ಬಡಾನಿಡಿಯೂರು ಕಡಲ ತೀರದಲ್ಲಿ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಅಕ್ರಮವಾಗಿ ರೆಸಾರ್ಟ್ ನಿರ್ಮಾಣಕ್ಕೆ ಹುನ್ನಾರ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡದೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸಿ ಉಡುಪಿಯ ಬಡಾನಿಡಿಯೂರು ಕರಾವಳಿ ಯುವಕ ಮಂಡಲ ಮತ್ತು ಕರಾವಳಿ ಮಹಿಳಾ ಮಂಡಲದ ನೇತೃತ್ವದಲ್ಲಿ ಬಡಾನಿಡಿಯೂರು ಸಮುದ್ರ ತೀರದಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಕರಾವಳಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶಿವಾನಂದ ಸುವರ್ಣ ಮಾಧ್ಯಮದೊಂದಿಗೆ ಮಾತನಾಡಿ, “ಬಡಾನಿಡಿಯೂರು ಗ್ರಾಮದ ಸರ್ವೆ ನಂಬರ್ 118ರಲ್ಲಿ ಮಾಜಿ ಶಾಸಕ ಕೆ ರಘುಪತಿ ಭಟ್ ಮತ್ತು ಅವರ ಶ್ರೀನಿವಾಸ ಅಸೋಸಿಯೇಟ್ ಎಂಬ ಸಂಸ್ಥೆ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಲು ಹುನ್ನಾರ ನಡೆಸುತ್ತಿದೆ. ಇಲ್ಲಿರುವ ಸರ್ಕಾರಿ ಜಾಗದಲ್ಲಿ ಕರಾವಳಿ ಯುವಕ ಮಂಡಲ ಕ್ರೀಡಾಂಗಣ ಹಾಗೂ ಉದ್ಯಾನವನ ನಿರ್ಮಿಸಲು ಮಣ್ಣು ಹಾಕಿದಾಗ ಮಾಜಿ ಶಾಸಕರು ಕರೆ ಮಾಡಿ ಮಣ್ಣು ತೆರವುಗೊಳಿಸುವಂತೆ ಬೆದರಿಕೆ ಹಾಕಿದ್ದಾರೆ” ಎಂದು ಆರೋಪಿಸಿದರು.
“ಇಲ್ಲಿ ಅಕ್ರಮವಾಗಿ ವಾಣಿಜ್ಯ ಭೂಪರಿವರ್ತನೆ ಮಾಡಲಾಗಿದೆ. ವಾಣಿಜ್ಯ ಭೂಪರಿವರ್ತನೆ ಮಾಡುವಾಗ ಕನಿಷ್ಟ 12 ಮೀಟರ್ ಅಗಲದ ರಸ್ತೆ ಇರಬೇಕೆಂಬ ನಗರಾಭಿವೃದ್ಧಿ ಪ್ರಾಧಿಕಾರದ ನಿಮಯವಿದೆ. ಇಲ್ಲಿ ಇರುವುದು ಕೇವಲ 12 ಅಡಿ ಅಗಲದ ರಸ್ತೆ. ಈ ನಿಯಮವನ್ನು ಗಾಳಿಗೆ ತೂರಿ ಮತ್ತು ಸ್ಥಳೀಯ ಜನರನ್ನು ಕತ್ತಲಿನಲ್ಲಿ ಇಟ್ಟು ವಾಣಿಜ್ಯ ಭೂಪರಿವರ್ತನೆ ಮಾಡಲಾಗಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಬೆಂ. ಗ್ರಾಮಾಂತರ | ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಸ್ವಚ್ಛತೆ ಮರೀಚಿಕೆ; ಸ್ಥಳೀಯರು ಹೈರಾಣು
“ಈ ಪ್ರದೇಶದಲ್ಲಿ ತಲತಲಾಂತರದಿಂದ ಸಾಂಪ್ರಾದಾಯಿಕ ಮೀನುಗಾರಿಕೆ ನಡೆಸಲಾಗುತ್ತಿದ್ದು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇದು ಸಂಪೂರ್ಣ ವಸತಿ ಪ್ರದೇಶವಾಗಿದೆ. ಇಲ್ಲಿ ಸುಮಾರು 50 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹಾಕಿ ಈ ದೊಡ್ಡ ಯೋಜನೆ ಮಾಡುವ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿ ಹೇರುವ ಪ್ರಯತ್ನ ನಡೆಸಲಾಗುತ್ತಿದೆ. ರೆಸಾರ್ಟ್‌ನಲ್ಲಿ ಪಬ್, ಬಾರ್‌ಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ಇಂತಹ ಸಂಸ್ಕೃತಿಗೆ ನಾವು ಅವಕಾಶ ನೀಡುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ಮಂದಿ ಗ್ರಾಮಸ್ಥರು ಸಭೆಯಲ್ಲಿ ಇದ್ದರು.