ಬಿಹಾರದ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲಿ ಅಶ್ರಫ್ ಫಾತ್ಮಿ ಅವರು ಜೆಡಿಯುಗೆ ರಾಜೀನಾಮೆ ನೀಡಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆ ಇತ್ತೀಚೆಗೆ ಮರು ಹೊಂದಾಣಿಕೆ ಮಾಡಿಕೊಂಡಿದ್ದರಿಂದ ‘ಆಘಾತ’ಕ್ಕೆ ಒಳಗಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ, ಆರ್‌ಜೆಡಿಯಲ್ಲಿದ್ದ ಫಾತ್ಮಿ ಅವರು ಮತ್ತೆ ಆರ್‌ಜೆಡಿಗೆ ಮರಳುವ ಸಾಧ್ಯತೆಗಳಿವೆ. ಆದರೆ, ಅವರು ಈ ಲೋಕಸಭಾ ಚುನಾವಣೆಯಲ್ಲಿ ತಮ್ಮ ಆಯ್ಕೆಯ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವುದಾಗಿ ಹೇಳಿದ್ದಾರೆ.
“1980ರ ದಶಕದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮತ್ತು ನಾನು ಒಟ್ಟಿಗೆ ಇದ್ದಾಗ ನಾನು ನನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದೆ. ಈ ನಡುವೆ, ಯಾದವ್ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದವು. ಆದರೂ ತೇಜಸ್ವಿ ಯಾದವ್ ಅವರನ್ನು ಆರ್‌ಜೆಡಿ ಅಧ್ಯಕ್ಷನಾಗಿ ನೇಮಿಸಿದ್ದು, ನನಗೆ ಸಂತೋಷವಾಗಿತ್ತು” ಎಂದು ಅವರು ಹೇಳಿದ್ದಾರೆ.
“ಬಿಹಾರದಲ್ಲಿ ಜೆಡಿಯು ಮತ್ತು ಆರ್‌ಜೆಡಿ ಸಮ್ಮಿಶ್ರ ಸರ್ಕಾರ ಉತ್ತಮವಾಗಿ ನಡೆಯುತ್ತಿತ್ತು. ನಿತೀಶ್ ಕುಮಾರ್ ಅವರು ಬಿಜೆಪಿಯ ಪ್ರಾಬಲ್ಯವನ್ನು ವಿರೋಧಿಸುವ ‘ಇಂಡಿಯಾ’ ನಾಯಕಯಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಆದರೆ, ಅವರು ಜನವರಿಯಲ್ಲಿ ಮತ್ತೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಅವರು ತಮ್ಮ ಈ ನಡೆಯ ಬಗ್ಗೆ ಸೂಕ್ತ ಕಾರಣವನ್ನೂ ನೀಡಲಿಲ್ಲ” ಎಂದು ಆರೋಪಿಸಿದ್ದಾರೆ.
“ಅಂದಿನಿಂದ ನಾನು ಮಾನಸಿಕ ಅಶಾಂತಿ ಅನುಭವಿಸುತ್ತಿದ್ದೆ. ನನ್ನ ಸ್ವಂತ ನೈತಿಕ ಮೌಲ್ಯಗಳಿಗೆ ನ್ಯಾಯ ಸಲ್ಲಿಸಲು, ನಾನು ಪಕ್ಷದ ಹುದ್ದೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದೇ ಇದ್ದಾಗ ಆರ್‌ಜೆಡಿ ತೊರೆದಿದ್ದೆ, ನಾನು ಈ ಬಾರಿ ಸ್ಪರ್ಧಿಸಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ನಾಲ್ಕು ಬಾರಿ ದರ್ಭಾಂಗಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಮಾಜಿ ಕೇಂದ್ರ ಸಚಿವರ ಫಾತ್ಮಿ ಅವರು ಈ ಬಾರಿ ಉತ್ತರ ಬಿಹಾರದ ಮಧುಬನಿಯಿಂದ ಸ್ಪರ್ಧಿಸಲು ಉದ್ದೇಶಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಜೆಡಿಯು ತೊರೆದ ನಂತರ ನಾನು ಲಾಲು ಅವರೊಂದಿಗೆ ಮಾತನಾಡಿಲ್ಲ. ಆದರೆ, ನಾನು ಅವರ ಪಕ್ಷದಲ್ಲಿ ಇಲ್ಲದಿದ್ದಾಗಲೂ ಅವರ ಆರೋಗ್ಯ ವಿಚಾರಿಸಲು ಭೇಟಿಯಾಗುತ್ತಿದ್ದೆ. ನಾವು ಮುಂದಿನ ದಿನಗಳಲ್ಲಿ ಭೇಟಿಯಾಗಬಹುದು. ಎಲ್ಲವನ್ನೂ ಸಾರ್ವಜನಿಕಗೊಳಿಸಲಾಗುವುದು” ಎಂದಿದ್ದಾರೆ.
ಫಾತ್ಮಿ ಅವರು ಪಕ್ಷ ತೊರೆದಿದ್ದನ್ನು ಜೆಡಿಯು “ದ್ರೋಹ’ ಎಂದು ಹೇಳಿದೆ.