ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 2023ರ ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷಕ್ಕೆ ಬಹುಮತವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಮಹಿಳಾ ಮತದಾನವು ಒಂದು ರಾಷ್ಟ್ರ ಮತ್ತು ರಾಜ್ಯದ ಬಹುಮತದ ಸರ್ಕಾರವನ್ನು ರಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶದ ಒಟ್ಟು ಮತದಾರರ ಸಂಖ್ಯೆ 96.88 ಕೋಟಿ, ಅದರಲ್ಲಿ ಪುರುಷ ಮತದಾರರ ಸಂಖ್ಯೆ 49.7ಕೋಟಿ. ಮಹಿಳಾ ಮತದಾರರ ಸಂಖ್ಯೆ 47.1 ಕೋಟಿಯಷ್ಟಿದ್ದು, ಈ ಅಂಕಿ ಅಂಶಗಳನ್ನು ಗಮನಿಸಿದಾಗ ಸರ್ಕಾರ ರಚನೆಯಲ್ಲಿ ಮಹಿಳಾ ಮತದಾರರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಬಹುದಾಗಿದೆ.
ಮಹಿಳಾ ಮತದಾನವನ್ನು ಹೆಚ್ಚಿಸುವಲ್ಲಿ ಮಹಿಳಾ ಪರವಾದ ಯೋಜನೆಗಳ ಪಾತ್ರ
ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಮಹಿಳೆಯರನ್ನು “ನೀವು ಯಾರಿಗೆ ವೋಟ್ ಹಾಕ್ತೀರಿ ಅಂತ ಕೇಳಿದಾಗ” “ಯಾರಿಗೆ ವೋಟ್ ಹಾಕಿದ್ರ ಎನ್ ಬರ್ತೈತ್ರಿ ನಾವು ದುಡಿಯುವದಂತೂ ತಪ್ಪಾಂಗಿಲ್ಲಾರಿ” ಎಂಬ ಮಾತುಗಳು ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ಮಹಿಳೆಯರು ಅತ್ಯಂತ ಆಸಕ್ತಿಯಿಂದ ಮತದಾನದಲ್ಲಿ ಭಾಗಿಯಾಗುತ್ತಿದ್ದಾರೆ ಮತ್ತು ಮಹಿಳಾ ಪರವಾದ ಯೋಜನೆಗಳು ಸಹ ಇದಕ್ಕೆ ಪ್ರಮುಖ ಕಾರಣವಾಗಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 2023ರ ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷಕ್ಕೆ ಬಹುಮತವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಮನಸ್ಸು ಗೆದ್ದಿರುವುದಕ್ಕೆ ಬೆಳಗಾವಿ ಜಿಲ್ಲೆಯ ಎರಡು ಘಟನೆಗಳೆ ಸಾಕ್ಷಿ
ಬೆಳಗಾವಿ ಜಿಲ್ಲೆ ಸಂಗೊಳ್ಳಿ ಗ್ರಾಮದ ನಿಂಗವ್ವ ಸಿಂಗಾಡಿ ಎಂಬ ಅಜ್ಜಿಯು ಸವದತ್ತಿಯಲ್ಲಿರುವ ತನ್ನ ಮೊಮ್ಮಗನ ಮನೆಯ ಗೃಹ ಪ್ರವೇಶಕ್ಕೆ ಹೋಗಲು ಧಾರವಾಡ-ಗೋಕಾಕ ಬಸ್ ಹತ್ತುವಾಗ ಬಸ್ ನ ಮೆಟ್ಟಿಲುಗಳಿಗೆ ತಲೆ ಬಾಗಿ ನಮಸ್ಕರಿಸಿದ ಘಟನೆ ರಾಜ್ಯದ ತುಂಬೆಲ್ಲ ದೊಡ್ಡ ಸುದ್ದಿಯನ್ನು ಮಾಡಿತ್ತು ಹಾಗೂ ಶಕ್ತಿ ಯೋಜನೆಯ ಮಹತ್ವದ ಬಗ್ಗೆ ಅರಿವು ಮೂಡಿಸಿತ್ತು.
ಇನ್ನೊಂದು ಘಟನೆ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ (34) ಮೃತಪಟ್ಟಾಗ, ಅಂತ್ಯಸಂಸ್ಕಾರದ ಸಂದರ್ಭದಲ್ಲಿ ವಿಶ್ವನಾಥ ಅವರ ತಾಯಿ ನೀಲವ್ವ ಅಳುತ್ತಲೇ “ಯವ್ವಾ ನೀ ಬದುಕಾಕ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಬರ್ತಾವ ಬಿಡು” ಎಂದು ಹೇಳಿದ್ದ ಮಗನ ಮಾತನ್ನು ನೆನಪಿಸಿಕೊಂಡು ತಾಯಿ ಕಣ್ಣೀರು ಹಾಕಿದ್ದು, ಗೃಹಲಕ್ಷ್ಮೀ ಯೋಜನೆಯು ಮಹಿಳೆಯರಿಗೆ ಅದೆಷ್ಟು ಅನುಕೂಲವಾಗಿದೆ ಎಂದು ತಿಳಿಸಿಕೊಟ್ಟಿತ್ತಲ್ಲದೆ, ಬಿಟ್ಟಿಭಾಗ್ಯವೆಂದು ಅಪಪ್ರಚಾರ ಮಾಡುತ್ತಿದ್ದವರ ಕಣ್ಣು ತೆರೆಸಿತ್ತು. ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 5 ಕೋಟಿ 42 ಲಕ್ಷಕ್ಕೂ ಅಧಿಕವಾಗಿದ್ದು ಅದರಲ್ಲಿ ಮಹಿಳಾ ಮತದಾರರ ಸಂಖ್ಯೆ 2 ಕೋಟಿ 70 ಲಕ್ಷಕ್ಕಿಂತ ಹೆಚ್ಚಿದ್ದು ಈ ಸಂಖ್ಯೆಯು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಲಾಭವನ್ನು ತಂದುಕೊಡಬಹುದಾಗಿದೆ.
ದೇಶದ 12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು
ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಬಿಹಾರ, ಮಣಿಪುರ, ಮೇಘಾಲಯ, ಪುದುಚೆರಿ, ಗೋವಾ, ಅರುಣಾಚಲ ಪ್ರದೇಶ, ಉತ್ತರಾಖಂಡ, ಮಿಜೋರಾಂ, ದಿಯು ಮತ್ತು ದಾಮನ್ ಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯು ಅಧಿಕವಾಗಿದ್ದು, ಈ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳಾ ನ್ಯಾಯ ಹೆಸರಿನಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ.
1. ಮಹಾಲಕ್ಷ್ಮೀ ಗ್ಯಾರಂಟಿ ಯೋಜನೆಯಡಿ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ ರೂಪಾಯಿ ಕೊಡುವುದು
2. ಆದಿ ಆಭಾರಿ ಪೂರಾ ಹಕ್
3. ಶಕ್ತಿ ಕಾ ಸಮ್ಮಾನ
4. ಅಧಿಕಾರ ಮೈತ್ರಿ
5. ಸಾವಿತ್ರಿಬಾಯಿ ಫುಲೆ ಹಾಸ್ಟೆಲ್
ಈ ಎಲ್ಲ ಯೋಜನೆಗಳು ಮಹಿಳೆಯರನ್ನು ಮತದಾನದತ್ತ ಸೆಳೆಯುವ ಸಾಧ್ಯತೆಗಳಿವೆ. ದೇಶದ ಮಹಿಳೆಯರ ಅಭಿವೃದ್ಧಿ ಆ ದೇಶದ ನಿಜವಾದ ಅಭಿವೃದ್ಧಿಯಾಗಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವುದು ಪ್ರಜಾಪ್ರಭುತ್ವಕ್ಕೆ ತಂದುಕೊಡುವ ಜಯವಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು