2023-24ನೇ ಸಾಲಿನಲ್ಲಿ ಬೆಳೆದ ಬಿಳಿ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡಲಾಗುತ್ತದೆ ಎಂದು ಬೆಳೆಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಲಾಗಿದ್ದು, ಈ ಕುರಿತು ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷ ಮತ್ತು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ರೈತರಿಂದ ನೇರವಾಗಿ ಬಿಳಿ ಜೋಳ ಖರೀದಿಸಲು ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ತೀರ್ಮಾನಿಸಿದ್ದು, ಎಫ್.ಎ.ಕ್ಯೂ ಗುಣಮಟ್ಟದ ಜೋಳವನ್ನು ರೈತರಿಂದ ಖರೀದಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು 1 ಲಕ್ಷ ಮೆಟ್ರಿಕ್ ಟನ್ ಗುರಿಯನ್ನು ತಲುಪುವ ತನಕ ಖರೀದಿಸಲು ಸೂಚಿಸಿದ್ದರಿಂದ ರೈತರು ತಕ್ಷಣವೇ ನೋಂದಣಿ ಮತ್ತು ಖರೀದಿಯ ಉಪಯೋಗವನ್ನು ಪಡೆದುಕೊಳ್ಳಿ ಎಂದು ಡಿಸಿ ಕರೆ ನೀಡಿದ್ದಾರೆ.
ಮಾಲ್ದಂಡಿ ಬಿಳಿ ಜೋಳಕ್ಕೆ ರೂ.3,225 (ಪ್ರತಿ ಕ್ವಿಂಟಾಲ್ಗೆ) ಮತ್ತು ಹೈಬ್ರಿಡ್ ಬಿಳಿ ಜೋಳಕ್ಕೆ ರೂ. 3,180 (ಪ್ರತಿ ಕ್ವಿಂಟಾಲ್ಗೆ) ಬೆಲೆ ನಿಗದಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಂಗಳೂರು ಇದು ಖರೀದಿಸುವ ಏಜೆನ್ಸಿಯಾಗಿರುತ್ತದೆ. ಹಿಂಗಾರು ಋತುವಿನ ರೈತರ ನೋಂದಣಿ ಪ್ರಾರಂಭವಾಗಿದೆ. ಹಿಂಗಾರು ಋತುವಿನ ಖರೀದಿ ಪ್ರಾರಂಭ ಮತ್ತು ಮುಕ್ತಾಯದ ದಿನವು ಏಪ್ರಿಲ್ 1 ರಿಂದ ಮೇ 31ರ ವರೆಗೆ ಇರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
