ಜೈಲಿನಲ್ಲಿರುವ ಕೊಲೆ ಆರೋಪಿಯೊಬ್ಬಮೊಬೈಲ್ ಫೋನ್ ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಲೈವ್ ವೀಡಿಯೋ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಜೈಲಿನ ಮೂವರು ವಾರ್ಡನ್‌ಗಳನ್ನು ಜೈಲು ಆಡಳಿತ ಅಮಾನತುಗೊಳಿಸಿದೆ.
ಬರೇಲಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ಆಸಿಫ್ ಲೈವ್ ವಿಡಿಯೋ ಹೋಸ್ಟ್ ಮಾಡುತ್ತಿರುವ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತ್ತು. ಬಳಿಕ, ವಿಡಿಯೋ ಮಾಡಿದ್ದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಎರಡು ನಿಮಿಷದ ವಿಡಿಯೋದಲ್ಲಿ ಆರೋಪಿ ಆಸಿಫ್, “ನಾನು ಸ್ವರ್ಗದಲ್ಲಿದ್ದೇನೆ. ಸ್ವರ್ಗವನ್ನು ಆನಂದಿಸುತ್ತಿದ್ದೇನೆ” ಎಂದು ಹೇಳುತ್ತಿರುವುದು ಕಂಡುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿದ ಕೊಲೆಯಾಗಿದ್ದ ವ್ಯಕ್ತಿಯ ಸಹೋದರ ಗುರುವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಉಮೇಶ್ ಪ್ರತಾಪ್ ಸಿಂಗ್ ಅವರನ್ನು ಭೇಟಿಯಾಗಿ ಲಿಖಿತ ದೂರು ನೀಡಿದ್ದಾರೆ.
“ಮೂರು ಜೈಲು ವಾರ್ಡನ್‌ಗಳಾದ ರವಿಶಂಕರ್ ದ್ವಿವೇದಿ, ಹನ್ಸ್ ಜೀವ್ ಶರ್ಮಾ ಮತ್ತು ಗೋಪಾಲ್ ಪಾಂಡೆ ಅವರನ್ನು ಶುಕ್ರವಾರ ಕರ್ತವ್ಯ ಲೋಪಕ್ಕಾಗಿ ಅಮಾನತುಗೊಳಿಸಲಾಗಿದೆ. ಉಪ ಜೈಲರ್ ಕಿಶನ್ ಸಿಂಗ್ ಬಲ್ದಿಯಾ ಅವರನ್ನು ಲಖನೌ ಜೈಲು ಪ್ರಧಾನ ಕಚೇರಿಗೆ ವರ್ಗಾಯಿಸಲಾಗಿದೆ” ಎಂದು ಕಾರಾಗೃಹಗಳ ಉಪ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಕುಂತಲ್ ಕುಮಾರ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜೈಲರ್‌ಗಳಾದ ವಿಜಯ್ ಕುಮಾರ್ ರೈ ಮತ್ತು ನೀರಜ್ ಕುಮಾರ್ ಅವರಿಂದ ಲಿಖಿತ ವಿವರಣೆಯನ್ನು ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.
2019ರ ಡಿಸೆಂಬರ್ 2ರಂದು ಶಹಜಹಾನ್‌ಪುರದ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಗುತ್ತಿಗೆದಾರ ರಾಕೇಶ್ ಯಾದವ್ (34) ಅವರನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಆಸಿಫ್ ಆರೋಪಿಯಾಗಿದ್ದಾನೆ.
ಮತ್ತೊಬ್ಬ ಆರೋಪಿ ರಾಹುಲ್ ಚೌಧರಿ ಕೂಡ ಯಾದವ್‌ನನ್ನು ಕೊಂದ ಆರೋಪ ಹೊತ್ತಿದ್ದು, ಸದ್ಯ ಇವರಿಬ್ಬರನ್ನು ಬರೇಲಿ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.