ಬಿಜೆಪಿ ನಾಯಕರು ಹಿಂದೂ- ಮುಸ್ಲಿಂ ಆಯಾಮವನ್ನು ನಗರತಪೇಟೆ ಪ್ರಕರಣದಲ್ಲಿ ತರಲು ಯತ್ನಿಸುತ್ತಿದ್ದಾರೆಯೇ?
“ಕೆಲವು ಕಿಡಿಗೇಡಿಗಳು ಮಾಡಿರುವ ಘಟನೆ ಇದು. ಆದರೆ ಇದರಲ್ಲಿ ಹಿಂದೂ ಮುಸ್ಲಿಂ ಕಿತ್ತಾಟದ ಆಯಾಮವಿಲ್ಲ. ಎಲ್ಲ ಸಮುದಾಯಗಳು ಒಬ್ಬೊರಿಗೊಬ್ಬರು ಇಲ್ಲಿ ಚೆನ್ನಾಗಿದ್ದಾರೆ”- ಹೀಗೆ ಹೇಳುತ್ತಾರೆ ಬೆಂಗಳೂರಿನ ನಗರತಪೇಟೆ ಸಿದ್ದಣ್ಣ ಗಲ್ಲಿಯಲ್ಲಿನ ವರ್ತಕರು.
ಭಾನುವಾರ ನಡೆದ ಘಟನೆಯೊಂದನ್ನು ಮತೀಯವಾದಿಗೊಳಿಸಿ ಹಿಂದೂ ಮುಸ್ಲಿಂ ಜಗಳದ ಆಯಾಮವನ್ನು ಬಿತ್ತಲು ಬಿಜೆಪಿ ನಾಯಕರು ಮಂಗಳವಾರ ಕಸರತ್ತು ನಡೆಸಿದರು. ಮಾಧ್ಯಮಗಳು ದೊಡ್ಡಮಟ್ಟದಲ್ಲಿ ಸುದ್ದಿಗಳನ್ನು ಮಾಡಿದವು.
ಹನುಮಾನ್ ಚಾಲೀಸ್ ಹಾಕಿದ್ದರಿಂದ ಹಲ್ಲೆ ಮಾಡಲಾಗಿದೆ ಎಂದು ದೂರುದಾರ ವ್ಯಕ್ತಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಆದರೆ ಅದಕ್ಕೂ ಮೊದಲು ದಾಖಲಾದ ಎಫ್‌ಐಆರ್‌ನಲ್ಲಿ ಅಂತಹ ಉಲ್ಲೇಖವೇ ಇರಲಿಲ್ಲ. ಹಲ್ಲೆ ಮಾಡಿದವರ ಪೈಕಿ ಮೂವರು ಮುಸ್ಲಿಮರು ಇಬ್ಬರು ಹಿಂದೂಗಳು ಇದ್ದಾರೆಂಬುದು ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿಯ ತೇಜಸ್ವಿಸೂರ್ಯ, ಸುರೇಶ್‌ಕುಮಾರ್, ಶೋಭಾ ಕರಂದ್ಲಾಜೆ ಅಂಥವರೆಲ್ಲ ಕೋಮುವಾದಿ ಆಯಾಮವನ್ನು ಬಡಿದೆಬ್ಬಿಸಿ ಮೈಲೇಜ್ ಪಡೆಯಲು ಯತ್ನಿಸಿದ್ದಾರೆ.
ನಿಜಕ್ಕೂ ನಗರತಪೇಟೆಯಲ್ಲಿ ಹಿಂದೂ ಮುಸ್ಲಿಂ ಜಗಳದ ಆಯಾಮವಿದೆಯೇ ಎಂದು ತಿಳಿಯಲು ‘ಈದಿನ.ಕಾಂ’ ಪ್ರಯತ್ನಿಸಿತು.
ಹಲ್ಲೆ ನಡೆದಿರುವ ಮೊಬೈಲ್ ಶಾಪ್ ಸಮೀಪವೇ ಟೀ ಅಂಗಡಿಯನ್ನು ಇಟ್ಟುಕೊಂಡಿರುವ ಸತೀಶ್ ಎಂಬವರು ಪ್ರತಿಕ್ರಿಯಿಸಿ, “ಕೆಲವು ಪುಂಡ ಹುಡುಗರು ಇಲ್ಲಿ ಗಲಾಟೆ ಮಾಡುತ್ತಲೇ ಇದ್ದಾರೆ. ಒಂದೂವರೆ ವರ್ಷದಿಂದ ಅವರ ಉಪಟಳವಿದೆ. ಕೆಲವರಿಗೆ ಭಯ ಹುಟ್ಟಿಸುತ್ತಾರೆ. ಅವರನ್ನು ಕಂಡರೆ ಜನರೂ ಭಯಬೀಳುತ್ತಾರೆ. ಹೀಗೆ ಗಲಾಟೆ ಮಾಡುತ್ತಿರುವವರು ಪಕ್ಕದ ಗಲ್ಲಿಯಲ್ಲೇ ವಾಸಿಸುತ್ತಾರೆ. ಕಿಡಿಗೇಡಿಗಳು ಡ್ರಗ್ ಅಡಿಕ್ಟ್‌ಗಳಾಗಿದ್ದಾರೆ. ಬಂದು ಹೊಡೆಯೋದು, ಮೊಬೈಲ್ ಇನ್ನಿತರ ವಸ್ತುಗಳನ್ನು ಕಿತ್ತುಕೊಳ್ಳೋದು ಮಾಡುತ್ತಾರೆ” ಎಂದು ವಿವರಿಸಿದರು.

ಮುಂದುವರಿದು, “ಇದು ಹಿಂದೂ ಮುಸ್ಲಿಂ ಗಲಾಟೆಯಲ್ಲ. ಮುಸ್ಲಿಮರು ಒಳ್ಳೆಯವರಿದ್ದಾರೆ. ಐದಾರು ಜನರ ಕಿತಾಪತಿ ಇದಾಗಿದೆ. ಅವರನ್ನು ಹದ್ದುಬಸ್ತಿಗೆ ತಂದರೆ ಎಲ್ಲವೂ ಸರಿಯಾಗುತ್ತದೆ. ಹಿಂದೂ ಮುಸ್ಲಿಂ ಆಯಾಮವೆಲ್ಲ ಘಟನೆಯಲ್ಲಿ ಇಲ್ಲ. ನಾನು ಹಲವು ವರ್ಷಗಳಿಂದ ಇದೇ ಏರಿಯಾದಲ್ಲಿ ಅಂಗಡಿ ನಡೆಸುತ್ತಿದ್ದೇನೆ. ಹಿಂದೂ ಮುಸ್ಲಿಂ ಚೆನ್ನಾಗಿದ್ದೇವೆ. ಮುಸ್ಲಿಮರೂ ಒಳ್ಳೆಯವರು; ಹಿಂದೂಗಳು ಒಳ್ಳೆಯವರು. ಅವರ ಪಾಡಿಗೆ ಅವರಿದ್ದಾರೆ, ನಮ್ಮ ಪಾಡಿಗೆ ನಾವಿದ್ದೇವೆ. ಒಂದೂವರೆ ವರ್ಷದಿಂದ ಕೆಲವು ಕಿಡಿಗೇಡಿಗಳದ್ದಷ್ಟೇ ಗಲಾಟೆ” ಎಂದು ಸ್ಪಷ್ಟಪಡಿಸಿದರು.
“ಕಿಡಿಗೇಡಿಗಳ ಉಪಟಳವನ್ನು ಪೊಲೀಸರಿಗೆ ಹೇಳಲು ಜನರು ಹೆದರುತ್ತಾರೆ. ಅಂದು ಹನುಮಾನ್ ಚಾಲೀಸ್ ಹಾಕಿದ್ದರೋ ಇಲ್ಲವೋ ಗೊತ್ತಿಲ್ಲ. ನಾನು ಭಾನುವಾರ ಅಂಗಡಿ ತೆರೆದಿರಲಿಲ್ಲ. ಮಾಧ್ಯಮಗಳಲ್ಲಿ ನೋಡಿದ ಮೇಲೆಯೇ ಇಲ್ಲಿ ಗಲಾಟೆ ನಡೆದಿದೆ ಎಂದು ತಿಳಿಯಿತು” ಎಂದರು.
“ನಗರತಪೇಟೆಯಲ್ಲಿ ಕನ್ನಡ, ತಮಿಳು, ಹಿಂದಿ ಭಾಷಿಗರು, ಹಿಂದೂ ಮುಸ್ಲಿಮರು, ಮಾರ್ವಾಡಿಗಳು ಸೇರಿದಂತೆ ವಿವಿಧ ಸಮುದಾಯಗಳಿವೆ. ಅವರವರ ಕೆಲಸದಲ್ಲಿ ಅವರಿದ್ದಾರೆ. ದೂರದಿಂದ ಬಂದಿರುವ ಬಂಗಾಲಿಗಳು ಇಲ್ಲಿನ ಕಿಡಿಗೇಡಿಗಳಿಗೆ ಹೆದರುತ್ತಾರೆ. ಅಂತಹ ಬಡಪಾಯಿಗಳನ್ನು ಬೆದರಿಸಿ ವಸೂಲಿ ಮಾಡುವ ಕೆಲಸ ನಡೆಯುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿ ಮೊಹಮ್ಮದ್ ಜಾಫರ್ ಮಾತನಾಡಿ, “ಹಿಂದೂ ಮುಸ್ಲಿಂ ಗಲಾಟೆ ಎಂಬುದೆಲ್ಲ ಸುಳ್ಳು. ನಾವೆಲ್ಲ ಒಟ್ಟಿಗೆ ಇದ್ದೇವೆ. ಚಿಲ್ಲರೆ ಜಗಳ ಇದಾಗಿದೆ. ಅದನ್ನು ದೊಡ್ಡದು ಮಾಡುತ್ತಿದ್ದಾರೆ. ರಂಜಾನ್ ಮಾಸವಿದೆ. ಉಪವಾಸ ಇದ್ದು, ಅವರವರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಪೊರ್ಕಿಗಳು ಖಂಡಿತ ಇದ್ದಾರೆ. ಅವರು ತೊಂದರೆ ಮಾಡುತ್ತಾರೆ. ಮಾರ್ವಾಡಿಗಳು, ಹಿಂದೂಗಳು, ಮುಸ್ಲಿಮರೆಲ್ಲರೂ ವ್ಯಾಪಾರ ಮಾಡುವ ಜಾಗವಿದು. ಯಾರು ಯಾರಿಗೂ ತೊಂದರೆ ಕೊಡುವುದಿಲ್ಲ” ಎಂದು ಹೇಳಿದರು.

“ದೊಡ್ಡದೊಡ್ಡ ಎಂಪಿಗಳು ಬರುವ ಅಗತ್ಯವಿರಲಿಲ್ಲ. ಹಲಸೂರು ಗೇಟ್ ಪೊಲೀಸರೇ ಇದನ್ನು ಪರಿಹರಿಸಿಬಿಡುತ್ತಾರೆ. ದೊಡ್ಡ ರ್‍ಯಾಲಿ ಮಾಡುವುದೂ ಬೇಕಿರಲಿಲ್ಲ. ಈ ಪೊರ್ಕಿಗಳು ಮೊದಲಿನಿಂದಲೂ ಕಿರಿಕಿರಿ ಮಾಡುತ್ತಾ ಇದ್ದಾರೆ. ಗಲಾಟೆ ಮಾಡುತ್ತಿರುವ ಒಬ್ಬಾತ ಅನೇಕ ಸಲ ಸ್ಟೇಷನ್‌ಗೆ ಹೋಗಿದ್ದಾನೆ” ಎಂದು ಮಾಹಿತಿ ನೀಡಿದರು.
ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ’ಈದಿನ.ಕಾಂ’ಗೆ ಪ್ರತಿಕ್ರಿಯಿಸಿದ್ದು, “ಆರೋಪಿಯಲ್ಲಿ ಒಬ್ಬ ಸುಲೇಮಾನ್ ಎಂಬಾತ ಇದ್ದಾನೆ. ಆತನ ವಿರುದ್ಧ ಎರಡು ಗಂಭೀರ ಪ್ರಕರಣಗಳಿವೆ. ಅವುಗಳ ವಿಚಾರಣೆ ಈಗ ಕೋರ್ಟ್‌ನಲ್ಲೂ ನಡೆಯುತ್ತಿದೆ. ಒಂದು ಪ್ರಕರಣ ಹಾಫ್ ಮರ್ಡರ್‌ಗೆ ಸಂಬಂಧಿಸಿದೆ” ಎಂದು ತಿಳಿಸಿದರು.
ಸುಲೇಮಾನ್, ಶಾನವಾಝ್, ರೋಹಿತ್, ದಾನಿಶ್, ತರುಣ ಅಲಿಯಾಸ್ ದಡಿಯ ಆರೋಪಿಗಳಾಗಿದ್ದಾರೆ.
