ಬಾಗಲಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಮತ್ತೆ ಬಿಜೆಪಿ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಹೆಸರು ಘೋಷಣೆ ಮಾಡಿದ್ದರೂ, ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಯಾರ ಹೆಸರನ್ನೂ ಘೋಷಣೆ ಮಾಡಿಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ.
ಕಾಂಗ್ರೆಸ್ ಪಕ್ಷದಿಂದ ವೀಣಾ ಕಾಶಪ್ಪನವರ, ಮಾಜಿ ಸಂಸದ ವಿಜಯಕುಮಾರ್ ಸರನಾಯಕ, ಆನಂದ ನ್ಯಾಮಗೌಡ, ರಕ್ಷಿತಾ ಈಟಿ ಇನ್ನೂ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದು, ಈ ನಡುವೆ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಹೆಸರು ಕೇಳಿ ಬರುತ್ತಿದ್ದು, ಯಾರಿಗೆ ಟಿಕೆಟ್ ಎಂಬ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಕಳೆದ ಬಾರಿ ಸ್ಪರ್ಧಿಸಿದ್ದ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮಾಜಿ ಸಂಸದ ಅಜಯಕುಮಾರ ಸರನಾಯಕ, ಮಹಿಳಾ ಘಟಕದ ಅಧ್ಯಕ್ಷ ರಕ್ಷಿತಾ ಈಟಿ ಟಿಕೆಟಿಗಾಗಿ ತಮ್ಮ ನಾಯಕರ ಮೂಲಕ ಲಾಭಿ ನಡೆಸಿದ್ದರು. ಈ ಮೂವರಲ್ಲಿ ಒಬ್ಬರು ಅಭ್ಯರ್ಥಿ ಆಗಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ಇದೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರೂ, ಕ್ಷೇತ್ರದಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದೇನೆ. ಹಾಗಾಗಿ ನನಗೆ ಟಿಕೆಟ್ ಕೊಡಬೇಕು. ಹೈಕಮಾಂಡ್ ಮೇಲೆ ವಿಶ್ವಾಸವಿದೆ ಎಂದು ಬಾಗಲಕೋಟೆ ಲೋಕಸಭಾ ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರ ವಿಶ್ವಾಸದಲ್ಲಿದ್ದಾರೆ.
ಇನ್ನು ವೀಣಾ ಕಾಶಪ್ಪನವರಿಗೆ ಟಿಕೆಟ್ ಕೊಡಬೇಕೆಂದು ಕ್ಷೇತ್ರದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ವೀಣಾ ಕಾಶಪ್ಪನವರೇ ಸೂಕ್ತ ಅಭ್ಯರ್ಥಿ. ಅವರಿಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರೆಲ್ಲರೂ ಸೇರಿ ಗೆಲ್ಲಿಸಿಕೊಂಡು ಬರುತ್ತವೆ ಎಂದು ಹೇಳುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ನಾಯಕರು ಆನಂದ ನ್ಯಾಮಗೌಡ ಅವರನ್ನು ಸೂಚಿಸಿದ್ದರಿಂದ, ಅವರತ್ತ ಒಲವು ತೋರಿದ್ದರು. ಆದರೆ, ಆನಂದ ಮಾಜಿ ಶಾಸಕ ನ್ಯಾಮಗೌಡ ಸ್ಪರ್ಧಿಸಬೇಕೋ, ಬೇಡವೋ ಎಂಬ ಗೊಂದಲದಲ್ಲಿಯೇ ಇದ್ದಾರೆ ಎಂಬ ಆಪ್ತ ಮೂಲಗಳು ಹೇಳುತ್ತಿವೆ.
ಇನ್ನು ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಹೆಸರು ಕೇಳಿ ಬಂದಿದೆ. ಇವರು ಪಕ್ಕದ ವಿಜಯಪುರ ಜಿಲ್ಲೆಯವರು. ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದರೆ ನಾನು ಕೂಡ ಸ್ಪರ್ಧಿಸುವೆ ಎಂದು ಹೇಳುತ್ತಿದ್ದಾರೆ.
ಜಿಲ್ಲೆಯವರಿಗೆ ಟಿಕೆಟ್ ನೀಡಬೇಕು. ಕಳೆದ ಬಾರಿ ಸೋತಿರುವ ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡಬೇಕೆಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ಮಂಜುನಾಥ ಪರುತಗೇರಿ ಆಗ್ರಹಿಸಿದ್ದಾರೆ.
ಬೇರೆ ಜಿಲ್ಲೆಯವರಿಗೆ ಟಿಕೆಟ್ ಕೊಟ್ಟು, ಜಿಲ್ಲೆಗೆ ಅವಮಾನ ಹಾಗೂ ಅನ್ಯಾಯ ಮಾಡಬೇಡಿ ಎಂದು ಕರವೇ ಜಿಲ್ಲಾ ಅಧ್ಯಕ್ಷ ಬಸವರಾಜ ಧರ್ಮಂತಿ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಬಾಗಲಕೋಟೆ ಲೋಕಸಭಾ ಚುನಾವಣೆ ದಿನಂಕ ಘೋಷಣೆ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲೆಯವರಿಗೆ ಸಿಗುತ್ತದೆಯೋ ಇಲ್ಲ ಬೇರೆ ಜಿಲ್ಲೆಯವರಿಗೆ ಟಿಕೆಟ್ ಸಿಗುತ್ತದೆಯೋ ಕಾದು ನೋಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.