ಗದಗ ಜಿಲ್ಲೆ ನರಗುಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನರಗುಂದ ವಿಧಾನಸಭಾ ಕ್ಷೇತ್ರದ ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಗಳಾದ ಸೋಮಶೇಖರ್ ಬಿರಾದರ್ ಅವರು ತಾಲೂಕಿನ ಲೋಕಸಭಾ ಚುನಾವಣೆಗಳ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಹುಣಶೀಕಟ್ಟಿ, ಕನಕಿಕೊಪ್ಪ ಹಾಗೂ ಚಿಕ್ಕನರಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿದ ಸೋಮಶೇಖರ್ ಬಿರಾದರ್ ಅವರು, ಮತಗಟ್ಟೆ ಕೇಂದ್ರಗಳು ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಹೊಂದಿರುವುದರ ಬಗ್ಗೆ ಪರಿಶೀಲಿಸಿದರು. ಹುಣಶೀಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 145 ಮತ್ತು 146 ಸಂಖ್ಯೆಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮತಗಟ್ಟೆ ಕೇಂದ್ರಗಳಲ್ಲಿ ಮತದಾರರು ಯಾವುದೇ ಸಮಸ್ಯೆಗಳಿಲ್ಲದೆ ನಿರ್ಭೀತರಾಗಿ ತಮ್ಮ ಮತ ಚಲಾಯಿಸಲು ಸಕಲ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮತಗಟ್ಟೆ ಕೇಂದ್ರದ ಮುಂದೆ ರ‍್ಯಾಂಪ್ ವ್ಯವಸ್ಥೆ, ಕೇಂದ್ರದ ಒಳಗಡೆ ಫ್ಯಾನ್ ಮತ್ತು ವಿದ್ಯುತ್ ಸಂಪರ್ಕದ ವ್ಯವಸ್ಥೆ, ಚುನಾವಣೆ ಕರ್ತವ್ಯಕ್ಕೆ ಬರುವ ಅಧಿಕಾರಿಗಳು ಉಳಿದುಕೊಳ್ಳಲು ಕೊಠಡಿಯ ವ್ಯವಸ್ಥೆ, ಮತಗಟ್ಟೆ ಕೇಂದ್ರದಲ್ಲಿ ಶೌಚಾಲಯ ವ್ಯವಸ್ಥೆ, ಶೌಚಾಲಯದಲ್ಲಿ ನೀರಿನ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪರಿಶೀಲನೆ ವೇಳೆ ಜಗಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಕೇಂದ್ರ 144ರ ಬಾಗಿಲು ದುರಸ್ಥಿಗೊಂಡಿರುವುದು ಕಂಡುಬಂದಿತು. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಶೀಘ್ರದಲ್ಲೇ ಬಾಗಿಲನ್ನು ಬದಲಾಯಿಸಿ ಸರಿಪಡಿಸುವಂತೆ ಸೂಚಿಸಿದರು.
ಚುನಾವಣೆ ಕರ್ತವ್ಯದ ಜತೆಗೆ ಶಾಲಾ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಸ್ವತಃ ಶಾಲೆಯಲ್ಲಿ ಬಿಸಿಯೂಟ ಸವಿಯುವ ಮೂಲಕ ಪರಿಶೀಲಿಸಿದರು. ಚಿಕ್ಕನರಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಹೈಸ್ಕೂಲ್ ಶಾಲೆಯಲ್ಲಿ ಮಕ್ಕಳ ಜೊತೆ ಇಒ ಸೋಮಶೇಖರ್ ಬಿರಾದರ್ ಅವರು ಬಿಸಿಯೂಟ ಸವಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗೆ ಮೋಸ; ರೈತ ಸಂಘಟನೆ ಆರೋಪ
ಈ ವೇಳೆ ಅಡುಗೆ ಕೋಣೆಗೆ ತೆರಳಿ ಅಡುಗೆ ಸಾಮಾಗ್ರಿಗಳನ್ನು ಪರಿಶೀಲಿಸಿ ಅಡುಗೆಗೆ ಬಳಸುವ ತರಕಾರಿ, ಬೇಳೆ ಕಾಳುಗಳ ಗುಣಮಟ್ಟವನ್ನು ಪರಿಶೀಲಿಸಿದರು. ಮಕ್ಕಳಿಗೆ ನೀಡುವ ಅಡುಗೆಯಲ್ಲಿ ತರಕಾರಿಗಳನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಅಲ್ಲದೆ ಸರ್ಕಾರ ಮಕ್ಕಳ ಕಲಿಕೆಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದೆ. ಸರ್ಕಾರದ ಈ ಸೌಲಭ್ಯಗಳನ್ನು ಶಾಲಾ ಮಕ್ಕಳ ಸದುಪಯೋಗಪಡಿಸಿಕೊಂಡು ಕಲಿಕೆಯಲ್ಲಿ ಮೇಲುಗೈ ಸಾಧಿಸಬೇಕೆಂದು ಮಾರ್ಗದರ್ಶನ ಮಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಇದ್ದರು.
