ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆ ಹಾಗೂ ಈಸಾಫ್ ಫೌಂಡೇಶನ್ ಸಹಯೋಗದಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಹತ್ತು ದಿನಗಳ ಕಸೂತಿ ತರಬೇತಿ ಕಾರ್ಯಾಗಾರ ನಡೆಯಲಿದ್ದು, ನಗರದ ವೈಷ್ಣವಿ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಮಾ.18ರಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ಅನೀಲ್ ತೇಜಪ್ಪ, ಕನ್ಯಕೊಲ್ಲೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆಂಜನೇಯ, ಎಪಿಡಿ ಸಂಸ್ಥೆಯ ಈರಣ್ಣ, ಕಾರ್ಯಕ್ರಮ ಸಂಯೋಜಕರು ಪ್ರಭಾವತಿ, ಕಸೂತಿ ಶಿಕ್ಷಕಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ, ಮಹಿಳೆಯರು ಕೌಶಲ್ಯ ತರಬೇತಿಯನ್ನು ಪಡೆಯುವುದು ಬಹಳ ಮುಖ್ಯ. ಈ ಒಂದು ಭಾಗದಲ್ಲಿ ಅನೇಕ ಮಹಿಳೆಯರು ಮನೆಯ ಕೆಲಸಕ್ಕೆ ಮಾತ್ರ ಸೀಮಿತರಾಗಿದ್ದು, ಇಂತಹ ಒಂದು ತರಬೇತಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ. ಸಂಸ್ಥೆಯು ಮಾಡುವಂತ ಈ ಒಂದು ತರಬೇತಿಯನ್ನು ಎಲ್ಲಾ ಮಹಿಳೆಯರು ಉಪಯೋಗ ಪಡೆದುಕೊಂಡು ತಮ್ಮ ಜೀವನದಲ್ಲಿ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಈ ತರಬೇತಿ ಪಡೆಯುವುದು ಬಹಳ ಮುಖ್ಯವಾಗಿದೆ ಎಂದು ಎಪಿಡಿ ಸಂಸ್ಥೆಯ ಈರಣ್ಣ ತಿಳಿಸಿದರು.
ವ್ಯವಸ್ಥಾಪಕ ಅನೀಲ್ ತೇಜಪ್ಪ ಮಾತನಾಡಿ, ತರಬೇತಿ 10 ದಿನಗಳ ವರೆಗೂ ನಡೆಯುತ್ತಿದ್ದು, ಎಲ್ಲರೂ ತಪ್ಪದೆ ಭಾಗವಹಿಸಬೇಕು ಎಂದು ತಿಳಿಸಿದರು. ತರಬೇತಿ ಪಡೆದು ಎಲ್ಲ ಮಹಿಳೆಯರು ಆರ್ಥಿಕವಾಗಿ ಸದೃಢವಾಗಬೇಕೆಂದರು.
ಈ ಕಾರ್ಯಕ್ರಮದಲ್ಲಿ 30 ಜನ ತರಬೇತಿದಾರರು, ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.
