ರಾಜ್ಯ ಕಾಂಗ್ರೆಸ್ ಸರ್ಕಾರವು ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಹಾಗೂ ಹಾಲಿ ಶಾಸಕರು, ಒಮ್ಮೆ ಅಧಿಕಾರ ಪಡೆದವರು, ಅಧಿಕಾರದಲ್ಲಿರುವವರ ಹೆಸರುಗಳೇ ಹೆಚ್ಚಾಗಿದೆ. ಪಕ್ಷಕ್ಕಾಗಿ ಸುಮಾರು 50 ವರ್ಷಗಳಿಂದ ಸೇವೆ ಸಲ್ಲಿಸಿರುವ ನಿಷ್ಠಾವಂತ ಕಾರ್ಯಕರ್ತರ ಹೆಸರುಗಳು ಕಣ್ಮರೆಯಾಗಿವೆ ಎಂದು ಕೆಪಿಸಿಸಿ ಸದಸ್ಯ ಎಚ್. ದುಗ್ಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, “ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು. ಈ ಹಿಂದೆಲ್ಲಾ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಕಾರ್ಯಕರ್ತರನ್ನು ಕಡೆ ಗಣಿಸಿದ್ದೇ ಕಾರಣವಾಗಿದೆ. ಈಗಲೂ ಕಾರ್ಯಕರ್ತರನ್ನು ಕಡೆಗಣಿಸಿದರೆ ಮುಂಬರುವ ಚುನಾವಣೆಯನ್ನು ಎದುರಿಸುವುದು ಕಷ್ಟವಾಗುತ್ತದೆ. ಪಕ್ಷದಲ್ಲಿ ವಂಶ- ಪರಂಪರೆ ಸಂಸ್ಕೃತಿ ಈಗಲೂ ಹೆಚ್ಚಾಗುತ್ತಿದೆ. ಅಧಿಕಾರದಲ್ಲಿದ್ದವರ ಮಕ್ಕಳು, ಅಳಿಯ, ಹೆಂಡತಿ, ಮೊಮ್ಮಕ್ಕಳು ಹೀಗೆ ಅವರ ವಂಶದವರಿಗೆ ಟಿಕೇಟ್ ಕೊಡಿಸಲು ಬಹುತೇಕ ಪೈಪೋಟಿ ನಡೆಯುತ್ತದೆ” ಎಂದು ಅವರು ದೂರಿದರು.
ಪಕ್ಷ ಅಧಿಕಾರದಲ್ಲಿ ಇಲ್ಲದ ಸಮಯದಲ್ಲಿ ದಾವಣಗೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವವನ್ನು ಸಿದ್ದರಾಮೋತ್ಸವವನ್ನಾಗಿ ಮಾಡಿ, ದಾವಣಗೆರೆ ಕಾರ್ಯಕರ್ತರು ಹತ್ತಾರು ಲಕ್ಷ ಜನರನ್ನು ಸೇರಿಸಿದ್ದರು. ರಾಜ್ಯದ 7 ಕೋಟಿ ಜನ ಮತ ಹಾಕಿ ಗೆಲ್ಲಿಸಿ, ಪಕ್ಷವನ್ನು ಸಿದ್ದರಾಮಯ್ಯ ನವರನ್ನು ಅಧಿಕಾರಕ್ಕೆ ತರಲು ಈ ಸಿದ್ದರಾಮೋತ್ಸವವೇ ಕಾರಣವಾಯಿತು. ಕಾಂಗ್ರೇಸ್ ಪಕ್ಷ ಹೀನಾಯ ಸ್ಥಿತಿಯಲ್ಲಿದ್ದಾಗ ದಾವಣಗೆರೆಯಲ್ಲಿನ ಸಿದ್ದರಾಮೋತ್ಸವ ಕಾರ್ಯಕ್ರಮ ಪಕ್ಷಕ್ಕೆ ಅಪಾರ ಶಕ್ತಿ ತುಂಬಿತು. ಆದರೆ ಅವರು ಅಧಿಕಾರಕ್ಕೆ ಬಂದ ಮೇಲೆ ತಮ್ಮನ್ನು ಅಧಿಕಾರಕ್ಕೆ ತಂದ ದಾವಣಗೆರೆ ಕಾರ್ಯಕರ್ತರನ್ನೇ ಮರೆತಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬರಲು ದಾವಣಗೆರೆ ಕಾರ್ಯಕರ್ತರು ಪಟ್ಟ ಶ್ರಮ ಅಪಾರ. ಅದರ ಜೊತೆಗೆ ಡಿ. ಕೆ. ಶಿವಕುಮಾರ್‌ರವರು ಸಹ ತಮಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರು. ಸಿಎಂರವರೇ, ನಿಮ್ಮ ಕೈಯಲ್ಲೇ ಅಧಿಕಾರವಿದೆ. ಲೇಖನಿಯಿದೆ, ಆದರೂ ನೀವು ಏಕೆ ಕಾರ್ಯಕರ್ತರನ್ನು ಅಧಿಕಾರದಿಂದ ವಂಚಿತರನ್ನಾಗಿ ಮಾಡುತ್ತಿದ್ದೀರಿ? ಯಾವ ಕಾಣದ ಕೈ ನಿಮ್ಮನ್ನು ತಡೆಯುತ್ತಿದೆ? ದಯವಿಟ್ಟು ದಾವಣಗೆರೆ ಕಾರ್ಯಕರ್ತರಿಗೂ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ, ಗೌರವಿಸಿ ಎಂದು ಮನವಿ ಮಾಡಿದ್ದಾರೆ.