2024ರ ಲೋಕಸಭಾ ಚುನಾವಣೆಯ ಮತದಾನ ಏಪ್ರಿಲ್ 19ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಬಿಜೆಪಿಯ ಬ್ರಹ್ಮಾಂಡ ಹಗರಣವೊಂದು ಬಹಿರಂಗವಾಗಿದೆ. ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿ ಬರೋಬ್ಬರಿ 6,060 ಕೋಟಿ ರೂ. ದೇಣಿಗೆಯನ್ನು ವಿವಿಧ ಕಂಪನಿಗಳಿಂದ ಪಡೆದಿದೆ. ಅವುಗಳಲ್ಲಿ ಹಲವು ಕಂಪನಿಗಳು ಇಡಿ ದಾಳಿಗೆ ಬೆದರಿದ್ದರೆ, ಕೆಲ ಕಂಪನಿಗಳು ದೇಣಿಗೆ ನೀಡಿ ಪ್ರತಿಫಲ ಪಡೆದಿವೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಹಣಿಯಲು ಹೆಣಗಾಡುತ್ತಿದ್ದ ವಿಪಕ್ಷಗಳಿಗೆ ಈ ಚುನಾವಣಾ ಬಾಂಡ್ ಹಗರಣ ಸುವರ್ಣಾವಕಾಶ ಒದಗಿಸಿದೆ.
ಚುನಾವಣಾ ಬಾಂಡ್ ಮೂಲಕ ಅನಾಮಧೇಯ ಮುಸುಕಿನಲ್ಲಿ ಹತ್ತಾರು ಕಂಪನಿಗಳಿಂದ ದೇಣಿಗೆ ಪಡೆದಿರುವ ಪಕ್ಷಗಳಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದೆ ಎಂಬುದು ಬಹಿರಂಗವಾಗಿದೆ. ಅನೈತಿಕ ಹಾದಿಯಲ್ಲಿ ಬಿಜೆಪಿಗೆ ಬಂದು ಬಿದ್ದ ಅಪಾರ ಹಣವನ್ನು ಪ್ರಶ್ನಿಸುವ, ಇಕ್ಕಟ್ಟಿಗೆ ಸಿಲುಕಿಸುವ ಅಪೂರ್ವ ಅವಕಾಶವನ್ನು ವಿರೋಧ ಪಕ್ಷಗಳು ಬಳಸಿಕೊಳ್ಳಬೇಕು. ಚುನಾವಣಾ ಬಾಂಡ್ ಹಗರಣವನ್ನು ಜನರಿಗೆ ಮನಮುಟ್ಟುವಂತೆ ಅರ್ಥ ಮಾಡಿಸಬೇಕು ಮತ್ತು ಆ ಮೂಲಕ ಜನ ಬೆಂಬಲ ಪಡೆಯಬೇಕು. ಬಾಂಡ್ ಮಾಹಿತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಜನರಲ್ಲಿ ಜಾಗೃತಿ ಮೂಡಿಸಬೇಕು. ಇದು ಈ ಲೋಕಸಭಾ ಚುನಾವಣಾ ಕದನದಲ್ಲಿ ಮಹತ್ವದ ತಿರುವು ಪಡೆಯಲಿದೆ.
ಬಿಜೆಪಿಯ ಹಫ್ತಾ ವಸೂಲಿ ಮತ್ತು ‘ಕ್ವಿಡ್ ಪ್ರೊ ಕ್ವೋ’
ಎಸ್ಬಿಐ ಬಹಿರಂಗಪಡಿಸಿದ ಚುನಾವಣಾ ಬಾಂಡ್ಗಳ ಮಾಹಿತಿಯು, ಸರ್ಕಾರ ಮತ್ತು ವಿವಿಧ ಕಂಪನಿಗಳ ನಡುವೆ ‘ಕ್ವಿಡ್ ಪ್ರೊ ಕ್ವೋ’ (ಕೊಡು-ಪಡೆದುಕೋ) ನಿದರ್ಶನವನ್ನು ಸೂಚಿಸುತ್ತದೆ. ಉದಾಹರಣೆಗೆ, ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ 2023ರ ಏಪ್ರಿಲ್ನಲ್ಲಿ 140 ಕೋಟಿ ರೂ. ಮೌಲ್ಯದ ಬಾಂಡ್ಗಳ ಖರೀದಿಸಿದೆ. ಅದಾದ ಒಂದೇ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ 14,400 ಕೋಟಿ ರೂ. ವೆಚ್ಚದ ಥಾಣೆ-ಬೊರಿವಲಿ ಅವಳಿ ಸುರಂಗ ಯೋಜನೆಯ ಗುತ್ತಿಗೆ ಪಡೆದುಕೊಂಡಿದೆ. ಅಂತೆಯೇ, ಜಿಂದಾಲ್ ಸ್ಟೀಲ್ & ಪವರ್ ಕಂಪನಿ 2022ರ ಅಕ್ಟೋಬರ್ 7ರಂಂದು 25 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿತ್ತು. ಇದಾಗಿ ಕೇವಲ ಮೂರು ದಿನಗಳ ಬಳಿಕ, ಗರೇ ಪಾಲ್ಮಾ IV/6 ಕಲ್ಲಿದ್ದಲು ಗಣಿಯನ್ನು ತನ್ನ ಪಾಲಿಗೆ ತೆಗೆದುಕೊಂಡಿದೆ.
ಇದಲ್ಲದೆ, ಹಫ್ತಾ ವಸೂಲಿ ತಂತ್ರದ ಮಾತುಗಳು ಹೆಚ್ಚಾಗಿ ಹೇಳಿಬರುತ್ತಿವೆ. ಕಂಪನಿಗಳು ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ ಅಥವಾ ಆದಾಯ ತೆರಿಗೆ ಇಲಾಖೆಯಂತಹ ಏಜೆನ್ಸಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ದೇಣಿಗೆ ನೀಡಿವೆ ಎಂದು ಹೇಳಲಾಗುತ್ತಿದೆ. ಹಲವು ಕಂಪನಿಗಳು ತಮ್ಮ ವಿರುದ್ಧ ತನಿಖಾ ಏಜೆನ್ಸಿಗಳು ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಬಾಂಡ್ಗಳನ್ನು ಖರೀದಿಸಿವೆ. ಇದಕ್ಕೆ ಪುರಾವೆ ಎಂಬಂತೆ ಚುನಾವಣಾ ಬಾಂಡ್ ಮೂಲಕ ಹೆಚ್ಚು ದೇಣಿಗೆ ನೀಡಿರುವ ಟಾಪ್ 30 ಕಂಪನಿಗಳಲ್ಲಿ 14 ಕಂಪನಿಗಳು/ಮುಖ್ಯಸ್ಥರು ಇಂತಹ ಬಲವಂತದ ದಾಳಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ಮಣಿಸಲು ಚುನಾವಣಾ ಬಾಂಡ್ ಹಗರಣದ ಅಸ್ತ್ರ
ಚುನಾವಣಾ ಬಾಂಡ್ಗಳ ಮಾಹಿತಿ ಬಹಿರಂಗವು, ಸರ್ಕಾರದ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಸ್ಪಷ್ಟತೆ ಬಯಸುತ್ತದೆ. ಈ ಬಾಂಡ್ಗಳ ಮೂಲಕ ಬಿಜೆಪಿ ಸರ್ಕಾರವು ಬಂಡವಾಳಶಾಹಿ ಕಂಪನಿಗಳು ಮತ್ತು ಪಕ್ಷಗಳ ನಡುವಿನ ಸಂಬಂಧ ಹಾಗೂ ಪಕ್ಷಗಳ ಹಣದ ಮೂಲಗಳನ್ನು ದೇಶದ ಜನರ ಕಣ್ಣಿಗೆ ಕಾಣದಂತೆ ಮಾಡಹೊರಟಿತ್ತು. ಬಾಂಡ್ ಗಳ ಗರಿಷ್ಠ ಫಲಾನುಭವಿ ಬಿಜೆಪಿಯೇ ಆಗಿದೆ. ಹೀಗಾಗಿ, ಪಾರದರ್ಶಕತೆಯ ಬಗ್ಗೆ ಬಿಜೆಪಿಗೆ ಸವಾಲು ಹಾಕಲು ಪ್ರತಿಪಕ್ಷಗಳಿಗೆ ಉತ್ತಮ ವೇದಿಕೆ ಒದಗಿಬಂದಿದೆ. ವಿಪಕ್ಷಗಳು ಶಸ್ತ್ರಸಜ್ಜಿತವಾಗಿ ಚುನಾವಣಾ ಕಣಕ್ಕೆ ಇಳಿಯಲು ಸರಕು ದೊರೆತಿದೆ.
ಮೊದಲನೆಯದಾಗಿ, ಚುನಾವಣಾ ಬಾಂಡ್ ದೇಣಿಗೆಗಳ ಹಿಂದಿನ ಮೂಲಗಳ ಬಗ್ಗೆ ಸ್ಪಷ್ಟತೆಯನ್ನು ಕೇಳಬೇಕು. ಬಿಜೆಪಿ ಮತ್ತು ಆರ್ಥಿಕ ಬೆಂಬಲ ನೀಡುವವರ ಅಪಾರದರ್ಶಕತೆಯನ್ನು ಪ್ರಶ್ನಿಸಬೇಕು. ಅದರೊಂದಿಗೆ, ಪಾರದರ್ಶಕತೆಯ ಲೋಪಗಳ ಮೇಲೆ ಗಮನ ಸೆಳೆಯಬೇಕು.
ಎರಡನೆಯದಾಗಿ, ಸಂಭಾವ್ಯ ‘ಕ್ವಿಡ್ ಪ್ರೊ ಕ್ವೋ’ ವ್ಯವಸ್ಥೆ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು. ಕಾರ್ಪೊರೇಟ್ ದಾನಿಗಳು ಸರ್ಕಾರದಿಂದ ತಮಗೆ ಅನುಕೂಲ ಪಡೆಯಲು ಹೇಗೆ ದೇಣಿಗೆ ನೀಡಿದ್ದಾರೆ ಎಂಬುದನ್ನು ಎಳೆಎಳೆಯಾಗಿ ವಿವರಿಸಬೇಕು. ಆ ಮೂಲಕ, ಬಿಜೆಪಿ ವಲಯದೊಳಗಿನ ವ್ಯವಸ್ಥಿತ ದುರಾಚಾರ ಮತ್ತು ನೈತಿಕತೆಯ ಉಲ್ಲಂಘನೆ ಬಗೆಗಿನ ನಿರೂಪಣೆಯನ್ನು ವಿಪಕ್ಷಗಳು ಜನರ ಮುಂದಿಡಬೇಕು.
ಮೂರನೆಯದು, ಬಿಜೆಪಿಯ ಹಣಕಾಸು ವ್ಯವಹಾರಗಳ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಬೇಕು. ಚುನಾವಣಾ ಬಾಂಡ್ಗಳ ಮೂಲಕ 6,060 ಕೋಟಿ ರೂ. ದೇಣಿಗೆ ಪಡೆದಿರುವ ಬಿಜೆಪಿಗೆ ಯಾವ ಕಂಪನಿಗಳು ದೇಣಿಗೆ ನೀಡಿವೆ ಎಂಬುದನ್ನು ಕಂಡುಕೊಳ್ಳಬೇಕು. ಅದಕ್ಕಾಗಿ, ಬಿಜೆಪಿಗೆ ಯಾರೆಲ್ಲ ದೇಣಿಗೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಬಿಜೆಪಿ ಮೇಲೆ ಒತ್ತಡ ತರಬೇಕು. ಜನಾಭಿಪ್ರಾಯ ರೂಪಿಸಬೇಕು.
ಸಾರ್ವಜನಿಕ ಭಾವನೆಯ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಅಸಮಾಧಾನದ ಅಲೆಯನ್ನು ಹೆಚ್ಚಿಸಬಹುದು. ಹಣಕಾಸಿನ ತಂತ್ರಗಳು, ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗವು ಬಿಜೆಪಿ ಆಡಳಿತದ ಪ್ರತೀಕವೆಂದು ನಿರೂಪಿಸಬಹುದು. ಈ ನಿರೂಪಣೆಯು ಪರಿಣಾಮಕಾರಿಯಾಗಿ ಜನರನ್ನು ತಲುಪಿಸಿದರೆ, ಸಾರ್ವಜನಿಕ ಅಭಿಪ್ರಾಯವನ್ನು ಬದಲಿಸುತ್ತದೆ ಮತ್ತು ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿತ್ತದೆ.
ಪ್ರತಿಪಕ್ಷಗಳು ಹಿಂಜರಿಯುತ್ತಿರುವುದೇಕೆ?
ಹಲವು ವರ್ಷಗಳಿಂದ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಬಿಜೆಪಿಯ ಸ್ನೇಹ ಸಂಬಂಧವನ್ನು ಟೀಕಿಸುವಲ್ಲಿ ರಾಹುಲ್ ಗಾಂಧಿಯಂತಹ ಧ್ವನಿಗಳು ಪ್ರತಿಧ್ವನಿಸುತ್ತಿವೆ. ಆದರೆ, ಚುನಾವಣಾ ಬಾಂಡ್ ಮಾಹಿತಿ ಹೊರಬಿದ್ದು ಮೂರು ದಿನಗಳಾಗುತ್ತಿವೆ. ಆದರೂ, ವಿಪಕ್ಷಗಳು ಈ ಮಾಹಿತಿಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೆಚ್ಚು ಮಾತನಾಡುತ್ತಿಲ್ಲ. ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರತಿಪಕ್ಷಗಳ ಮೌನವು ಆತಂಕ ಉಂಟುಮಾಡುತ್ತಿದೆ.
ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | ದಾಳಿ-ವಸೂಲಿ, ದೇಣಿಗೆ-ಪ್ರತಿಫಲ: ಬಾಂಡ್ ಹಗರಣದ ಮುಖ್ಯಾಂಶಗಳು ಇಲ್ಲಿವೆ!
ಬಿಜೆಪಿಯನ್ನು ಎದುರಿಸುವ ಬಹುದೊಡ್ಡ ಅವಕಾಶ ಕೈ ಸಮೀಪವೇ ಇದೆ. ಆದರೆ, ಪ್ರತಿಪಕ್ಷಗಳು ಜಾಣಗಿವುಡುತನ ಪ್ರದರ್ಶಿಸುತ್ತಿವೆ. ಇಂತಹ ಸಂದರ್ಭದಲ್ಲಿ, ವಿಪಕ್ಷಗಳನ್ನು ಜನರು ಪ್ರಶ್ನಿಸಲೇಬೇಕಾಗಿದೆ. ಅದೇನೆಂದರೆ, ‘ನಿರ್ಣಾಯಕ ನಿಲುವು ತೆಗೆದುಕೊಳ್ಳಲು ವಿರೋಧ ಪಕ್ಷಗಳು ಹಿಂಜರಿಯುತ್ತಿರುವುದೇಕೆ? ಭಯವೇ?’
ಭ್ರಷ್ಟಾಚಾರದ ಈ ಬೃಹತ್ ಹಗರಣದ ಬಗ್ಗೆ ಬಿಜೆಪಿಯನ್ನು ಎದುರಿಸುವಲ್ಲಿ ಪ್ರತಿಪಕ್ಷಗಳು ಎಡವಿದರೆ, ಅವರು ಐತಿಹಾಸಿಕ ಅವಕಾಶವನ್ನು ಕೈಚೆಲ್ಲಿದಂತಾಗುತ್ತದೆ. ವಿಪಕ್ಷಗಳ ಅಂತಹ ನಿಷ್ಕ್ರಿಯತೆಯ ಪರಿಣಾಮವಾಗಿ ಮುಂಬರುವ ವರ್ಷಗಳಲ್ಲಿ, ಸಾರ್ವಜನಿಕ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬಹುದು.
ಪ್ರತಿಪಕ್ಷಗಳು ತಮ್ಮ ಆತಂಕದ ಸಂಕೋಲೆಗಳನ್ನು ಕಳಚಿ, ಚಾಂಪಿಯನ್ಗಳಾಗಿ ಮೇಲೇರುವ ಸಮಯ ಈಗ ಪಕ್ವವಾಗಿದೆ. ವಿಪಕ್ಷಗಳು ಮೈಕೊಡವಿಕೊಂಡು ಎದ್ದೇಳಬೇಕು. ಚುನಾವಣಾ ಬಾಂಡ್ನಲ್ಲಿ ಬಿಜೆಪಿಯ ಹಗರಣವನ್ನು ಜನರ ಮುಂದಿಡಬೇಕು. ‘ನಾ ಕಾವೂಂಗಾ, ನಾ ಕಾನೇದೂಂಗಾ’ ಎಂಬವರ ಮುಖವಾಡವನ್ನು ಕಳಚಬೇಕು. ಮುಖ್ಯವಾಗಿ ಧೈರ್ಯ ಮಾಡಬೇಕು. ಇಲ್ಲವಾದಲ್ಲಿ, ವಿಪಕ್ಷಗಳ ನಾಯಕರು ಮೂರ್ಖರಲ್ಲದೆ, ಮತ್ತೇನು ಆಗಲಾರರು.
Neevu sari illa… Dodda raajakaeeya madi neevu duaddu madikolluva scheem dodda kallru