ಈ ಹಿಂದಿನ ಅವಧಿಯಲ್ಲಿ ನಾನು ಸಂಸದನಾಗಿದ್ದಾಗ 5 ವರ್ಷಗಳ ಕಾಲ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದೆ. ನನ್ನ ಶಕ್ತಿ ಮೀರಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಹಾಗಾಗಿ ಕ್ಷೇತ್ರದ ಜನತೆ ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಖಂಡಿತ ಕ್ಷೇತ್ರದ ಮತದಾರರು ನನ್ನ ಕೈ ಹಿಡಿಯಲಿದ್ದಾರೆ ಎಂದು ತುಮಕೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ ಆಶೀರ್ವಾದ ಪಡೆದು ಮಾತನಾಡಿದರು.
“ತುಮಕೂರು ಜಿಲ್ಲೆಯ ಜನತೆ 100ಕ್ಕೆ 101 ಭಾಗದಷ್ಟು ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ. ಹಾಗೆಯೇ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಎಲ್ಲರೂ ಕೂಡಾ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹಾಗಾಗಿ ಈ ಬಾರಿ ಎಲ್ಲರೂ ನನ್ನ ಕೈ ಹಿಡಿಯಲಿದ್ದಾರೆಂಬ ವಿಶ್ವಾಸವಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ನಿನ್ನೆ ಬೆಂಗಳೂರಿನಲ್ಲಿ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೆ. ಇಂದು ಸಿದ್ದಗಂಗಾಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಠಗಳು, ದೇವಾಲಯಗಳಿಗೂ ತೆರಳಿ ಆಶೀರ್ವಾದ ಪಡೆದು ಪ್ರಚಾರ ಕಾರ್ಯ ಆರಂಭಿಸುತ್ತೇನೆ” ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಮಾತನಾಡಿ, “ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಎಸ್ ಪಿ ಮುದ್ದಹನುಮೇಗೌಡರನ್ನು ಗೆಲ್ಲಿಸಿಕೊಳ್ಳಲು ಜಿಲ್ಲೆಯ ಎಲ್ಲ ಮುಖಂಡರುಗಳು, ಸಚಿವ ಡಾ ಜಿ ಪರಮೇಶ್ವರ್, ಕೆ ಎನ್ ರಾಜಣ್ಣ, ಟಿ ಬಿ ಜಯಚಂದ್ರ, ಕೆ ಷಡಕ್ಷರಿ ಅವರ ನೇತೃತ್ವದಲ್ಲಿ ನಾವೆಲ್ಲರೂ ಶ್ರಮ ವಹಿಸಿ ಕೆಲಸ ಮಾಡುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜಧನ ಆಧಾರಿತ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸುವಂತೆ ಆಗ್ರಹ
ಮಾಜಿ ಶಾಸಕರುಗಳಾದ ಡಾ. ರಫೀಕ್ ಅಹಮದ್, ಗೌರಿಶಂಕರ್, ಮುಖಂಡರುಗಳಾದ ಕಲ್ಲಹಳ್ಳಿ ದೇವರಾಜು, ಇಕ್ಬಾಲ್ ಅಹಮದ್, ನಯಾಜ್ ಅಹಮದ್, ಜೆ ಕುಮಾರ್, ಮಹೇಶ್, ನರುಗನಹಳ್ಳಿ ವಿಜಯಕುಮಾರ್, ಷಣ್ಮುಖಪ್ಪ, ಸುಜಾತ, ಹಾಲನೂರು ಲೇಪಾಕ್ಷ್, ಆಟೋ ರಾಜು, ಜಿ ಡಿ ವಿಜಯಕುಮಾರ್ ಸೇರಿದಂತೆ ಇತರರು ಇದ್ದರು.
