ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವಿರುದ್ದ ಬಂಡಾಯ ಎದ್ದು ಸುದ್ದಿಗೀಡಾಗಿದ್ದ ಸಂಘಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು ಎಂದು ಸುದ್ದಿ ಹರಡಿತ್ತು.
ಈ ಬಗ್ಗೆ ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ‘ಪುತ್ತಿಲ ಬಿಜೆಪಿ ಸೇರ್ಪಡೆ ವಿಚಾರ ಬಗ್ಗೆ ಪಕ್ಷದಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ” ಎಂದಿದ್ದರು. ಆದರೆ, ಈ ವಿಚಾರದಲ್ಲಿ ಈಗ ಉಲ್ಟಾ ಹೊಡೆದಿದ್ದು, ‘ರಾಜ್ಯಾಧ್ಯಕ್ಷರ ತೀರ್ಮಾನವೇ ನಮಗೆ ಅಂತಿಮ’ ಎಂದು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮತ್ತೆ ಮಾತನಾಡಿರುವ ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, “ಪುತ್ತಿಲ ಅವರು ಬೆಂಗಳೂರಿನಲ್ಲೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ಜೊತೆ ಮಾತುಕತೆ ನಡೆದು ಸೇರ್ಪಡೆ ಮಾಡಲಾಗಿದೆ. ಇನ್ನು ಮತ್ತೆ ಮಂಗಳೂರಿನಲ್ಲಿ ಸೇರ್ಪಡೆಯಂಥ ಪ್ರಕ್ರಿಯೆಗಳು ಇಲ್ಲ” ಎಂದಿದ್ದಾರೆ.
“ಕೆಲ ಕಾರ್ಯಕರ್ತರು ಹಾಗೂ ಕೆಲವರಲ್ಲಿ ಇಂಥಹ ಗೊಂದಲ ಇರುವುದು ಸಹಜ. ಆದರೆ ರಾಜ್ಯಾಧ್ಯಕ್ಷರೇ ನಮಗೆ ಸುಪ್ರೀಂ. ಅವರ ಸೂಚನೆಯಂತೆ ಪುತ್ತಿಲ ಇರುತ್ತಾರೆ. ಅರುಣ್ ಕುಮಾರ್ ಪುತ್ತಿಲ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ, ಪುತ್ತಿಲ ಕೂಡ ಒಪ್ಪಿದ್ದಾರೆ” ಎಂದು ಸತೀಶ್ ಕುಂಪಲ ತಿಳಿಸಿದ್ದಾರೆ.
“ಪುತ್ತಿಲ ಪರಿವಾರ ವಿಸರ್ಜನೆ ಮಾಡಿಕೊಂಡೇ ಬಿಜೆಪಿಯಲ್ಲೇ ಕೆಲಸ ಮಾಡುತ್ತಾರೆ. ಪುತ್ತೂರು ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ. ಪುತ್ತಿಲ ಪಕ್ಷೇತರ ಸ್ಪರ್ಧೆ ವೇಳೆ ಹಲವು ಸಂಘರ್ಷ ಆಗಿದೆ. ಈ ವಿಚಾರದಲ್ಲಿ ಸರಿ ಪಡಿಸುವ ಕೆಲಸ ಆಗುತ್ತಿದೆ. ಬಹುತೇಕ ಸರಿಯಾಗಿದ್ದು, ಸಣ್ಣ ಸಣ್ಣ ಗೊಂದಲಗಳು ಇರುವುದು ಸಹಜ. ಅದೆಲ್ಲವನ್ನೂ ಸರಿಪಡಿಸುತ್ತೇವೆ. ಆದರೆ ಪುತ್ತಿಲ ಬಿಜೆಪಿಗೆ ಬರಬಾರದು ಅಂತ ಯಾರೂ ಹೇಳಿರಲಿಲ್ಲ” ಎಂದು ಕುಂಪಲ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಏಳನೇ ವೇತನ ಆಯೋಗ ವರದಿ ಸಲ್ಲಿಕೆ, ಶೇ. 27.5 ರಷ್ಟು ಹೆಚ್ಚಳಕ್ಕೆ ಶಿಫಾರಸು
“ಪಕ್ಷ ಸೇರುವ ಬಗ್ಗೆ ರಾಜ್ಯಾಧ್ಯಕ್ಷರ ಜೊತೆಗೆ ಮಾತನಾಡಿ ಸಹಮತ ವ್ಯಕ್ತಪಡಿಸಿ ಪುತ್ತಿಲ ಬಿಜೆಪಿಗೆ ಬಂದಿದ್ದಾರೆ. ಹೀಗಿರುವಾಗ ಮತ್ತೆ ಧ್ವಜ ಕೊಟ್ಟು ಸ್ವಾಗತ ಮಾಡಬೇಕು ಅಂತೇನಿಲ್ಲ. ರಾಜ್ಯಾಧ್ಯಕ್ಷರಿಗಿಂತ ನಾವು ದೊಡ್ಡವರಲ್ಲ, ಅವರು ಹೇಳಿದ ಮೇಲೆ ಮುಗೀತು. ಅರುಣ್ ಪುತ್ತಿಲ ಬಿಜೆಪಿ ಜೊತೆ ಕೆಲಸ ಮಾಡಲಿದ್ದಾರೆ” ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
“ಇದೆಲ್ಲವೂ ಮಾಧ್ಯಮಗಳ ಸೃಷ್ಟಿ” ಎಂದಿದ್ದ ಬಿಜೆಪಿ ಜಿಲ್ಲಾಧ್ಯಕ್ಷ
ಲೋಕಸಭಾ ಚುನಾವಣೆ ಕಾರ್ಯತಂತ್ರ ಬಗ್ಗೆ ಪುತ್ತೂರಿನಲ್ಲಿ ಕಾರ್ಯಕರ್ತರು ಮತ್ತು ಮುಖಂಡರುಗಳೊಂದಿಗೆ ಸಭೆ ನಡೆಸಿದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ಅರುಣ್ ಕುಮಾರ್ ಪುತ್ತಿಲ ಪಕ್ಷ ಸೇರ್ಪಡೆ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, “ಪುತ್ತಿಲ ಪರಿವಾರ ಮಂಗಳೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರ ಬಗ್ಗೆ ಪಕ್ಷದಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ” ಎಂದು ಹೇಳಿದ್ದರು.
