ಭಾರತದ ಜನಸಂಖ್ಯೆಯ ಶೇ.88ರಷ್ಟಿರುವ ಒಬಿಸಿ, ದಲಿತ, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರು ಪ್ರಮುಖ ವಲಯಗಳಾದ ಆಡಳಿತ,ನ್ಯಾಯಾಂಗ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಾಡಾ ತಾಲೂಕಿನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ಜನಸಂಖ್ಯೆಯ ಶೇ.6 ರಷ್ಟು ಇರುವ ಮಂದಿ ಮಾತ್ರ ಅಧಿಕಾರ ಹಾಗೂ ದೇಶದ ಸಂಪತ್ತನ್ನು ನಿಯಂತ್ರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
“ಸರ್ಕಾರದಿಂದ ಉದ್ಘಾಟನೆಗೊಂಡ ವಿಮಾ ಯೋಜನೆಯ ಅನುಕೂಲಗಳನ್ನು ಖಾಸಗಿ ವಿಮಾ ಕಂಪನಿಗಳು ಪಡೆಯುತ್ತಿದ್ದಾರೆ ವಿನಾ ರೈತರು ಪಡೆಯುತ್ತಿಲ್ಲ. ಅತಿವೃಷ್ಟಿಯಿಂದ ಬೆಳೆಗಳು ಹಾಳಾದರೆ ಸರ್ಕಾರ ನೀಡುವ ವಿಮಾ ಹಣವನ್ನು ರೈತರು ಪಡೆಯುತ್ತಿಲ್ಲ. ಬದಲಿಗೆ ಕಂಪನಿಗಳಿಗೆ ಲಾಭವಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಮತ್ತು ಆರ್ಥಿಕತೆಯ ನಿಜನೋಟ
“ನಮ್ಮ ಪಕ್ಷವು ಆಡಳಿತದಲ್ಲಿ ಹಾಗೂ ಇತರ ವಲಯಗಳಲ್ಲಿ ಅಸಮಾನತೆಯನ್ನು ತಡೆಯಲು ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿ ನಡೆಸಲು ಒತ್ತು ನೀಡಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿ ಬಂದರೆ ಇಂತಹ ಕಾರ್ಯಕ್ರಮವನ್ನು ಕೈಗೊಳ್ಳಲಿದೆ” ಎಂದರು.
ಒಬಿಸಿ, ದಲಿತರು, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರು ದೇಶದ ಜನಸಂಖ್ಯೆಯಲ್ಲಿ ಶೇ.88 ರಷ್ಟಿದ್ದಾರೆ. ಆದರೆ ಆಡಳಿತ, ಮಾಧ್ಯಮ ಮತ್ತು ನ್ಯಾಯಾಂಗ ಸೇರಿದ ಇತರ ವಲಯಗಳಲ್ಲಿ ಅವರ ಪ್ರಾತಿನಿಧ್ಯ ತೀರ ಕಡಿಮೆಯಿದೆ. ಒಬಿಸಿ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು ಎಂದು ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.
“ಬಡವರನ್ನು ಜಿಎಸ್‌ಟಿ ಮೂಲಕ ಲೂಟಿ ಮಾಡಲಾಗುತ್ತದೆ. ಹಲವು ಯೋಜನೆಗಳಿಗಾಗಿ ಭೂಮಿಯನ್ನು ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಶ್ರೀಮಂತರ ಭೂಮಿಗಳು ಹಾಗೆಯೇ ಉಳಿಯುತ್ತಿದೆ ಎಂದರು.
ಜನವರಿ 14ರಂದು ಮಣಿಪುರದಿಂದ ಪ್ರಾರಂಭವಾಗಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಮಾರ್ಚ್ 17 ರಂದು ಮುಂಬೈನಲ್ಲಿ ಅಂತ್ಯಗೊಳ್ಳಲಿದೆ.
