ಹೇಮೆ ರಾಜಕಾರಣದಿಂದ ವಲಸಿಗ ರಾಜಕಾರಣಕ್ಕೆ ತಿರುವು ಪಡೆದಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವಿ ಸೋಮಣ್ಣ, ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್ ಪಿ ಮುದ್ದಹನುಮೇಗೌಡ ಕಣಕ್ಕಿಳಿದಿದ್ದು, ಚುನಾವಣಾ ಅಖಾಡ ರಂಗೇರಿದೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗಾಳಿಬೀಸಿದ ಹಾಗೆ ಬೇರೆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಲಿಂಗಾಯತ ಮತ್ತು ಒಕ್ಕಲಿಗರ ನಡುವೆ ಚುನಾವಣಾ ಫೈಟ್ ನಡೆಯುತ್ತಾ ಬಂದಿದ್ದು, ಈ ಬಾರಿ ತುಮಕೂರು ಲೋಕಸಭೆಯಲ್ಲಿ ಅಹಿಂದ ಮತಗಳೇ ನಿರ್ಣಾಯಕ ಪಾತ್ರ ವಹಿಸಲಿವೆ. ಜಿಲ್ಲಾ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ನಾಯಕರುಗಳು ರಣತಂತ್ರ ಹೆಣೆಯುತ್ತಿದ್ದಾರೆ. ಹಾಗಾಗಿ ಈ ಬಾರಿಯ ಲೋಕಸಭಾ ಅಖಾಡ ಮಹತ್ವ ಪಡೆದುಕೊಂಡಿದೆ.
1952ರಿಂದ ಶುರುವಾದ ಲೋಕಸಭಾ ಚುನಾವಣೆಯಿಂದಲೂ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರನ್ನು ರಾಜಕಾರಣದಲ್ಲಿ ನೇಪಥ್ಯಕ್ಕೆ ಸರಿಸಲಾಗಿದೆ. 1996ರ ಲೋಕಸಭಾ ಚುನಾವಣೆಯಲ್ಲಿ ಒಬಿಸಿ ವರ್ಗಕ್ಕೆ ಸೇರಿದ್ದ(ಕುರುಬ ಸಮುದಾಯ) ಸಿ ಎನ್ ಭಾಸ್ಕರಪ್ಪನವರು ಜನತಾ ದಳದಿಂದ ಗೆಲುವು ಸಾಧಿಸಿರುವುದು ಹಾಗೂ 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಕೋದಂಡರಾಮಯ್ಯ(ಗೊಲ್ಲ) ಅವರನ್ನು ಹೊರತು ಪಡಿಸಿದರೆ ಉಪ ಚುನಾವಣೆ ಒಳಗೊಂಡಂತೆ ಒಟ್ಟು 18 ಲೋಕಸಭಾ ಚುನಾವಣೆಗಳೆಲ್ಲವೂ ಕೇವಲ ಎರಡು ಸಮುದಾಗಳ ಸುತ್ತಲೇ ಗಿರಕಿ ಹೊಡೆದಿದೆ.
ಕಾಂಗ್ರೆಸ್‌ನಿಂದ 1952ರಲ್ಲಿ ಸಿ ಆರ್ ಬಸಪ್ಪ (ಲಿಂಗಾಯಿತ), ಕಾಂಗ್ರೆಸ್‌ನಿಂದ 1957ರಲ್ಲಿ ಎಂ ವಿ ಕೃಷ್ಣಪ್ಪ(ರೆಡ್ಡಿ ಒಕ್ಕಗ), 1962ರಲ್ಲಿ ಎಂ ವಿ ಕೃಷ್ಣಪ್ಪ ಅವರ ರಾಜೀನಾಮೆಯಿಂದ ನಡೆದ ಉಪಚುನಾವಣೆಯಲ್ಲಿ ಅಜಿತ್ ಪ್ರಸಾದ್ ಜೈನ್ ಕಾಂಗ್ರೆಸ್‌ನಿಂದ ಗೆಲುವು (ಜೖನ) 1967ರಲ್ಲಿ ಪ್ರಜಾ ಸೋಷಿಯಾಲಿಸ್ಟ್ ಪಕ್ಷದಿಂದ ಕೆ ಲಕ್ಕಪ್ಪ ಗೆಲುವು (ಒಕ್ಕಲಿಗ), 1971ರಲ್ಲಿ ಕಾಂಗ್ರೆಸ್‌ನಿಂದ ಕೆ ಲಕ್ಕಪ್ಪ ಗೆಲವು (ಒಕ್ಕಲಿಗ), 1977ರಲ್ಲಿ ಕೆ ಲಕ್ಕಪ್ಪ ಕಾಂಗ್ರೆಸ್‌ನಿಂದ ಗೆಲುವು (ಒಕ್ಕಲಿಗ), 1960ರಲ್ಲಿ ಕೆ ಲಕ್ಕಪ್ಪ ಕಾಂಗ್ರೆಸ್‌ನಿಂದ ಗೆಲುವು (ಒಕ್ಕಲಿಗ), 1984ರಲ್ಲಿ ಜಿ ಎಸ್ ಬಸವರಾಜು ಕಾಂಗ್ರೆಸ್‌ನಿಂದ ಗೆಲುವು (ಲಿಂಗಾಯತ), 1989ರಲ್ಲಿ ಜಿ ಎಸ್ ಬಸವರಾಜು ಕಾಂಗ್ರೆಸ್‌ನಿಂದ ಗೆಲುವು (ಲಿಂಗಾಯತ), 1991ರಲ್ಲಿ ಎಸ್ ಮಲ್ಲಿಕಾರ್ಜುನಯ್ಯ ಬಿಜೆಪಿಯಿಂದ ಗೆಲುವು (ಲಿಂಗಾಯತ)1999 ರಲ್ಲಿ ಜಿ ಎಸ್ ಬಸವರಾಜು ಕಾಂಗ್ರೆಸ್‌ನಿಂದ ಗೆಲುವು (ಲಿಂಗಾಯತ), 2004ರಲ್ಲಿ ಎಸ್ ಮಲ್ಲಿಕಾರ್ಜುನಯ್ಯ ಬಿಜೆಪಿಯಿಂದ ಗೆಲುವು (ಲಿಂಗಾಯತ), 2009 ರಲ್ಲಿ ಜಿ ಎಸ್ ಬಸವರಾಜು ಬಿಜೆಪಿಯಿಂದ ಗೆಲುವು (ಲಿಂಗಾಯತ), 2014ರಲ್ಲಿ ಎಸ್ ಪಿ ಮುದ್ದಹನುಮೇಗೌಡ ಕಾಂಗ್ರೆಸ್‌ನಿಂದ ಗೆಲುವು (ಒಕ್ಕಲಿಗ), 2019ರಲ್ಲಿ ಎಸ್ ಬಸವರಾಜು ಬಿಜೆಪಿಯಿಂದ ಗೆಲುವು (ಲಿಂಗಾಯಿತ) ಈವರೆಗೂ ಇಷ್ಟು ಮಂದಿ ತುಮಕೂರು ಲೋಕಸಭಾ ಕ್ಷೆತ್ರದಿಂದ ಸಂಸತ್ ಪ್ರವೇಶಿಸಿದ್ದಾರೆ.
ತುಮಕೂರು ಕ್ಷೇತ್ರದಲ್ಲಿ 1962ರ ಉಪಚುನಾವಣೆ ಸೇರಿದಂತೆ ಕಾಂಗ್ರೆಸ್ 11, ಬಿಜೆಪಿ 5, ಜೆಡಿಎಸ್ ಮತ್ತು ಪ್ರಜಾ ಸೋಶಿಯಲಿಸ್ಟ್ ತಲಾ ಒಂದು ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ತುಮಕೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳ ಪೖಕಿ ಶಿರಾ, ಪಾವಗಡ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು, ಕುಣಿಗಲ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಉಳಿದ 8 ವಿಧಾನಸಭಾ ಕ್ಷೇತ್ರಗಳು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬರುತ್ತವೆ.
ಅಸೆಂಬ್ಲಿ ಬಲಾಬಲ :
ಸದ್ಯ 8 ವಿಧಾನಸಭಾ ಕ್ಷೇತ್ರದಲ್ಲಿ ತುಮಕೂರು ನಗರ ಮತ್ತು ತುಮಕೂರು ಗ್ರಾಮಾಂತರ ಬಿಜೆಪಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಜೆಡಿಎಸ್, ಕೊರಟಗೆರೆ, ಮಧುಗಿರಿ, ಗುಬ್ಬಿ ತಿಪಟೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
2014ರ ಫಲಿತಾಂಶ : ಮುದ್ದಹನುಮೇಗೌಡ (ಕಾಂಗ್ರೆಸ್) 4,29,868 ಮತಗಳು, ಜಿ ಎಸ್ ಬಸವರಾಜು (ಬಿಜೆಪಿ)3,55,827 ಮತಗಳು ಮತ್ತು ಎಂ ಕೃಷ್ಣಪ್ಪ (ಜೆಡಿಎಸ್) 2,58,883 ಮತಗಳನ್ನು ಪಡೆದಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಜಿ ಎಸ್ ಬಸವರಾಜು (ಬಿಜೆಪಿ) 5,96,127 ಮತಗಳನ್ನು ಪಡೆದು ಜಯ ಗಳಿಸಿದ್ದರೆ, ಎಚ್ ಡಿ ದೇವೇಗೌಡ (ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ) 5,82,788 ಮತಗಳನ್ನು ಪಡೆದು 13,339 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.
ಮತದಾರರ ವಿವರ : ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 8,14,555 ಮಂದಿ ಪುರುಷ ಮತದಾರರಿದ್ದು, 8,36,775 ಮಂದಿ ಮಹಿಳಾ ಮತದಾರಿದ್ದಾರೆ. 73 ಮಂದಿ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 16,51,403 ಮಂದಿ ಮತದಾರರು ಇದ್ದಾರೆ.
ಅಹಿಂದಾದ ಪ್ರಾಬಲ್ಯದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ 5.50 ಲಕ್ಷಕ್ಕೂ ಅಧಿಕ ಮತದಾರಿದ್ದಾರೆ. 1.75 ಲಕ್ಷ ಕುರುಬ ಸಮುದಾಯದ ಮತ ಸಿದ್ದರಾಮಯ್ಯ ಅವರ ಮೇಲೆ ನಿಂತಿದೆ. 2.20 ಲಕ್ಷ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಮತಬ್ಯಾಂಕ್ ಆಗಿವೆ. 3.28 ಲಕ್ಷ ಒಕ್ಕಲಿಗ ಮತಗಳಿದ್ದು, ಮುದ್ದಹನುಮೇಗೌಡ ಸ್ವಜಾತಿ ಮತ ನೆಚ್ಚಿಕೊಂಡಿದ್ದಾರೆ.
2.70ಲಕ್ಷ ಮತ ವೀರಶೖವ ಲಿಂಗಾಯತ ಮತಗಳಿದ್ದು, ಸ್ಥಳೀಯ ಲಿಂಗಾಯತ ನಾಯಕ ಜೆ ಸಿ ಮಾಧುಸ್ವಾಮಿಗೆ ಟಿಕೆಟ್ ತಪ್ಪಿಸಿದ ಸೋಮಣ್ಣಗೆ ಮತ ಹಾಕುತ್ತಾರಾ ಎಂಬುದೇ ಸದ್ಯದ ಕುತೂಹಲವಾಗಿದೆ. ಇದರ ಜತೆಗೆ ಇನ್ನು ಹಲವು ಸಮುದಾಯಗಳಿವೆ.
ಇದನ್ನೂ ಓದಿದ್ದೀರಾ? ಕಲಬುರಗಿ | ಎರಡನೇ ಬಾರಿ ಬಿಜೆಪಿ ಟಿಕೆಟ್ ಪಡೆದ ಸಂಸದ ಡಾ.ಉಮೇಶ್ ಜಾಧವ್
2024 ಲೋಕಸಭೆಯ ಚುನಾವಣಾ ದಿನಾಂಕವೂ ಘೋಷಣೆಯಾಗಿದೆ. ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಜೆಪಿ ಅಭ್ಯರ್ಥಿ ತುಮಕೂರನ್ನು ವಾರಣಾಸಿ ಮಾಡುತ್ತೇನೆ ಎನ್ನುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಅಭಿವೃಧ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ ಎನ್ನುತ್ತಿದ್ದಾರೆ. ಈ ನಡುವೆ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿಯವರು ವಿ ಸೋಮಣ್ಣ ಪರ ಕೆಲಸ ಮಾಡುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಸಚಿವ ಪರಮೇಶ್ವರ್, ಕೆ ಎನ್ ರಾಜಣ್ಣ ಗೌಡರನ್ನು ಗೆಲ್ಲಿಸುವ ಪಣತೊಟ್ಟಿದ್ದಾರೆ. ಯಾರಿಗೆ ವಿಜಯಮಾಲೆ ಸಿಗಲಿದೆ ಎಂಬುದು ಜೂ.4ರಂದು ಸ್ಪಷ್ಟವಾಗಲಿದೆ.
ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ತನ್ನದೇ ಕೊಡುಗೆ ನೀಡಿರುವ ತುಮಕೂರು, ಕಲ್ಪತರು ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ರಾಜಕೀಯವಾಗಿ ಪ್ರಬುದ್ಧವಾಗಿರುವ ಇಲ್ಲಿನ ಮತದಾರರು ವಿಷಯಾಧಾರಿತ ಚುನಾವಣೆಗೆ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದಾರೆ.
ಹೇಮಾವತಿ ನೀರು ಈ ಜಿಲ್ಲೆಯ ಚುನಾವಣೆ ಕೇಂದ್ರ ವಿಷಯವಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ, ಜನರ ಆದ್ಯತೆಗಳೂ ಬದಲಾಗಿವೆ. ಹಾಗಾಗಿ ಹೇಮೆ ರಾಜಕಾರಣದ ಜತೆಗೆ ಸ್ಥಳೀಯತೆಯ ಆಸ್ಮಿತೆ, ಕೊಬ್ಬರಿ ಬೆಲೆ, ಜನಸಾಮಾನ್ಯರ ಸಮಸ್ಯೆಗಳೇ ಈ ಬಾರಿ ಚುನಾವಣಾ ವಿಷಯಗಳಾಗುತ್ತಿವೆ. ಬಿಜೆಪಿ ವಶದಲ್ಲಿರುವ ಕಾಂಗ್ರೆಸ್ ಭದ್ರಕೋಟೆ ಮತ್ತೆ ಕೈ ಸೇರಲಿದಿಯಾ ಅಥವಾ ಯಾರಿಗೆ ಅಹಿಂದ, ಅಸ್ತು ಯಾರಿಗೆ ಎಂಬುದನ್ನು ಕಾದು ನೋಡಬೇಕಿದೆ.
