ಸದ್ಯ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. 1,124 ಕೇಂದ್ರಗಳಲ್ಲಿ ಈ ಬಾರಿ 6,98,624 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮಾರ್ಚ್ 21ರಂದು ತಮಿಳು, ತೆಲಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಫ್ರೆಂಚ್ ಭಾಷೆಗಳಿಗೆ ಪರೀಕ್ಷೆ ನಡೆಯುತ್ತಿದೆ. ಇದರಲ್ಲಿ ವಿಶೇಷವೆಂದರೆ, ಕೊಪ್ಪಳದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಮೂವರೇ ವಿದ್ಯಾರ್ಥಿಗಳು ಹಾಜರಾಗಿದ್ದು, 20 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೊಪ್ಪಳದ ಈ ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಉರ್ದು ಪರೀಕ್ಷೆ ಬರೆದರೆ, ಓರ್ವ ವಿದ್ಯಾರ್ಥಿನಿ ಸಂಸ್ಕೃತ ಪರೀಕ್ಷೆ ಬರೆಯಲು ಹಾಜರಾಗಿದ್ದಾರೆ.
ಮೂವರು ವಿದ್ಯಾರ್ಥಿಗಳಿಗೆ ಇಬ್ಬರು ರೂಮ್ ಸೂಪರ್‌ವೈಸರ್, ಚೀಫ್ ಕಸ್ಟೋಡಿಯನ್, ಜಂಟಿ ಅಧೀಕ್ಷಕರು, ಆಫೀಸ್ ಸುಪರಿಡೆಂಟ್, ಓರ್ವ ಉತ್ತರ ಪತ್ರಿಕೆ ಪಾಲಕರು, ಓರ್ವ ಕಚೇರಿ ಸಹಾಯಕ, ಓರ್ವ ಟೈಪಿಸ್ಟ್, ಓರ್ವ ಜಾಗೃತದಳ ಸಿಬ್ಬಂದಿ, ಓರ್ವ ಗ್ರೂಪ್ ಡಿ ಸಿಬ್ಬಂದಿ ಸೇರಿದಂತೆ ಇಪ್ಪತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಕೂಡಾ ಪರೀಕ್ಷಾ ಕೇಂದ್ರದಲ್ಲಿ ನಿಯೋಜಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | 85 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಅಂಚೆ ಮತದಾನಕ್ಕೆ ಅವಕಾಶ
ಪರೀಕ್ಷೆ ಎಷ್ಟು ಜನ ವಿದ್ಯಾರ್ಥಿಗಳು ಬರೆದರೂ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. ಇನ್ನುಳಿದ ಪರೀಕ್ಷೆಗಳಂತೆ ಈ ಪರೀಕ್ಷೆಗಳಲ್ಲಿ ನಿಯಮ ಪಾಲನೆ ಮಾಡುತ್ತೇವೆ. ಎಲ್ಲ ಸಿಬ್ಬಂದಿ ತಮ್ಮ ತಮ್ಮ ಕೆಲಸ ನಿರ್ವಹಣೆ ಮಾಡುತ್ತಾರೆ ಎಂದು ಸಿಬ್ಬಂದಿ ಹೇಳುತ್ತಾರೆ.
ಮಾರ್ಚ್ 21ರಂದು ತಮಿಳು, ತೆಲಗು ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಫ್ರೆಂಚ್ ಭಾಷೆಗಳಿಗೆ ಪರೀಕ್ಷೆ ಇನ್ನೂ ನಡೆಯುತ್ತಿದೆ.