ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ದಿನನಿತ್ಯ ಒಂದಲ್ಲಾ ಒಂದು ಕಡೆಯಲ್ಲಿ ರಸ್ತೆ ಅಪಘಾತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಕೈ, ಕಾಲು ಶಾಶ್ವತವಾಗಿ ಕಳೆದುಕೊಂಡರೆ ಇನ್ನು ಕೆಲವರು ಗಾಯಾಳುಗಳಾಗುತ್ತಿದ್ದಾರೆ.
ಕಳೆದ ವರ್ಷ 2023ರಲ್ಲಿ ರಾಜ್ಯದಲ್ಲಿ ಬರೋಬ್ಬರಿ 43,440 ಅಪಘಾತಗಳಲ್ಲಿ 52,531 ಜನಗಾಯಗೊಂಡಿದ್ದರೇ, 12,327 ಜನ ಸಾವನ್ನಪ್ಪಿದ್ದಾರೆ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ (ತರಬೇತಿ) ಅಲೋಕ್ ಕುಮಾರ್ ಮಾಹಿತಿ ತಿಳಿಸಿದ್ದಾರೆ.
“2023ರಲ್ಲಿ ಬೀದರ್ ಜಿಲ್ಲೆಯಲ್ಲಿ ಒಟ್ಟು 1097 ರಸ್ತೆ ಅಪಘಾತಗಳು ಸಂಭವಿಸಿವೆ. ಈ ಪೈಕಿ 330 ಮಾರಣಾಂತಿಕ ಅಪಘಾತ ಸಂಭವಿಸಿದರೇ, 767 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿವೆ. ಕಳೆದ ವರ್ಷ ಸಂಭವಿಸಿದ 1097 ಅಪಘಾತಗಳಲ್ಲಿ 1404 ಜನಗಾಯಗೊಂಡಿದ್ದರೇ, 335 ಜನ ಸಾವನ್ನಪ್ಪಿದ್ದಾರೆ” ಎಂಬ ಅಂಕಿಅಂಶಗಳ ಮಾಹಿತಿಯ ಕೋಷ್ಠಕವನ್ನು ಅಲೋಕ್ ಕುಮಾರ್ ʼಎಕ್ಷ್ʼ ನಲ್ಲಿ ಹಂಚಿಕೊಂಡಿದ್ದಾರೆ.
https://x.com/alokkumar6994/status/1768228972888740312?s=20
ಕಳೆದ ವರ್ಷ ಕರ್ನಾಟಕದಲ್ಲಿ ಪ್ರತಿದಿನ 34 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಾರಣಾಂತಿಕ ಅಪಘಾತಗಳಲ್ಲಿ 5% ಹೆಚ್ಚಳವಾಗಿದೆ. ಅಜಾಗರೂಕ ಚಾಲನೆ, ಕಳಪೆ ಚಾಲನಾ ಕೌಶಲ್ಯ, ಕಳಪೆ ರಸ್ತೆಗಳು, ಪಾದಚಾರಿಗಳಿಗೆ ಅಸಮರ್ಪಕ ಸೌಲಭ್ಯ ಸೇರಿದಂತೆ ಇನ್ನಿತರ ಅಂಶಗಳು ಅಪಘಾತಗಳಿಗೆ ಕಾರಣಗಳಾಗಿವೆ. ಸದ್ಯ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು
ಸಾರ್ವಜನಿಕರು ತಮ್ಮ ಅಮೂಲ್ಯವಾದ ಜೀವ ರಕ್ಷಣೆಗೆ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಮತ್ತು ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸುವುದನ್ನು ಮರೆಯಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರ ನೇತ್ರತ್ವದಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸುತ್ತಿದ್ದರೂ ವಾಹನ ಸವಾರರು ಕಿವಿಗೊಡದೆ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ.