ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಪಾದಚಾರಿಯೊಬ್ಬರು ಇದ್ದಕ್ಕಿದ್ದಂತೆ ಬಿಎಂಟಿಸಿ ಬಸ್‌ಗೆ ಅಡ್ಡ ಬಂದಿದ್ದು, ಆತನ ಮೇಲೆ ಬಸ್ ಹರಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚೇತನ್ (35) ಮೃತಪಟ್ಟ ವ್ಯಕ್ತಿ. ಇವರು ಮೂಲತಃ ಆಂಧ್ರಪ್ರದೇಶದವರು ಎಂದು ತಿಳಿದುಬಂದಿದೆ.
“ಮಾರ್ಚ್ 14ರಂದು ಕೆಂಪೇಗೌಡ ಬಸ್ ನಿಲ್ದಾಣದಿಂದ ಜನಪ್ರಿಯ ಅಪಾರ್ಟ್‌ಮೆಂಟ್ ಕಡೆಗೆ ಬಿಎಂಟಿಸಿ ಬಸ್ ತೆರಳುತ್ತಿತ್ತು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಿಂದ ಸ್ವಲ್ಪ ಮುಂದೆ ಬಸ್ ಚಲಿಸುತ್ತಿದ್ದಾಗ ಪಾದಚಾರಿ ಚೇತನ್ ಓಡಿ ಬಂದು ರಸ್ತೆಗೆ ಬಿದ್ದಿದ್ದಾರೆ” ಎಂದು ಬಿಎಂಟಿಸಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ | ಜೈಲಿನಲ್ಲಿದ್ದ ಮಾಜ್ ಮುನೀರ್ ಎನ್ಐಎ ವಶಕ್ಕೆ
“ಆತ ಬಸ್‌ಗೆ ಅಡ್ಡಬಂದದ್ದನ್ನು ಗಮನಿಸಿದ ಚಾಲಕ ತಕ್ಷಣವೇ ಬ್ರೇಕ್ ಹಾಕಿ ಬಸ್ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೂ, ಪಾದಚಾರಿ ಬಸ್‌ನ ಎಡ ಮಧ್ಯೆ ಭಾಗದಲ್ಲಿ ಬಂದ ಕಾರಣ, ಬಸ್‌ನ ಹಿಂದಿನ ಚಕ್ರ ಪಾದಚಾರಿಯ ಎಡಗೈಗೆ ಮತ್ತು ಎಡಗಾಲಿಗೆ ತಾಗಿದೆ. ತೀವ್ರ ಗಾಯವಾಗಿದ್ದ ಆತನನ್ನು, ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 14ರ ಮಧ್ಯರಾತ್ರಿ 12.30ಕ್ಕೆ ಸಾವನ್ನಪ್ಪಿದ್ದಾರೆ” ಎಂದು ಹೇಳಿದೆ.
ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಸ್ ಚಾಲಕ ಶಿವಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.