ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಎಂದೂ ಜಾತ್ಯತೀತರಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ತುಮಕೂರು ನಗರದ ಕಾಂಗ್ರೆಸ್ ಕಚೇರಿಲ್ಲಿ ನಡೆದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ದೇವೇಗೌಡರು ಎರಡು ಕಡೆ ಮೊಮ್ಮಕ್ಕಳು, ಒಂದು ಕಡೆ ಅಳಿಯನನ್ನು ನಿಲ್ಲಿಸುತಿದ್ದಾರೆ. ಹಾಗಾದರೆ ಪಕ್ಷದಲ್ಲಿ ಸ್ಪರ್ಧಿಸಲು ಯಾರು ಇರಲಿಲ್ಲವೆ ಎಂದು ಪ್ರಶ್ನಿಸಿದರು.
ಸಂವಿಧಾನವನ್ನು ಬಿಜೆಪಿಯವರು ಎಂದೂ ಒಪ್ಪುವುದಿಲ್ಲ, ವಿಧಿ ಇಲ್ಲ ಎಂದು ಇಟ್ಟುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಸಿದ್ಧಾಂತಿಗಳು ಸೋಲಿಸಲು ಪಕ್ಷದ ಅಭ್ಯಾರ್ಥಿ ಗೆಲುವಿಗೆ ಕೆಲಸ ಮಾಡಬೇಕು ಎಂದರು.
ಹೊರಗಿನವರು ಬಂದು ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಗೆದ್ದಿರುವ ಉದಾಹರಣೆ ಇಲ್ಲ. ವಿ. ಸೋಮಣ್ಣ ಹೊರಗಿನಿಂದ ಬಂದು ತುಮಕೂರಿನಲ್ಲಿ ಬಿಜೆಪಿ ಅಭ್ಯಾರ್ಥಿಯಾಗಿದ್ದಾರೆ. ಹಾಗಾಗಿ ಜಿಲ್ಲೆಯ ಜನ ಮನ್ನಣೆ ನೀಡುವುದಿಲ್ಲ. 1996ರ ಚುನಾವಣೆಯಲ್ಲಿ ಜಿ.ಎಸ್. ಬಸವರಾಜು ಅವರು ಆರ್.ಮಂಜುನಾಥ್ ಅವರನ್ನು ಹೊರಗಿನಿಂದ ಕರೆತಂದು ನಿಲ್ಲಿಸಿದ್ದರು ಹಾಗೇ ಕೋದಂಡರಾಮಯ್ಯ, ಎಚ್.ಡಿ. ದೇವೇಗೌಡ ಇವರೆಲ್ಲ ಸೋಲು ಕಂಡಿದ್ದಾರೆ. ಗೆಲ್ಲುವ ಅಭ್ಯಾರ್ಥಿಯನ್ನು ನಿಲ್ಲಿಸಬೇಕು ಎಂದು ಮುದ್ದಹನುಮೇಗೌಡರಿಗೆ ಅವಕಾಶ ನೀಡಲಾಗಿದೆ ಎಂದರು.
ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ, ಮಹಾ ಭಾರತ ಬರೆದ ವ್ಯಾಸ, ಭಗವದ್ಗೀತೆ ಬರೆದ ಕೃಷ್ಣ ಎಲ್ಲಾರೂ ಶೂದ್ರ ಸಮುದಾಯಕ್ಕೆ ಸೇರಿದವರು. ಗುಡಿ ಕಟ್ಟಿದವರು, ಶ್ರೀರಾಮನ ಮೂರ್ತಿ ಕೆತ್ತಿದವರು ಶೂದ್ರರು. ಆದರೆ, ಇವರಿಗೆ ಗರ್ಭಗುಡಿಗೆ ಬಿಡುವುದಿಲ್ಲ ಎಂದರು.
