ಬಡತನದಲ್ಲಿ ಹುಟ್ಟಿ ಬೆಳೆದ ಹಾಗೂ ಕಷ್ಟ ಪಟ್ಟು ಮುಂದೆ ಬಂದವರು ಅವರಂತೆ ಇರುವ ಬಡ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಮುಂದೆ ಬರಲು ವಿದ್ಯಾರ್ಥಿವೇತನ ನೀಡುತ್ತಿದ್ದಾರೆ. ಇದನ್ನು ಪಡೆದು ಸದುಪಯೋಗಪಡಿಸಿಕೊಂಡು ಉತ್ತಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ಮುಂದೆ ನೀವು ನಿಮ್ಮಂತೆ ಇರುವ ವಿಧ್ಯಾರ್ಥಿಗಳಿಗೆ ಸಹಕಾರ ನೀಡಿ ಅವರಿಗೆ ನೀವು ಸಹಾಯ ಮಾಡಿ ಎಂದು ಬಿಜಾಪುರ ಜೆಸ್ಟಿಟ್ ಸಂಸ್ಥೆಯ ಫಾದರ್ ಫ್ರಾನ್ಸಿಸ್ ಕರೆ ನೀಡಿದರು.
ವಿಜಯಪುರ ನಗರದ ಗಾಂಧಿ ಚೌಕ್ ಹತ್ತಿರವಿರುವ ಸಂತ ಅನ್ನಮ್ಮರ ದೇವಾಲಯದ ಸಭಾಂಗಣದಲ್ಲಿ ಜೆಸ್ವಿಟ್ ಎಜುಕೇಶನಲ್ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಸಂಸ್ಥೆಯ ವಿವಿಧ ಯೋಜನೆಗಳ ಅಡಿ ಹಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಥಿತಿಗಳಾಗಿದ್ದ, ಲೋಯೋಲಾ ಐಟಿಐ ಕಾಲೇಜು ಮುಖ್ಯಸ್ಥ ಫಾದರ್ ಅಂತೋನಿ ಲಾರೆನ್ ಮಾತನಾಡಿ, “ಸಮಾಜದಲ್ಲಿ ಹಾಗೂ ಜೀವನದಲ್ಲಿ ಮುಂದೆ ಬರಲು ಒಂದು ದಿಟ್ಟಗುರಿ ಇರಬೇಕು ಹಾಗೂ ಆ ಗುರಿ ತಲುಪಲು ಒಬ್ಬ ಗುರು ಇರಬೇಕು. ಹಾಗೆ ನಿಮ್ಮ ಗುರಿ ತಲುಪಲು ಸಂಸ್ಥೆಯು ಶ್ರಮಿಸುತ್ತಿದೆ. ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಆದರೆ, ನಿಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ, ನಾಯಕರಾಗಿ” ಎಂದು ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ನ್ಯಾಯಸಮ್ಮತ ಹಾಗೂ ನಿರ್ಭೀತಿ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ: ಜಿಲ್ಲಾಧಿಕಾರಿ
ನಿರ್ದೇಶಕ ಲಾರೆನ್ಸ್ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟಿಯೋಲ್ ಮಚಾದೊ ಮಾತನಾಡಿ, “ಆದ್ಯತೆ ಗುಂಪುಗಳಾದ ಮಾಜಿ ದೇವದಾಸಿ ತಾಯಂದಿರ ಸಮುದಾಯದ ಮಕ್ಕಳು, ಎಚ್‌ಐವಿ ಬಾಧಿತ ಹಾಗೂ ಸೋಂಕಿತ ಮಕ್ಕಳು ಹಾಗೂ ಏಕಪಾಲಕರ ಮಕ್ಕಳು, ವಿಶೇಷ ಅಗತ್ಯವಿರುವ ಮಕ್ಕಳು, ಯಾವುದೇ ಕಾರಣದಿಂದ ಶಿಕ್ಷಣದಿಂದ ವಂಚಿತರಾಗದೆ ಉತ್ತಮ ಶಿಕ್ಷಣ ಪಡೆದುಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಇದರಿಂದ ತಮ್ಮ ಕುಟುಂಬ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವ ಘನತೆಯಿಂದ ಬದುಕುವಂತಾಗುತ್ತದೆ” ಎಂದು ಹೇಳಿದರು.
ಎಲ್ಲ 89 ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದರು.
