ತುಮಕೂರಿನ ಪಿಡಬ್ಲ್ಯೂಡಿ ಕಚೇರಿಯಲ್ಲಿ ಟೆಂಡರ್ ಅಕ್ರಮ ಖಂಡಿಸಿ ಧರಣಿ ಕುಳಿತಿದ್ದ ಗುತ್ತಿಗೆದಾರ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಮೇಲೆ ಗುಬ್ಬಿ ಶಾಸಕ ಶ್ರೀನಿವಾಸ್ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟೆಂಡರ್ ಕರಾರು ಮಾಡಿಕೊಡದ ಪಿಡಬ್ಲೂಡಿ ಕಚೇರಿಯ ಇಂಜಿನಿಯರ್ ಧೋರಣೆ ಖಂಡಿಸಿ ರವಿಕುಮಾರ್ ಶುಕ್ರವಾರ ಆಹೋರಾತ್ರಿ ಧರಣಿ ನಡೆಸುತ್ತಿದ್ದರು. ರಾತ್ರಿ 10.30ರ ಸುಮಾರಿಗೆ ಧರಣಿ ಸ್ಥಳಕ್ಕೆ ಏಕಾಏಕಿ ನುಗ್ಗಿದ ಶಾಸಕರು ಮತ್ತು ಅವರ ಬೆಂಬಲಿಗರು ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರಿಗೆ ದೂರು ನೀಡಿರುವ ರವಿಕುಮಾರ್, ತಮಗೆ ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ್ದಾರೆ. ಕಾರಿನಲ್ಲಿ ಕೂರಿಸಿಕೊಂಡು ಕಿಡ್ನಾಪ್ ಮಾಡಲು ಯತ್ನಿಸಿದರು. ಗಲಾಟೆ ಬಿಡಿಸಲು ಬಂದ ಪೊಲೀಸ್ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಲಾಗಿದೆ. ಸ್ಥಳದಲ್ಲಿದ್ದ ಖುರ್ಚಿಗಳನ್ನೆಲ್ಲ ಪುಡಿ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.