯೋಜನೆಯನ್ನು ಅತಿ ದೊಡ್ಡ ಹಗರಣ ಎಂದು ಕರೆದಿದ್ದು, ದೇಣಿಗೆ ನೀಡಿ ಅನುಕೂಲ ಪಡೆದು ಅಹ್ರಮವೆಸಗಿರುವ ಹಗರಣವನ್ನು ನ್ಯಾಯಾಲಯದಿಂದ ನಿಯೋಜಿಸಲ್ಪಡುವ ವಿಶೇಷ ತನಿಖಾ ತಂಡದಿಂದ ತನಿಖೆಗೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿರಿಯ ನ್ಯಾಯವಾದಿಯೂ ಆಗಿರುವ ಕಪಿಲ್ ಸಿಬಲ್ ಅವರು ಚುನಾವಣಾ ಬಾಂಡ್‌ಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಪ್ರಕರಣಗಳ ಪರ ವಾದಿಸುತ್ತಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯು ಅಕ್ರಮವಾಗಿದ್ದು, ಯಾವುದೇ ಇತರ ರಾಜಕೀಯ ಪಕ್ಷದೊಂದಿಗೆ ಸ್ಪರ್ಧಿಸದ ರೀತಿ ಒಂದು ರಾಜಕೀಯ ಪಕ್ಷವನ್ನು ಶ್ರೀಮಂತಗೊಳಿಸುತ್ತದೆ ಎಂದು ಕಪಿಲ್ ಸಿಬಲ್ ತಿಳಿಸಿದ್ದಾರೆ.
ಚುನಾವಣಾ ಆಯೋಗವು ಚುನಾವಣಾ ಬಾಂಡ್‌ಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ನಂತರ ಸಿಬಲ್ ಹೇಳಿಕೆ ನೀಡಿದ್ದಾರೆ.
“ಈ ಯೋಜನೆಯನ್ನು ಸ್ಥಾಪಿಸಿದ್ದು ನಮ್ಮ ಮಾಜಿ ಹಣಕಾಸು ಸಚಿವರಾದ ಅರುಣ್ ಜೈಟ್ಲಿ ಅವರು. ಇವರ ಯೋಚನೆ ಬೇರೆ ಯಾವುದೇ ರಾಜಕೀಯ ಪಕ್ಷವು ಬಿಜೆಪಿಯೊಡನೆ ಸ್ಪರ್ಧಿಸಬಾರದು ಎಂಬುದಾಗಿತ್ತು. ಈಗ ಅದು ಸರಿ ಎಂದು ಸಾಬೀತಾಗಿದೆ. ಹಣವುಳ್ಳವರು ಆಟವಾಡುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಮತ್ತು ಆರ್ಥಿಕತೆಯ ನಿಜನೋಟ
“ನೀಡಿದ ಬಾಂಡ್‌ಗಳು ಯಾರಿಗೆ ಹೋದವು ಎಂಬುದು ಪ್ರಶ್ನೆಯಾಗಿತ್ತು.ತನಿಖೆಯ ಮೂಲಕ ಬಾಂಡ್ ಸಂಖ್ಯೆಗಳನ್ನು ಪತ್ತೆ ಹಚ್ಚಬಹುದು. ದೊಡ್ಡ ಕಂಪನಿಗಳ ನಡುವೆ ಹಾಗೂ ಅನುಕೂಲ ಪಡೆದವರ ನಡುವೆ ಸಂಬಂಧವಿದೆ. ಆ ಕಾರಣದಿಂದಾಗಿಯೆ ನಾನು ದೊಡ್ಡ ಅಥವಾ ಯಾವುದೇ ಕಂಪನಿಗಳ ವಿರುದ್ಧ ಆರೋಪ ಮಾಡುತ್ತಿಲ್ಲ” ಎಂದು ತಿಳಿಸಿದರು.
“ ಇದು ತನಿಖೆಯಾಗಬೇಕಾದ ದೊಡ್ಡ ಹಗರಣವಾಗಿದೆ. ಆದರೆ ನನ್ನ ಆತಂಕವೇನೆಂದರೆ ಈ ಅಕ್ರಮ ಯೋಜನೆಯು ಬೇರೆ ಪಕ್ಷಗಳು ಸ್ಪರ್ಧಿಸದಿರುವ ರೀತಿಯಲ್ಲಿ ಕೇವಲ ಒಂದು ರಾಜಕೀಯ ಪಕ್ಷವನ್ನು ಶ್ರೀಮಂತಗೊಳಿಸುತ್ತದೆ. ದೇಣಿಗೆ ಪಡೆದು ಲಾಭ ಮಾಡಿಕೊಂಡಿರುವುದು ಇಲ್ಲಿ ಸ್ಪಷ್ಟವಾಗಿದೆ. ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಆದರೆ ನಿದ್ದೆಗೆ ಜಾರಿರುವ ಜಾರಿ ನಿರ್ದೇಶನಾಲಯದಿಂದ ಈಗ ಸಾಧ್ಯವಾಗದಿರಬಹುದು. ಮುಂದೊಂದು ದಿನ ಇದು ಖಂಡಿತಾ ಸಂಭವಿಸಬಹುದು” ಎಂದು ಸಿಬಲ್ ಹೇಳಿದರು.
“ತನಿಖಾ ಸಂಸ್ಥೆಗಳು ಎಚ್ಚರಗೊಳ್ಳಬೇಕು ಅಥವಾ ನ್ಯಾಯಾಲಯಗಳು ಇವುಗಳನ್ನು ಎಚ್ಚರಿಸುತ್ತವೆ. ನಾನು ಹೇಳಿದಂತೆ, ನ್ಯಾಯಾಲಯದ ನೇಮಿಸಿದ ಸ್ವತಂತ್ರ ಅಧಿಕಾರಿಗಳ ಎಸ್‌ಐಟಿ ಮೂಲಕ ತನಿಖೆ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ ಇದು ಲಂಚದಿಂದ ಬಂದ ಹಣವಾಗಿದ್ದು,ಇದನ್ನು ಚುನಾವಣೆಗೆ ವೆಚ್ಚ ಮಾಡಿದರೆ ದೊಡ್ಡ ಹಗರಣವಾಗಲಿದೆ. ಭಾರತದಲ್ಲಿ ಎರಡು ಹಗರಣಗಳಾಗಿವೆ, ಒಂದು ನೋಟ್ ರದ್ದತಿ ಮತ್ತೊಂದು ಚುನಾವಣಾ ಬಾಂಡ್. ಹಣವು ಸ್ವಿಸ್ ಬ್ಯಾಂಕ್‌ಗಳ ಮೂಲಕ ಬರಬೇಕಿತ್ತು, ಆದರೆ ಇಂತಹ ವ್ಯಕ್ತಿಗಳಿಂದ ಬಂದಿದೆ” ಎಂದು ಕಾಂಗ್ರೆಸ್‌ನ ಮಾಜಿ ನಾಯಕ ಹೇಳಿದರು.
ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್, ಏರ್‌ಟೆಲ್ ಮುಖ್ಯಸ್ಥ ಸುನಿಲ್ ಭಾರತಿ ಮಿತ್ತಲ್,ಐಟಿಸಿ, ವೇದಾಂತ, ಮಹೇಂದ್ರ ಅಂಡ್ ಮಹೇಂದ್ರ ಮುಂತಾದ ಹಲವು ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ.
ಒಟ್ಟು 22,217 ಬಾಂಡ್‌ಗಳನ್ನು ಎಸ್‌ಬಿಐನಿಂದ ಖರೀದಿಸಲಾಗಿದ್ದು,ಇವುಗಳಲ್ಲಿ 22,030 ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡಿವೆ. 6 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬಿಜೆಪಿಗೆ ದೇಣಿಗೆ ನೀಡಲಾಗಿದೆ.
ಮಾರ್ಚ್ 15ರ ಸಂಜೆ 5 ಗಂಟೆಯೊಳಗೆ ವಿವರಗಳನ್ನು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೂ ಮುನ್ನವೇ ಫೆಬ್ರವರಿ 14ರಂದು ಮಾಹಿತಿಯನ್ನು ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಎಸ್‌ಬಿಐ ಮಾರ್ಚ್ 12ರಂದು ಚುನಾವಣಾ ಬಾಂಡ್‌ಗಳ ಖರೀದಿದಾರರ ವಿವರವನ್ನು ಆಯೋಗಕ್ಕೆ ಸಲ್ಲಿಸಿತ್ತು.
