ಕೀಟನಾಶಕ ವಿತರಕರು ಕೃಷಿ ವಿಜ್ಞಾನಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ರೈತರ ಏಳಿಗೆಗಾಗಿ ಶ್ರಮಿಸಬೇಕು ಎಂದು ಕೃಷಿ ಮತ್ತು ರೇಷ್ಮೆ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಪಿ ವೆಂಕಟರವಣಪ್ಪ ತಿಳಿಸಿದರು.
ಸಸ್ಯ ಸಂರಕ್ಷಣೆ, ಸಂಘರೋಧ ಮತ್ತು ಸಂಗ್ರಹಣಾ ನಿರ್ದೇಶನಾಲಯದ ಅಡಿಯಲ್ಲಿ, ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆನರ‍್ವಹಣಾ ಕೇಂದ್ರ, ಬೆಂಗಳೂರು ಇವರು ಎರಡು ದಿನಗಳ ಸಮಗ್ರ ಪೀಡೆ ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು(ಹಿಂಗಾರು: 2023-24) ಕೃಷಿ ಮತ್ತು ರೇಷ್ಮೆ ಕೃಷಿ ಮಹಾವಿದ್ಯಾಲಯ, ಚಿಂತಾಮಣಿ ಸಂಯೋಗದೊಂದಿಗೆ ಇತ್ತೀಚೆಗೆ ನಡೆದ ಎರಡು ದಿನದ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನೆಲಗಡಲೆ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ ಹಸ್ತಪ್ರತಿ ಬಿಡುಗಡೆಗೊಳಿಸಿದರು. ಬೆಂಗಳೂರಿನ ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಸಸ್ಯ ಸಂರಕ್ಷಣಾ ಅಧಿಕಾರಿ, ವಿವೇಕ್ ಉಪ್ಪಾರ್ ಮಾತನಾಡಿ, ಮಿತ-ಶತ್ರು ಕೀಟಗಳು ಮತ್ತು ಪೀಡೆನಾಶಕಗಳ ಸುರಕ್ಷಿತ ಉಪಯೋಗಗಳ ಬಗ್ಗೆ ಉಪನ್ಯಾಸ ನೀಡಿದರು.
ಪ್ರಾದೇಶಿಕ ಕೇಂದ್ರೀಯ ಸಮಗ್ರಪೀಡೆ ನಿರ್ವಹಣಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಎ ಸಿದ್ದಿಕ್ಕಿ ಕಾರ್ಯಕ್ರಮ ಉದ್ಘಾಟಿಸಿ, ಸಮಗ್ರಪೀಡೆ ನಿರ್ವಹಣೆಯ ಪ್ರಾಮುಖ್ಯತೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಅಗತ್ಯ ಸೇವೆಗಳ ಗೈರು ಮತದಾರರಿಗೆ (ಎವಿಇಎಸ್) ಅಂಚೆ ಮತದಾನ ಸೌಲಭ್ಯ ವ್ಯವಸ್ಥೆ
ಸಹಾಯಕ ಸಸ್ಯ ಸಂರಕ್ಷಣಾ ಅಧಿಕಾರಿ ದಿವ್ಯಾ ಟಿ ಸಮಗ್ರ ರೋಗ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಆರ್, ಸಹಾಯಕ ಪ್ರಾಧ್ಯಾಪಕ ಡಾ. ನರಸಾ ರೆಡ್ಡಿಯವರು ರೈತರು ಮತ್ತು ಪೀಡೆನಾಶಕ ವಿತರಕರನ್ನು ಕ್ಷೇತ್ರ ಭೇಟಿಗೆ ಕರೆದೊಯ್ದು ಮಾವಿನ ಬೆಳೆಯಲ್ಲಿ ಸಮಗ್ರರೋಗ ನಿರ್ವಹಣೆಯ ವಿಧಾನಗಳನ್ನು ತಿಳಿಸಿದರು.
ನಂತರ ಪ್ರಾದೇಶಿಕ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದಿಂದ ರೈತರಿಗೆ ಟ್ರೈಕೋರ‍್ಮಾ ಮತ್ತು ಸ್ಯೂಡೋಮೊನಾಸ್ ಜೈವಿಕ ಕೀಟನಾಶಕಗಳನ್ನು ವಿತರಿಸಿದರು.
