ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಆರಂಭವಾಗಿದ್ದು, ಕುಡಿಯುವ ನೀರಿಗೂ ಕೂಡ ಜನರು ಪರಿತಪಿಸುವಂತಾಗಿದೆ. ಉಳ್ಳವರು ಟ್ಯಾಂಕರ್ ನೀರಿಗೆ ಮೊರೆ ಹೋದರೆ, ಬಡವರು ಪಾಲಿಕೆ ಕಳಿಸುವ ನೀರಿನ ಟ್ಯಾಂಕರ್‌ಗೆ ಕಾಯುವಂತಾಗಿದೆ.
ಅಕಾಲಿಕ ಮಳೆಯ ಕಾರಣ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಕೆರೆ, ಜಲಾಶಯಗಳು ನೀರಿಲ್ಲದೇ ಸಂಪೂರ್ಣ ಬತ್ತಿ ಹೋಗಿವೆ. ನಗರದಲ್ಲಿರುವ ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಹಲವಾರು ಕಂಪನಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಇದೀಗ, ನಗರದಲ್ಲಿರುವ ಶಾಲೆಗಳಿಗೂ ನೀರಿನ ಅಭಾವ ತಟ್ಟಿದೆ.
ಸದ್ಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆಯುತ್ತಿವೆ. ಲಕ್ಷಾಂತರ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಇದೀಗ ಶಾಲೆಗಳಲ್ಲಿ ಶುರುವಾದ ನೀರಿನ ಸಮಸ್ಯೆಯಿಂದ ಮಕ್ಕಳು ಪರದಾಡುವಂತಾಗಿದೆ.
ಸರ್ಕಾರಿ ಹಾಗೂ ಖಾಸಗಿ ಶಾಲೆಯ ಮಕ್ಕಳಿಗೆ ಕುಡಿಯುವ ನೀರನ್ನು ಕ್ಯಾನ್‌ಗಳ ಮೂಲಕ ತಂದಿಡಬೇಕಾದ ಸ್ಥಿತಿ ಇದೆ. ಹೀಗಾಗಿ, ಪರೀಕ್ಷೆಗಳನ್ನ ನಡೆಸಲು ಶಿಕ್ಷಣ ಸಂಸ್ಥೆಗಳು ಪರದಾಡುತ್ತಿವೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಜನಪ್ರತಿನಿಧಿಗಳ ಹೆಸರು, ಭಾವಚಿತ್ರ ತೆಗೆಯಲು ಸೂಚನೆ
ಪರೀಕ್ಷೆಗಳು ಮುಗಿಯುವವರೆಗೂ ಬೆಂಗಳೂರು ಜಲಮಂಡಳಿಯಿಂದ ಕುಡಿಯುವ ನೀರು ನೀಡುವಂತೆ ಖಾಸಗಿ ಶಾಲೆಗಳ ಒಕ್ಕೂಟ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆಯಲು ಮುಂದಾಗಿದೆ.
ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೀರು ಪೂರೈಕೆ ಮಾಡುವಂತೆ ಶಾಲೆಗಳ ಒಕ್ಕೂಟ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದು, ಶಿಕ್ಷಣ ಸಚಿವರು ಶಾಲೆಗಳಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಮಾಡುತ್ತೇವೆ ಎಂದು ಹೇಳಿದ್ದಾರೆ.